
ಮದ್ದೂರು (ಮಾ.8) : ಗೃಹಿಣಿಯನ್ನು ಮರು ವಿವಾಹವಾಗುವುದಾಗಿ ನಂಬಿಸಿ ಆಕೆಯಿಂದ ಲಕ್ಷಾಂತರ ರು. ಪಡೆದು ವಂಚಿಸಿದ್ದ ಯುವಕ ತನ್ನ ಸ್ನೇಹಿತರೊಂದಿಗೆ ಸೇರಿ ಗೃಹಿಣಿ ಮತ್ತು ಸಹೋದರನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿರುವ ಘಟನೆ ಪಟ್ಟಣದ ಎಲ್ಐಸಿ ಕಚೇರಿ ಹಿಂಭಾಗದಲ್ಲಿ ನಡೆದು ತಡವಾಗಿ ಬೆಳಕಿಗೆ ಬಂದಿದೆ.
ಘಟನೆಯಲ್ಲಿ ತುಮಕೂರು ಜಿಲ್ಲೆ ತುರುವೇಕೆರೆ ಪಟ್ಟಣದ ಪವನ್ (24) ಹಾಗೂ ಕುಣಿಗಲ್ ತಾಲೂಕು ಹುಲಿಯೂರುದುರ್ಗ ಹೋಬಳಿಯ ಕೆಬ್ಬಳ್ಳಿ ಗ್ರಾಮದ ತೇಜಸ್ವಿನಿ (25) ಗಾಯಗೊಂಡಿದ್ದಾರೆ. ಈ ಪೈಕಿ ತೀವ್ರವಾಗಿ ಗಾಯಗೊಂಡಿರುವ ಪವನ್ ನನ್ನು ಮದ್ದೂರು, ಮಂಡ್ಯ, ಆಸ್ಪತ್ರೆ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಕೆಂಪೇಗೌಡ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪರಿಸ್ಥಿತಿ ಗಂಭೀರವಾಗಿದೆ. ತೇಜಸ್ವಿನಿ ಮದ್ದೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಘಟನೆ ನಂತರ ತಲೆಮರೆಸಿಕೊಂಡಿದ್ದ ಆರೋಪಿಗಳಾದ ಮದ್ದೂರು ತಾಲೂಕು ನಿಡಘಟ್ಟ ಗ್ರಾಮದ ಯೋಗೇಶ್ ಅಲಿಯಾಸ್ ಸಿಂಹ, ಮಳವಳ್ಳಿಯ ಅಭಿ ಹಾಗೂ ಸಲ್ಮಾನ್ ರನ್ನು ಪಿಎಸ್ಐ ಮಂಜುನಾಥ್, ಅಪರಾಧ ವಿಭಾಗದ ಸಿಬ್ಬಂದಿ ಕುಮಾರಸ್ವಾಮಿ, ವಿಷ್ಣುವರ್ಧನ್ ಹಾಗೂ ಪ್ರಸನ್ನ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಮಳವಳ್ಳಿಯಲ್ಲಿ ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರ ವಿರುದ್ಧ ಬಿ ಎನ್ಎಸ್ ಕಾಯ್ದೆ ಅನ್ವಯ 109, 3 29, 352, 118, 351 ರ ಅನ್ವಯ ಪ್ರಕರಣ ದಾಖಲು ಮಾಡಿಕೊಂಡ ನಂತರ ಪಟ್ಟಣದ ಜೆಎಂಎಫ್ ಸಿ, ನ್ಯಾಯಾಲಯದಲ್ಲಿ ಹಾಜರುಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ: ಹೈಕೋರ್ಟ್ ನ್ಯಾಯಾಧಿಶರ ಹೆಸರಲ್ಲಿ ನಕಲಿ ಆದೇಶ, ₹1.53 ಕೋಟಿ ವಂಚನೆ, ಆರೋಪಿಗಳು ಅರೆಸ್ಟ್
ಏನಿದು ಘಟನೆ:
ಹಲ್ಲೆಗೊಳಗಾಗಿರುವ ತೇಜಸ್ವಿನಿ ಈ ಹಿಂದೆ ಬೆಂಗಳೂರು ಕಾರು ಚಾಲಕ ದೀಪು ರಾವ್ ಎಂಬುವವರನ್ನು ವಿವಾಹವಾಗಿದ್ದರು. ನಂತರ ಗಂಡನನ್ನು ತೊರೆದಿದ್ದ ಈಕೆ ಕಳೆದ ಒಂದು ವರ್ಷದಿಂದ ಯೋಗೇಶ್‌ನನ್ನು ಪರಿಚಯ ಮಾಡಿಕೊಂಡಿದ್ದರು. ನಂತರ ಯೋಗೇಶ್ ತೇಜಸ್ವಿನಿಯನ್ನು ವಿವಾಹ ಮಾಡಿಕೊಳ್ಳುವುದಾಗಿ ನಂಬಿಸಿ ಆಕೆಯಿಂದ 2 ಲಕ್ಷ ರು. ಪಡೆದು ಬೇರೊಂದು ಹುಡುಗಿಯ ಜೊತೆ ವಿವಾಹವಾಗಿದ್ದನು.
ವಿವಾಹವಾಗದೆ ಕೈ ಕೊಟ್ಟ ಹಿನ್ನೆಲೆಯಲ್ಲಿ ತೇಜಸ್ವಿನಿ ಹಣ ವಾಪಸ್ ನೀಡುವಂತೆ ಯೋಗೇಶ್‌ನನ್ನು ಒತ್ತಾಯಿಸಿದ್ದಾರೆ. ಹಣದ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಾಗ ಮೂವರು ಆರೋಪಿಗಳು ಕಳೆದ ಮಾರ್ಚ್ 3ರಂದು ಸಂಜೆ ತೇಜಸ್ವಿನಿ ಮನೆಗೆ ನುಗ್ಗಿ ದಾಂದಲೆ ನಡೆಸಿ ಆಕೆ ಮತ್ತು ಆಕೆ ಸಹೋದರ ಪವನ್ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಕೊಲೆ ಪ್ರಯತ್ನ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ