ಮಂಗಳೂರು: ಇಬ್ಬರು ರೌಡಿ ಶೀಟರ್‌ಗಳ ಮೇಲೆ ಗೂಂಡಾ ಕಾಯ್ದೆ

By Kannadaprabha News  |  First Published Jul 22, 2022, 2:00 AM IST

ಸಮಾಜಘಾತುಕ ಶಕ್ತಿಗಳನ್ನು ನಿಯಂತ್ರಿಸುವ ಹಾಗೂ ಸಮಾಜದಲ್ಲಿ ಶಾಂತಿ ಕಾಪಾಡುವ ದೃಷ್ಟಿಯಿಂದ ಈ ಇಬ್ಬರು ರೌಡಿಶೀಟರ್‌ಗಳ ಮೇಲೆ ಮೇಲೆ ಗೂಂಡಾ ಕಾಯ್ದೆ ಹಾಕಲಾಗಿದೆ


ಮಂಗಳೂರು(ಜು.22):  ದರೋಡೆ, ಕೊಲೆ ಯತ್ನ, ಹಲ್ಲೆ, ಅಪರಾಧ ಒಳಸಂಚು ಸೇರಿ ಹಲವು ಪ್ರಕರಣಗಳಿದ್ದು ಅಪಾಯಕಾರಿಯಾಗಿದ್ದ ಇಬ್ಬರು ಕುಖ್ಯಾತ ಆರೋಪಿಗಳ ಮೇಲೆ ಮಂಗಳೂರು ನಗರ ಪೊಲೀಸ್‌ ಗೂಂಡಾ ಕಾಯ್ದೆ ವಿಧಿಸಿದೆ. ಕೆಲ ಸಮಯದ ಹಿಂದೆ ವೆಲೆನ್ಸಿಯಾ ಜಂಕ್ಷನ್‌ ಬಳಿ ಸಾರ್ವಜನಿಕವಾಗಿ ಭಯದ ವಾತಾರವಣ ಸೃಷ್ಟಿಸಿದ್ದಲ್ಲದೆ, ಕೋಳಿ ಅಂಗಡಿ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣದ ಆರೋಪಿಗಳಿವರು. ಜಲ್ಲಿಗುಡ್ಡೆ ಬಜಾಲ್‌ ನಿವಾಸಿ ಪ್ರೀತಂ ಪೂಜಾರಿ ಯಾನೆ ಪ್ರೀತೇಶ್‌ (26) ಹಾಗೂ ಎಕ್ಕೂರು ನಿವಾಸಿ ಧೀರಜ್‌ ಕುಮಾರ್‌ ಯಾನೆ ಧೀರು (27) ಗೂಂಡಾ ಕಾಯ್ದೆ ದಾಖಲಾದವರು. ಇವರಿಬ್ಬರ ವಿರುದ್ಧ ಈಗಾಗಲೇ ಕಂಕನಾಡಿ ಪೊಲೀಸ್‌ ಠಾಣೆಯಲ್ಲಿ ರೌಡಿ ಶೀಟರ್‌ ದಾಖಲಾಗಿದೆ.

ಧೀರಜ್‌ ಎಂಬಾತ 2015ರಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಗುರುತಿಸಿಕೊಂಡಿದ್ದು, ಆಟೋ ರಿಕ್ಷಾ ಚಾಲನೆ ಮಾಡುವುದಾಗಿ ಹೇಳಿಕೊಡಿದ್ದರೂ ಯಾವುದೇ ನಿಖರ ಉದ್ಯೋಗ ಹೊಂದಿಲ್ಲ. ಈತನ ಮೇಲೆ ದರೋಡೆಗೆ ತಯಾರಿ, ಕೊಲೆಗೆ ಯತ್ನ, ಅಪಹರಣ ಮತ್ತು ಕೊಲೆಗೆ ಯತ್ನ, ಕೊಲೆಗೆ ಯತ್ನ ಮತ್ತು ಗಂಭೀರ ಗಾಯ, ಅಪರಾಧ ಒಳಸಂಚು, ಹಲ್ಲೆ, ದರೋಡೆ ಮತುತ ಹಲ್ಲೆ ಸೇರಿ ಒಟ್ಟು 12 ಪ್ರಕರಣಗಳು ದಾಖಲಾಗಿವೆ. ಈತ ಹಾಗೂ ಈತನ ಸಹಕರರು ಸೇರಿದಂತೆ ಸುಮಾರು 66 ಮಂದಿಯ ಗ್ಯಾಂಗ್‌ ರಚಿಸಿಕೊಂಡು ಸುಮಾರು 34ಕ್ಕೂ ಅಧಿಕ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ.

Tap to resize

Latest Videos

ನಾನು ಬೇರೆ ಹುಡ್ಗಿ ಮದ್ವೆ ಆಗ್ಬಹುದು, ಆದ್ರೆ ಆಕೆ ಬೇರೆಯವರನ್ನ ನೋಡೋ ಹಾಗಿಲ್ಲ!

ಆರೋಪಿ ಪ್ರೀತಂ ವಿರುದ್ಧವೂ ಜೀವ ಬೆದರಿಕೆ ಮತ್ತು ಗಾಂಜಾ ಸೇವೆ, ಕೊಲೆಗೆ ಯತ್ನ ಮತ್ತು ಬೆದರಿಕೆ, ಅಪಹರಣ ಮತ್ತು ಬೆದರಿಕೆ, ಬೆದರಿಕೆ ಮತ್ತು ಹಲ್ಲೆ, ಹಲ್ಲೆ ಮತ್ತು ಗಾಂಜಾ ಸೇವನೆ ಹಾಗೂ ಅಕ್ರಮ ಕೂಟ ಸೇರಿ ದರೋಡೆ, ಕೊಲೆ ಯತ್ನ ಮತ್ತು ಗಾಂಜಾ ಸೇವನೆ, ಕೊಲೆ ಯತ್ನ ಮತ್ತು ಗಾಂಜಾ ಸೇವನೆ ಸೇರಿ ಒಟು 12 ಪ್ರಕರಣಗಳು ದಾಖಲಾಗಿವೆ. ಇವರಿಬ್ಬರಿಗೆ ಜಾಮೀನು ದೊರಕಿದರೆ ಮತ್ತೆ ಸಾರ್ವಜನಿಕವಾಗಿ ಅಶಾಂತಿ ಸೃಷ್ಟಿಸುವ ಕೃತ್ಯದಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಇರುವುದರಿಂದ ಗೂಂಡಾ ಕಾಯ್ದೆ ಹೇರುವಂತೆ ಕಂಕನಾಡಿ ಠಾಣಾಧಿಕಾರಿಯ ಶಿಫಾರಸ್ಸನ್ನು ಪರಿಗಣಿಸಿ ಪೊಲೀಸ್‌ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಸಮಾಜಘಾತುಕ ಶಕ್ತಿಗಳನ್ನು ನಿಯಂತ್ರಿಸುವ ಹಾಗೂ ಸಮಾಜದಲ್ಲಿ ಶಾಂತಿ ಕಾಪಾಡುವ ದೃಷ್ಟಿಯಿಂದ ಈ ಇಬ್ಬರು ರೌಡಿಶೀಟರ್‌ಗಳ ಮೇಲೆ ಮೇಲೆ ಗೂಂಡಾ ಕಾಯ್ದೆ ಹಾಕಲಾಗಿದೆ. ಇವರ ಮೇಲೆ ತಲಾ 12 ಗಂಭೀರ ಪ್ರಕರಣಗಳು ದಾಖಲಾಗಿರುವುದಲ್ಲದೆ, ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದರು. ಇವರಿಬ್ಬರಿಗೂ ಜಾಮೀನು ದೊರೆಯುವ ಹಂತದಲ್ಲಿದ್ದು, ಮತ್ತೆ ಸಮಾಜ ಘಾತುಕ ಕೃತ್ಯಗಳಲ್ಲಿ ತೊಡಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಈ ಕಾಯ್ದೆಯನ್ನು ಹೇರಲಾಗಿದೆ. ಇದೀಗ ಇಬ್ಬರನ್ನೂ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗುತ್ತಿದೆ. ಇವರಿಬ್ಬರ ಜತೆ 60ಕ್ಕೂ ಅಧಿಕ ಮಂದಿ ಜತೆಯಾಗಿ ಅಪರಾಧ ಕೃತ್ಯಗಳನ್ನು ನಡೆಸಿರುವುದು ಕಂಡುಬಂದಿದ್ದು, ಅವರನ್ನೆಲ್ಲಾ ಗುರುತಿಸಿ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಶಶಿಕುಮಾರ್‌ ತಿಳಿಸಿದ್ದಾರೆ.
 

click me!