ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಭಾಗವಾದ ಕಳಸ ತಾಲೂಕಿನಲ್ಲಿ ಕಳ್ಳರು ಒಂದೇ ರಾತ್ರಿಗೆ ಐದು ಹಳ್ಳಿಯಲ್ಲಿ ತಮ್ಮ ಕೈಚಳಕ ತೋರಿ ಸುಮಾರು 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣವನ್ನ ದರೋಡೆ ಮಾಡಿರುವ ಘಟನೆ ನಡೆದಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಫೆ.05): ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಭಾಗವಾದ ಕಳಸ ತಾಲೂಕಿನಲ್ಲಿ ಕಳ್ಳರು ಒಂದೇ ರಾತ್ರಿಗೆ ಐದು ಹಳ್ಳಿಯಲ್ಲಿ ತಮ್ಮ ಕೈಚಳಕ ತೋರಿ ಸುಮಾರು 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣವನ್ನ ದರೋಡೆ ಮಾಡಿರುವ ಘಟನೆ ನಡೆದಿದೆ.
ಒಂದೇ ರಾತ್ರಿಗೆ 5 ಕಡೆ ಕಳ್ಳರ ಕನ್ನ:
ಜಿಲ್ಲೆಯ ಕಳಸ ತಾಲೂಕಿನ ಕಳಸ ಪೋಲಿಸ್ ಠಾಣಾ ವ್ಯಾಪ್ತಿಯ ಹೊರನಾಡು, ಹಿರೇಬೈಲು, ಎಸ್.ಕೆ.ಮೇಗಲ್, ಸಂಪಿಗೆಖಾನ್, ಕಲ್ಮಕ್ಕಿ ಗ್ರಾಮದಲ್ಲಿ ಕಳ್ಳತನ ನಡೆದಿದೆ. ಕಲ್ಮಕ್ಕಿ ಗ್ರಾಮದಸೀನಾ ಬಾರ್ಗಿ ಎಂಬುವರ ಮನೆಯಲ್ಲಿ ಬಾಗಿಲಿನ ಚಿಲಕವನ್ನು ಮುರಿದು ಕಳ್ಳರು ಕೈಚಳಕ ತೋರಿದ್ದಾರೆ. ಒಂದೇ ರಾತ್ರಿಗೆ 5 ಕಡೆ ಕಳ್ಳರು ದಾಳಿ ಮಾಡಿದ್ದು ಚಿನ್ನಾಭರಣ, ಹಣ, ಬೆಳ್ಳಿ ವಸ್ತುಗಳ ದೋಚಿದ್ದಾರೆ. ಹೊರನಾಡು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ದಾರಿ ಮನೆಯ ಹತ್ತಿರ ಗೀತಾ ಎಂಬುವರ ಮನೆಯೂ ಕಳ್ಳತನವಾಗಿದೆ. ಅವರು ಕೆಲಸಕ್ಕೆಂದು ಬೆಳಗಿನ ಜಾವವೇ ಹೋಗಿದ್ದಾರೆ. ಸಂಜೆ ಕೆಲಸ ಮುಗಿಸಿ ವಾಪಸ್ ಮನೆಗೆ ಬರುವಾಗ ಮನೆಯ ಬಾಗಿಲು ಮುರಿದು ಹಾಕಲಾಗಿತ್ತು. ಅವರು ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
Mangaluru: ಹಾಡಹಗಲೇ ಜ್ಯುವೆಲ್ಲರಿ ಶಾಪ್ ಗೆ ನುಗ್ಗಿ ಸಿಬ್ಬಂದಿಯ ಬರ್ಬರ ಹತ್ಯೆ!
ಎಸ್.ಕೆ. ಮೇಗಲ್ ಗ್ರಾಮದ ವರ್ಧಮಾನ್ ಜೈನ್ ಅವರ ಮನೆಯಲ್ಲೂ ಕಳ್ಳತನ ನಡೆದಿದ್ದು ಒಂದು ಲಕ್ಷ ಮೌಲ್ಯದಷ್ಟು ಹಣ-ಬೆಳ್ಳಿ-ಬಂಗಾರ ದೋಚಿ ಪರಾರಿಯಾಗಿದ್ದಾರೆ. ಹಿರೇಬೈಲ್ ಗ್ರಾಮದ ಶ್ರೀಧರ್ ಎಂಬುವರ ಮನೆಯ ಬಾಗಿಲನ್ನು ಒಡೆದು ಬಂಗಾರ, ಹಣ, ಬೆಳ್ಳಿ ಸೇರಿದಂತೆ ಸುಮಾರು 6 ಲಕ್ಷ ಮೌಲ್ಯದಷ್ಟು ವಸ್ತುಗಳನ್ನ ಕಳ್ಳರು ದೋಚಿ ಪರಾರಿಯಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಕಳಸ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಶ್ವಾನ ಹಾಗೂ ಬೆರಳಚ್ವು ತಜ್ಞರ ತಂಡ ಕಳ್ಳತನ ನಡೆದಿರುವ ಸ್ಥಳಗಳನ್ನು ಪರಿಶೀಲನೆ ನಡೆಸಿತ್ತು.ಕಳಸ ಜಾಗೂ ಕುದುರೆಮುಖ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳಸ ತಾಲೂಕಿನ ಈ ಭಾಗದಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರೇ ಹೆಚ್ಚಿರೋದು. ಎಲ್ಲರೂ ಹೊಟ್ಟೆ-ಬಟ್ಟೆ ಕಟ್ಟಿ ಆಸ್ತಿ ಮಾಡಿದವರೇ ಹೆಚ್ಚು. ಆದರೆ, ಈಗ ಹೀಗೆ ಒಂದೇ ರಾತ್ರಿಗೆ 10 ಲಕ್ಷಕ್ಕೂ ಮೌಲ್ಯದ ವಸ್ತುಗಳನ್ನ ದೋಚಿರುವುದರಿಂದ ಜನಸಾಮಾನ್ಯರು ಕೂಡ ಕಂಗಾಲಾಗಿದ್ದಾರೆ. ಪೊಲೀಸರು ಕೂಡ ತಲೆಕೆಡಿಸಿಕೊಂಡಿದ್ದಾರೆ.
ಅಸ್ಸಾಂ ಕಾರ್ಮಿಕರ ಸುತ್ತ ಅನುಮಾನದ ಹುತ್ತ?
ಮಲೆನಾಡಿನ ಭಾಗದಲ್ಲಿ ಕಾರ್ಮಿಕರ ಕೊರತೆ ನೀಗಿಸಲು ಹೊರರಾಜ್ಯವಾದ ಅಸ್ಸಾಂನಿಂದ ಸಾಕಷ್ಟು ಸಂಖ್ಯೆಯಲ್ಲಿ ಕಾರ್ಮಿಕರು ಆಗಮಿಸಿದ್ದಾರೆ. ಹೀಗೆ ಹೊರ ರಾಜ್ಯವಾದ ಅಸ್ಸಾಂ ನಿಂದ ಬಂದಿರುವ ಕಾರ್ಮಿಕರಿಗೆ ಮಲೆನಾಡಿನ ಭಾಗವಾದ ಕಳಸದಲ್ಲಿ ಕೆಲ ಕಾಫಿ ಬೆಳಗಾರರು, ಟೀ ಎಸ್ಟೇಟ್ ಮಾಲೀಕರು ಆಶ್ರಯವನ್ನು ನೀಡಿದ್ದಾರೆ. ಈ ರೀತಿ ಹೊರ ರಾಜ್ಯಗಳಿಂದ ಬಂದಿರುವ ಕಾರ್ಮಿಕರು ಇಂತಹ ಕಳ್ಳತನದ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎನ್ನುವ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.