
ಹಾವೇರಿ (ಡಿ.10): ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದಲ್ಲಿ ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪದ ಮೇಲೆ ಓರ್ವ ಶಿಕ್ಷಕನಿಗೆ ಸ್ಥಳೀಯರು ಮತ್ತು ಪೋಷಕರು ಧರ್ಮದೇಟು ನೀಡಿ, ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ನಡೆದಿದೆ.
ಸವಣೂರಿನ ಸರ್ಕಾರಿ ಉರ್ದು ಉನ್ನತೀಕರಿಸಿದ ಶಾಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಶಾಲೆಯ ಶಿಕ್ಷಕ ಜಗದೀಶ್ ವಿರುದ್ಧ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಶಿಕ್ಷಕನ ಈ ಹೇಯ ಕೃತ್ಯ ತಿಳಿದು ತೀವ್ರ ಆಕ್ರೋಶಗೊಂಡ ಪೋಷಕರು ಮತ್ತು ಸ್ಥಳೀಯ ಸಾರ್ವಜನಿಕರು ಶಾಲಾ ಆವರಣಕ್ಕೆ ಧಾವಿಸಿದ್ದಾರೆ.
ಆರೋಪಿ ಶಿಕ್ಷಕ ಜಗದೀಶ್‌ನನ್ನು ಹಿಡಿದು ತೀವ್ರ ತರಾಟೆಗೆ ತೆಗೆದುಕೊಂಡಿದ್ದಲ್ಲದೇ ಕಾಮುಕ ಶಿಕ್ಷಕನಿಗೆ ಧರ್ಮದೇಟು ನೀಡಿದ್ದಾರೆ. ಆಕ್ರೋಶ ಭರಿತರಾದ ಪೋಷಕರು ಮತ್ತು ಸ್ಥಳೀಯರು, ಶಾಲೆ ಆವರಣದಿಂದಲೇ ಶಿಕ್ಷಕನಿಗೆ ಹೊಡೆಯುತ್ತಾ, ಪಟ್ಟಣದಲ್ಲಿ ಮೆರವಣಿಗೆ ಮಾಡಿ, ಬಳಿಕ ಸವಣೂರು ಪೊಲೀಸ್ ಠಾಣೆಯವರೆಗೆ ಕರೆದುಕೊಂಡು ಬಂದಿದ್ದಾರೆ.
ಶಿಕ್ಷಕ ಜಗದೀಶಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ ಪೋಷಕರು ಮತ್ತು ಸಾರ್ವಜನಿಕರು, ಧರ್ಮದೇಟು ನೀಡಿದ ನಂತರ ಆರೋಪಿಯನ್ನು ಸವಣೂರು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಶಿಕ್ಷಕನಿಗೆ ಚಪ್ಪಲಿಹಾರ ಹಾಕಿ ಊರೆಲ್ಲ ಮೆರವಣಿಗೆ!
ಚಪ್ಪಲಿ ಹಾರ ಹಾಕಿ ಥಳಿತ ನೀಡಿ, ಊರ ಹತ್ತಿರದಲ್ಲಿ ಮೆರವಣಿಗೆ ಮಾಡಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಈ ಕುರಿತು ಅಂಜುಮನ್ ಕಮಿಟಿ ಮುಖಂಡ ಡಾ. ಸಲೀಂ ಅವರು ಮಾತನಾಡಿ, ಶಿಕ್ಷಕ ಜಗದೀಶ್ ಅವರ ವರ್ತನೆಯಿಂದ ಸಾರ್ವಜನಿಕರು ಬೇಸತ್ತು ಈ ಕ್ರಮ ಕೈಗೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಒಂದು ಬಾಲಕಿಗೆ ಹೊಟ್ಟೆನೋವು ಮತ್ತು ಜ್ವರ ಬಂದಾಗ ವಿಚಾರಿಸಿದಾಗ ಆಕೆಯ ಮೇಲೆ ಶಿಕ್ಷಕ ದೌರ್ಜನ್ಯ ಎಸಗಿದ್ದೇ ಎನ್ನುವ ಸಂಗತಿ ಬಯಲಾಯಿತು. ಮುಂದೆ ವಿಚಾರಿಸಿದಾಗ ಒಟ್ಟು ಏಳು ಬಾಲಕಿಯರ ಮೇಲೆ ಆತ ಲೈಂಗಿಕ ದೌರ್ಜನ್ಯ ಮಾಡಿರುವುದು ದೃಢಪಟ್ಟಿದೆ. ಈ ಬಗ್ಗೆ ಪ್ರಶ್ನಿಸಿದಾಗ ಆತ ‘ನಾನು ಒಬ್ಬಳ ಮೇಲೆ ಮಾತ್ರ ಮಾಡಿದ್ದೇನೆ, ಏಳು ಜನರ ಮೇಲಲ್ಲ’ ಎಂದು ಒಪ್ಪಿಕೊಂಡಿದ್ದಾನೆ. ಇದರಿಂದ ಜನರು ರೊಚ್ಚಿಗೆದ್ದು ಹೊಡೆದು ಮೆರವಣಿಗೆ ಮಾಡಿದ್ದಾರೆ' ಎಂದು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಕ್ಸೋ ಕಾಯ್ದೆಯಡಿ ಕಡ್ಡಾಯವಾಗಿ ಎಫ್‌ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿರುವ ಡಾ. ಸಲೀಂ ಅವರು, ಈಗಾಗಲೇ ಇಂದು ಮಧ್ಯಾಹ್ನ ಶಾಲಾ ಹೆಡ್‌ಮಾಸ್ಟರ್ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಬಾಲಕಿಯರ ಪೋಷಕರು ಯಾರೂ ದೂರು ನೀಡುತ್ತಿಲ್ಲ. ಆದರೆ ಇಲಾಖೆಯವರೇ ಸ್ವಯಂ ಪ್ರೇರಿತವಾಗಿ ಶಿಕ್ಷಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ