
ಬೆಂಗಳೂರು: ಆತ ಸಣ್ಣಪುಟ್ಟ ಅಂಗಡಿಗಳಿಗೆ ಗುಟ್ಕಾ ಹಾಗೂ ಪಾನ್ ಮಸಾಲಾ ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದ. ಆದರೆ ಒಂದು ದಿನ ಆತ ಇದೇ ರೀತಿ ಗುಟ್ಕಾ ಹಾಗೂ ಪಾನ್ ಮಸಾಲಾ ತುಂಬಿಕೊಂಡು ಕಾರಿನಲ್ಲಿ ಹೋಗುತ್ತಿದ್ದಾಗ ರೌಡಿಗಳ ಗ್ಯಾಂಗ್ ಅಡ್ಡಗಟ್ಟಿ ವ್ಯಾಪಾರಿಯನ್ನು ಕಿಡ್ನಾಪ್ ಮಾಡಿ ಆತನಲ್ಲಿದ್ದ 2 ಲಕ್ಷ ನಗದು ಎಗರಿಸಿದ್ದಾರೆ. ಈ ಪ್ರಕರಣವೀಗ ಬೆಂಗಳೂರನ್ನು ಬೆಚ್ಚಿ ಬೀಳಿಸಿದೆ. ಮಾಜಿ ರೌಡಿಶೀಟರ್ ಹಾಗೂ ಅವನ ಗ್ಯಾಂಗ್ ನಡೆಸಿದ ಕಿಡ್ನ್ಯಾಪ್ ಮತ್ತು ನೋಟೋರಿಯಸ್ ದರೋಡೆ ಪ್ರಕರಣ ಬೆಂಗಳೂರು ಪಶ್ಚಿಮ ಭಾಗದಲ್ಲಿ ಆತಂಕ ಸೃಷ್ಟಿಸಿದೆ. ಗುಟ್ಕಾ ಹಾಗೂ ಪಾನ್ ಮಸಾಲಾ ಸಾಗಿಸುತ್ತಿದ್ದ ಕಾರನ್ನು ಅಡ್ಡಗಟ್ಟಿ, ಹಲ್ಲೆ ನಡೆಸಿ, ಬಲವಂತವಾಗಿ ಕಿಡ್ನ್ಯಾಪ್ ಮಾಡಿ ನಗದು ದರೋಡೆ ಮಾಡಿದ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಇಎಲ್ ಲೇಔಟ್‌ನ ಪೈಪ್‌ಲೈನ್ ಬಳಿ ನಡೆದಿದೆ.
ಸಣ್ಣ ಅಂಗಡಿಗಳಿಗೆ ಗುಟ್ಕಾ ಸರಬರಾಜು ಮಾಡುವ ವ್ಯವಹಾರ ನಡೆಸುತ್ತಿದ್ದ ಮುಕೇಶ್ ಭಾಯ್ ಹಾಗೂ ಜಮಾಭಾಯ್ ಅವರು ಸೋಮವಾರ ರಾತ್ರಿ ಸುಮಾರು 11.30ರ ವೇಳೆ ಕಾರಿನಲ್ಲಿ ಗುಟ್ಕಾ ತುಂಬಿಕೊಂಡು ಮನೆ ಕಡೆ ಹೊರಟಿದ್ದರು. ಕಾರಿನಲ್ಲಿ ಸುಮಾರು ₹3.5 ಲಕ್ಷ ಮೌಲ್ಯದ ಗುಟ್ಕಾ ಸಾಗಿಸುತ್ತಿದ್ದ ವೇಳೆ, ಹಠಾತ್ತನೆ ಸ್ವಿಫ್ಟ್ ಕಾರಿನಲ್ಲಿ ಬಂದ ಐದಾರು ಮಂದಿ ದುಷ್ಕರ್ಮಿಗಳು ಮುಕೇಶ್ ಭಾಯ್ ಅವರ ಕಾರನ್ನು ಅಡ್ಡಗಟ್ಟಿದ್ದಾರೆ.
ದುಷ್ಕರ್ಮಿಗಳು ಸೈಜ್ ಕಲ್ಲು ಬಳಸಿ ಕಾರಿನ ಗ್ಲಾಸ್‌ಗಳನ್ನು ಒಡೆದು ಭೀಕರವಾಗಿ ಪುಂಡಾಟ ನಡೆಸಿದ್ದಾರೆ. ಬಳಿಕ ಮುಕೇಶ್ ಭಾಯ್ ಹಾಗೂ ಜಮಾಭಾಯ್ ಮೇಲೆ ಹಲ್ಲೆ ನಡೆಸಿ, ಬಲವಂತವಾಗಿ ಅವರನ್ನು ತಮ್ಮ ಕಾರಿಗೆ ತುಂಬಿಕೊಂಡು ಕಿಡ್ನ್ಯಾಪ್ ಮಾಡಿದ್ದಾರೆ. ನಂತರ ಶೆಲ್ ಪೆಟ್ರೋಲ್ ಬಂಕ್ ಬಳಿ ಕಾರು ನಿಲ್ಲಿಸಿ, ಅವರಿಂದ ₹2 ಲಕ್ಷ ನಗದು ದರೋಡೆ ಮಾಡಲಾಗಿದೆ.
ದರೋಡೆ ಬಳಿಕ ಜೀವ ಬೆದರಿಕೆ ಹಾಕಿ ಇಬ್ಬರನ್ನು ಅಲ್ಲೇ ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಈ ಸಂಬಂಧ ಮುಕೇಶ್ ಭಾಯ್ ಅವರು ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ತನಿಖೆ ಆರಂಭಿಸಿದ್ದಾರೆ. ಪೊಲೀಸರ ಕಾರ್ಯಾಚರಣೆಯಲ್ಲಿ ಈ ಕೃತ್ಯಕ್ಕೆ ಸಂಬಂಧಿಸಿದಂತೆ ಮಾಗಡಿ ಮಂಜು ಅಲಿಯಾಸ್ ಮಂಜು ಎಂಬ ಮಾಜಿ ರೌಡಿಶೀಟರ್ ಅನ್ನು ಬಂಧಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ, ದರೋಡೆ ಗ್ಯಾಂಗ್ ಲೀಡರ್ ಚಂದನ್ ಎಂಬಾತನ ಅಣತಿಯಂತೆ ಈ ದರೋಡೆ ನಡೆದಿರುವುದು ಬಹಿರಂಗವಾಗಿದೆ.
ಪ್ರಕರಣದಲ್ಲಿ ಭಾಗಿಯಾಗಿರುವ ದರೋಡೆ ಗ್ಯಾಂಗ್ ಲೀಡರ್ ಚಂದನ್ ಸೇರಿದಂತೆ ರಾಜೇಶ್, ಪುಟ್ಟ, ಕಿರಣ್ ಹಾಗೂ ಇತರ ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ಗ್ಯಾಂಗ್ ಹಿಂದೆ ಕೂಡ ಇದೇ ರೀತಿಯ ದರೋಡೆಗಳಲ್ಲಿ ತೊಡಗಿಕೊಂಡಿದ್ದು, ಗ್ಯಾಸ್ ವಾಹನಗಳು, ಅಕ್ಕಿ ಸಾಗಣೆ ವಾಹನಗಳನ್ನು ಅಡ್ಡಗಟ್ಟಿ ಸುಲಿಗೆ ನಡೆಸಿರುವ ಆರೋಪಗಳು ಇವರ ಮೇಲೆ ಇದೆ.
ಆರೋಪಿಗಳ ವಿರುದ್ಧ ಬೆಂಗಳೂರು ನಗರದಲ್ಲಿ ಈಗಾಗಲೇ ಏಳು–ಎಂಟು ಕಡೆ ಎಫ್‌ಐಆರ್‌ಗಳು ದಾಖಲಾಗಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ