
ಚೆನ್ನೈ: ತಮಿಳುನಾಡಿನ ಚೆಂಗಲ್‌ಪಟ್ಟು ಜಿಲ್ಲೆಯಲ್ಲಿ ಹತ್ತು ವರ್ಷದ ಮಗುವೊಂದು ಮೃತಪಟ್ಟಿತ್ತು. ವಾರದ ಹಿಂದೆ ಅಂತ್ಯಕ್ರಿಯೆ ನಡೆಸಿ ಮೃತದೇಹವನ್ನು ಹೂಳಲಾಗಿತ್ತು. ಆದರೆ ಈಗ ಮಗುವಿನ ತಲೆ ಕಾಣೆಯಾಗಿದೆ. ಮಗುವಿನ ದೇಹವನ್ನು ಬಿಟ್ಟು ತಲೆಯನ್ನು ಕತ್ತರಿಸಿ ಕೊಂಡೊಯ್ಯಲಾಗಿದೆ. ಇದರಿಂದ ಗ್ರಾಮಸ್ಥರು ಗಾಬರಿಗೊಂಡಿದ್ದು ಪೊಲೀಸ್ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಈ ಘಟನೆ ಮಂಗಳವಾರ ನಡೆದಿದೆ ಎನ್ನಲಾಗಿದೆ.
ಸಾವನ್ನಪ್ಪಿದ ಮಗು ಕೃತಿಕಾ ಆರನೇ ತರಗತಿ ಓದುತ್ತಿದ್ದಳು. ಅಕ್ಟೋಬರ್ 5ರಂದು ಎಲೆಕ್ಟ್ರಿಕ್ ಪೋಲ್ ಮೈಮೇಲೆ ಬಿದ್ದು ಕೃತಿಕಾ ಗಂಭೀರವಾಗಿ ಗಾಯಗೊಂಡಿದ್ದಳು. ಮನೆಯ ಹೊರಗೆ ಆಟವಾಡುತ್ತಿದ್ದ ವೇಳೆ ವಿದ್ಯುತ್ ಕಂಬ ಆಕೆಯ ಮೇಲೆ ಅನಿರೀಕ್ಷಿತವಾಗಿ ಬಿದ್ದಿತ್ತು. ಒಂಭತ್ತು ದಿನಗಳ ಕಾಲ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಕೃತಿಕಾ ಅಕ್ಟೋಬರ್ 14ರಂದು ಸಾವನ್ನಪ್ಪಿದಳು.
ಅಕ್ಟೋಬರ್ 15ರಂದು ಹಿಂದೂ ವಿಧಿವಿಧಾನದಂತೆ ಆಕೆಯ ಅಂತ್ಯಕ್ರಿಯೆ ನಡೆಸಿ ಆಕೆ ಮೃತದೇಹವನ್ನು ಪೋಷಕರು ಹೂತಿದ್ದರು. ಅಂತ್ಯಕ್ರಿಯೆಯಾಗಿ ಹತ್ತು ದಿನಗಳ ನಂತರ ಆಕೆಯ ಪೋಷಕರಾದ ಪಾಂಡಿಯನ್ ಮತ್ತು ನಾದಿಯಾ ಸಮಾಧಿಗೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಹೂತಿರುವ ಜಾಗವನ್ನು ಯಾರೋ ಅಗೆದಿರುವುದು ಪತ್ತೆಯಾಗಿದೆ. ಇದರಿಂದ ಸಂಶಯಗೊಂಡ ಕುಟುಂಬ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಳ್ಳವನ್ನು ಮತ್ತೆ ತೆರೆದು ನೋಡಿದಾಗ ಮಗುವಿನ ತಲೆ ಕಾಣೆಯಾಗಿರುವುದು ಪತ್ತೆಯಾಗಿದೆ.
ಇದನ್ನೂ ಓದಿ: Vijayapura: ಮಹಾನಗರ ಪಾಲಿಕೆ ಚುನಾವಣೆ ನಡುವೆ ಮಾಟಮಂತ್ರದ ಕಾಟ!
ದೂರು ದಾಖಲಿಸಿಕೊಂಡ ಪೊಲೀಸರು, ಜಿಲ್ಲಾ ವೈದ್ಯಕೀಯ ಇಲಾಖೆಯ ಅಧಿಕಾರಿಗಳ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಸಮಾಧಿಯನ್ನು ಮತ್ತೆ ತೆಗೆದಿದ್ದಾರೆ. ಮಗುವಿನ ಶರೀರ ಮಾತ್ರ ಇದ್ದು ತಲೆ ಕಾಣೆಯಾಗಿರುವುದು ಕಂಡುಬಂದಿದೆ. ಚಿತ್ತಮೂರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಹುಡುಕಾಟ ಆರಂಭಿಸಿದ್ದಾರೆ. ಕೃತಿಕಾ ಕುಟುಂಬಕ್ಕೆ ಆಗದವರು ಮಗುವಿನ ಆತ್ಮಕ್ಕೆ ಶಾಂತಿ ಸಿಗಬಾರದು ಎಂಬ ಕಾರಣಕ್ಕೆ ಈ ರೀತಿ ಮಾಡಿದ್ದಾರ ಅಥವಾ ಮಾಟ ಮಂತ್ರ ಪ್ರಯೋಗಕ್ಕೆ ತಲೆಯನ್ನು ಬಳಸಿಕೊಳ್ಳಲು ಕತ್ತರಿಸಿಕೊಂಡು ಹೋಗಿದ್ದಾರ ಎಂಬುದು ಇನ್ನೂ ಪತ್ತೆಯಾಗಿಲ್ಲ.
ಇದನ್ನೂ ಓದಿ: ಮಾಟಮಂತ್ರ ತರೋ ಆಪತ್ತು ಒಂದೆರಡಲ್ಲ, ಅದರಿಂದ ಪಾರಾಗೋಕೆ ಇಲ್ಲಿವೆ ಮಾರ್ಗಗಳು..
ಘಟನಾ ಸ್ಥಳದಲ್ಲಿ ಗ್ಲೌಸ್ ಮತ್ತು ಟಾರ್ಚ್ ಪತ್ತೆಯಾಗಿದ್ದು, ಇದು ಮನುಷ್ಯರದ್ದೇ ಕೆಲಸ ಎಂದು ತಿಳಿದುಬಂದಿದೆ. ಪ್ರಾಣಿಗಳು ತಲೆ ಎಳೆದೊಯ್ದಿದ್ದರೆ ದೇಹವೂ ಚೆಲ್ಲಾಪಿಲ್ಲಿಯಾಗಬೇಕಿತ್ತು. ಮತ್ತು ಸ್ಥಳದಲ್ಲಿರುವ ಗ್ಲೌಸ್ ಇದುವರೆಗೂ ಸಿಕ್ಕ ದೊಡ್ಡ ಕ್ಲೂ ಆಗಿದ್ದು ಪೊಲೀಸರು ಆ ಗ್ಲೌಸ್ ಮತ್ತು ಟಾರ್ಚ್ ಮೂಲವನ್ನು ಹುಡುಕುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ