ಬೆಳಗಾವಿ ಮಠಕ್ಕೆ ನುಗ್ಗಿ ಕೈಗೆ ಸಿಕ್ಕ ವಸ್ತು ಹೊತ್ತೊಯ್ದ ಜನ: ಅಪ್ರಾಪ್ತೆ ಮೇಲೆ ಬಲಾತ್ಕಾರ, ಸ್ವಾಮೀಜಿ ಬಂಧನ

Kannadaprabha News   | Kannada Prabha
Published : May 25, 2025, 05:09 AM IST
Swamiji Arrest

ಸಾರಾಂಶ

ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ ರಾಮಮಂದಿರ ಮಠದ ಸ್ವಯಂಘೋಷಿತ ಸ್ವಾಮಿ, ಹಠವಾದಿ ಲೋಕೇಶ್ವರ ಸ್ವಾಮೀಜಿ ವಿರುದ್ಧ ಬಾಲಕಿಯನ್ನು ಅಪಹರಿಸಿ ಬಲಾತ್ಕಾರ ಎಸಗಿದ ಪ್ರಕರಣ ದಾಖಲಾಗಿದೆ.

ಬೆಳಗಾವಿ (ಮೇ.25): ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ ರಾಮಮಂದಿರ ಮಠದ ಸ್ವಯಂಘೋಷಿತ ಸ್ವಾಮಿ, ಹಠವಾದಿ ಲೋಕೇಶ್ವರ ಸ್ವಾಮೀಜಿ ವಿರುದ್ಧ ಬಾಲಕಿಯನ್ನು ಅಪಹರಿಸಿ ಬಲಾತ್ಕಾರ ಎಸಗಿದ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪೋಕ್ಸೋ ಅಡಿ ಪ್ರಕರಣ ದಾಖಲಿಸಿ, ಸ್ವಾಮೀಜಿಯನ್ನು ಶನಿವಾರ ಬಂಧಿಸಿದ್ದಾರೆ. ಸ್ವಾಮೀಜಿಯ ‌ಬಂಧನವಾಗುತ್ತಿದ್ದಂತೆ ಆಕ್ರೋಶಗೊಂಡ ಜನ ಫ್ರಿಜ್‌, ವಾಶಿಂಗ್‌ ಮಷೀನ್ ಸೇರಿ ಮಠದಲ್ಲಿದ್ದ ಪೀಠೋಪಕರಣಗಳನ್ನು ಹೊತ್ತೊಯ್ಯುತ್ತಿದ್ದಾರೆ.

ಮೂಡಲಗಿ ತಾಲೂಕಿನ ಬಾಲಕಿಯ ಕುಟುಂಬಸ್ಥರು ಎರಡು ವರ್ಷಗಳಿಂದ ರಾಮಮಂದಿರ ಮಠಕ್ಕೆ ಭೇಟಿ ನೀಡುತ್ತಿದ್ದು, ಈ ವೇಳೆ ಮಠದ ಲೋಕೇಶ್ವರ ಸ್ವಾಮೀಜಿಯ ಪರಿಚಯವಾಗಿತ್ತು. ಮೇ 13ರಂದು ಬಾಲಕಿ ತನ್ನ ಗ್ರಾಮದ ಹೊರವಲಯದಲ್ಲಿರುವ ಅಜ್ಜಿ ಮನೆಗೆ ಹೋಗಿ, ಮರಳಿ ಮನೆಗೆ ಬರುತ್ತಿದ್ದಳು. ಆಗ ಕಾರಿನಲ್ಲಿ ಬಂದ ಲೋಕೇಶ್ವರ ಸ್ವಾಮಿ, ‘ನಿಮ್ಮ ಮನೆಯ ಕಡೆಗೆ ಹೋಗುತ್ತಿದ್ದೇನೆ. ಮನೆಗೆ ಬಿಡುತ್ತೇನೆ ಬಾ’ ಎಂದು ಹೇಳಿ ಬಾಲಕಿಯನ್ನು ಕಾರಿನಲ್ಲಿ ಹತ್ತಿಸಿಕೊಂಡಿದ್ದ. ಮನೆ ಬಂದರೂ ಕಾರು ನಿಲ್ಲಿಸದೆ ಮಹಾಲಿಂಗಪುರ ಮಾರ್ಗವಾಗಿ ವೇಗವಾಗಿ ಕಾರನ್ನು ಚಲಾಯಿಸಿದ್ದ. ಗಾಬರಿಗೊಂಡ ಬಾಲಕಿ ಮನೆಗೆ ಬಿಡುವಂತೆ ಅಂಗಲಾಚಿದ್ದಳು. ಗಲಾಟೆ ಮಾಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಸ್ವಾಮೀಜಿ, ಆಕೆಯನ್ನು ಸುಮ್ಮನಾಗಿಸಿದ್ದ.

ಮಹಾಲಿಂಗಪುರ ಮೂಲಕ ಬಾಗಲಕೋಟೆ ಮಾರ್ಗವಾಗಿ ರಾಯಚೂರಿಗೆ ಹೋಗಿ, ಲಾಡ್ಜ್‌ ಬುಕ್‌ ಮಾಡಿ, ಎರಡು ದಿನ ಆಕೆ ಮೇಲೆ ಬಲಾತ್ಕಾರ ಎಸಗಿದ್ದಾನೆ. ಮೇ 15ರಂದು ರಾಯಚೂರಿನಿಂದ ಹೊರಟು, ಬಾಗಲಕೋಟೆಗೆ ಬಂದು, ಲಾಡ್ಜ್ ಬುಕ್‌ ಮಾಡಿ, ಅಲ್ಲಿಯೂ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಮೇ 16ರಂದು ಬೆಳಗ್ಗೆ ಬಾಲಕಿಯು ತನ್ನನ್ನು ಮನೆಗೆ ಕರೆದುಕೊಂಡು ಹೋಗುವಂತೆ ಅಂಗಲಾಚಿ ಬೇಡಿಕೊಂಡಿದ್ದು, ಬಾಲಕಿಯನ್ನು ಮಹಾಲಿಂಗಪುರ ಬಸ್ ನಿಲ್ದಾಣದಲ್ಲಿ ಬಿಟ್ಟು, ಈ ವಿಷಯವನ್ನು ಯಾರಿಗೂ ಹೇಳಬೇಡ, ಹೇಳಿದರೆ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿ, ಅಲ್ಲಿಂದ ಪರಾರಿಯಾಗಿದ್ದ.

ಈ ಮಧ್ಯೆ, ಕಾಣೆಯಾಗಿದ್ದ ಮಗಳನ್ನು ಹುಡುಕುತ್ತಿದ್ದ ಪೋಷಕರಿಗೆ ಬಾಲಕಿ ಬಸ್ ನಿಲ್ದಾಣದಲ್ಲಿ ಸಿಕ್ಕಿದ್ದಳು. ಹೆದರಿದ ಬಾಲಕಿ ಮೇ 20ರಂದು ತನ್ನ ತಂದೆಯ ಮುಂದೆ ಲೋಕೇಶ್ವರ ಸ್ವಾಮಿಯ ಕೃತ್ಯವನ್ನು ಬಾಯಿ ಬಿಟ್ಟಿದ್ದಾಳೆ. ಬಾಲಕಿಯ ತಂದೆ ಮೇ 21ರಂದು ಬಾಗಲಕೋಟೆಯ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆ ನಡೆದಿರುವುದು ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವುದರಿಂದ ಪ್ರಕರಣವನ್ನು ಮೂಡಲಗಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

ಲೋಕೇಶ್ವರ ಸ್ವಾಮಿ ಹಿನ್ನೆಲೆ: ಮೂಲತಃ ಕಲಬುರಗಿ ಜಿಲ್ಲೆ ಚಿತ್ತಾಪುರ ನಿವಾಸಿಯಾದ ಲೋಕೇಶ್ವರ ಶಾಬಣ್ಣ ಭಂಗಿ (30), ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ 10 ಎಕರೆ ಸರ್ಕಾರಿ ಜಾಗದಲ್ಲಿ ಕೆಲವು ಸ್ಥಳೀಯರ ಸಹಕಾರದೊಂದಿಗೆ 2019ರಲ್ಲಿ ರಾಮಮಂದಿರ ಮಠ ಸ್ಥಾಪನೆ ಮಾಡಿದ್ದಾನೆ. ಈತ ಸಾಕಷ್ಟು ಅಕ್ರಮ ಚಟುವಟಿಕೆ ಮಾಡುತ್ತಿರುವ ಬಗ್ಗೆ ಪೊಲೀಸರು ಹಾಗೂ ತಹಸೀಲ್ದಾರ್‌ಗೆ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. ಆದರೂ, ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಿಂದೆಯೂ ಸಹ ಅಪ್ರಾಪ್ತೆಯ ಮೇಲೆ ಬಲಾತ್ಕಾರ ಎಸಗಿದ್ದು ವರದಿಯಾಗಿತ್ತು. ಆಗ ಸ್ಥಳೀಯರು ಸ್ವಾಮಿಯನ್ನು ಊರು ಬಿಡಿಸಿದ್ದರು. ಕೆಲವು ತಿಂಗಳ ನಂತರ, ಮತ್ತೆ ಬಂದು ಅನೈತಿಕ ಚಟುವಟಿಕೆ ಮಾಡುತ್ತಿದ್ದ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಮಠದಲ್ಲಿನ ಪೀಠೋಪಕರಣ ಹೊತ್ತೊಯ್ದ ಜನರು: ಸ್ವಾಮೀಜಿಯ ‌ಬಂಧನವಾಗುತ್ತಿದ್ದಂತೆ ಸ್ವಾಮೀಜಿಗೆ ಸೇರಿದ ರಾಮಮಠದಲ್ಲಿನ ಪೀಠೋಪಕರಣಗಳನ್ನು ಸಾರ್ವಜನಿಕರು ಹೊತ್ತೊಯ್ದಿದ್ದಾರೆ. ಮಠಕ್ಕೆ ನುಗ್ಗಿದ ಗ್ರಾಮಸ್ಥರು, ಮಠದಲ್ಲಿದ್ದ ಪೀಠೋಪಕರಣ, ಫ್ರಿಡ್ಜ್, ವಾಶಿಂಗ್‌ ಮಷೀನ್ ಸೇರಿ ಇತರ ವಸ್ತುಗಳನ್ನು ಟ್ರ್ಯಾಕ್ಟರ್, ಚಕ್ಕಡಿ ಗಾಡಿಗಳಲ್ಲಿ ತುಂಬಿಕೊಂಡು ಹೊತ್ತೊಯ್ದರು. ಈ ಪೈಕಿ, ಕೆಲವೊಂದು ವಸ್ತುಗಳನ್ನು ಗ್ರಾಮದ ದೇವಸ್ಥಾನಕ್ಕೆ ದಾನವಾಗಿ ಕೊಟ್ಟರೆ, ಇನ್ನು ಕೆಲವನ್ನು ತಮ್ಮ, ತಮ್ಮ ಮನೆಗಳಿಗೆ ತೆಗೆದುಕೊಂಡು ಹೋದರು. ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡು ಮಠದ ಸ್ವಯಂಘೋಷಿತ ಸ್ವಾಮೀಜಿ ಆಗಿದ್ದ ಲೋಕೇಶ್ವರ ಸ್ವಾಮೀಜಿ, ಲಕ್ಷಾಂತರ ರು. ಮೌಲ್ಯದ ವಸ್ತುಗಳನ್ನು ಮಠದಲ್ಲಿಟ್ಟುಕೊಂಡಿದ್ದ ಎನ್ನಲಾಗಿದೆ.

ಟ್ರ್ಯಾಕ್ಟರ್‌, ಚಕ್ಕಡಿಯಲ್ಲಿ ಮಠದ ವಸ್ತು ಸಾಗಣೆ!: ನಕಲಿ ಸ್ವಾಮಿಯ ಬಂಧನವಾಗುತ್ತಿದ್ದಂತೆ ಮಠಕ್ಕೆ ನುಗ್ಗಿದ ಗ್ರಾಮಸ್ಥರು ಪೀಠೋಪಕರಣ, ಫ್ರಿಜ್‌, ವಾಷಿಂಗ್‌ ಮಷಿನ್‌ ಸೇರಿ ಹಲವು ವಸ್ತುಗಳನ್ನು ತುಂಂಬಿಕೊಂಡು ಹೋಗಿದ್ದಾರೆ. ಕೆಲವರು ಆ ವಸ್ತುಗಳನ್ನು ದೇಗುಲಕ್ಕೆ ದಾನವಾಗಿ ಕೊಟ್ಟಿದ್ದರೆ, ಇನ್ನು ಕೆಲವರು ತಮ್ಮ ಮನೆಗೇ ಒಯ್ದಿದ್ದಾರೆ.

ಈತ ಮಾಡಿದ್ದೇನು?
- ಮೂಡಲಗಿ ತಾಲೂಕಿನ ಕುಟುಂಬ 2 ವರ್ಷಗಳಿಂದ ಈತನ ಮಠಕ್ಕೆ ಭೇಟಿ ಕೊಡುತ್ತಿತ್ತು
- ಮೇ 13ರಂದು ಅಪ್ರಾಪ್ತೆ ಅಜ್ಜಿ ಮನೆಗೆ ಹೋಗಿ ಮನೆಗೆ ವಾಪಸಾಗುತ್ತಿದ್ದಾಗ ಈತನಿಗೆ ಸಿಕ್ಕಿದ್ದಳು
- ಮನೆಗೆ ಡ್ರಾಪ್‌ ಕೊಡುವುದಾಗಿ ನಂಬಿಸಿ ಕಾರಿಗೆ ಹತ್ತಿಸಿಕೊಂಡಿದ್ದ ಲೋಕೇಶ್ವರ ಸ್ವಾಮಿ
- ಕೊಲೆ ಮಾಡುವುದಾಗಿ ಬೆದರಿಸಿ ರಾಯಚೂರು ಲಾಡ್ಜ್‌ಗೆ ಕರೆದೊಯ್ದು ರೇಪ್‌ ಮಾಡಿದ್ದ
- ಬಾಗಲಕೋಟೆಯ ಲಾಡ್ಜ್‌ಗೆ ಕರೆದೊಯ್ದು ಅಲ್ಲೂ ಬಲಾತ್ಕಾರ ಎಸಗಿ ಬಿಟ್ಟು ಕಳಿಸಿದ್ದ
- ಈ ಬಾಲಕಿ ಬಸ್‌ ನಿಲ್ದಾಣದಲ್ಲಿ ಸಿಕ್ಕಿದ್ದಳು. ಬಳಿಕ ಪೋಷಕರಿಂದ ಪೊಲೀಸ್‌ ದೂರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
ಸಹವಾಸ, ಒತ್ತಾಯಕ್ಕೆ ಗಾಂಜಾ ಜಾಲಕ್ಕೆ ವಿದ್ಯಾರ್ಥಿಗಳು!