ಇಲ್ಲೊಬ್ಬಳು ಯುವತಿ ರೀಲ್ಸ್ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ.
ಚಿಕ್ಕಬಳ್ಳಾಪುರ, (ಸೆಪ್ಟೆಂಬರ್.11): ರೀಲ್ಸ್ ಹುಚ್ಚು ಸಾಹಸಕ್ಕೆ ಮುಂದಾಗಿ ಅನಾಹುತ ಮಾಡಿಕೊಂಡ ಅದೆಷ್ಟೋ ಪ್ರಕರಣಗಳು ನಮ್ಮ ಕಣ್ಣ ಮುಂದಿವೆ. ಇನ್ನು ಕೆಲವರು ಪ್ರಾಣ ಕಳೆದುಕೊಂಡಿರುವ ಬೇಕಾದಷ್ಟು ಉದಾಹರಣಗಳಿವೆ. ಇದಕ್ಕೆ ಇಂಬುನೀಡುವಂತೆ ಚಿಕ್ಕಬಳ್ಳಾಪುರದಲ್ಲಿ ಯುವತಿಯೊಬ್ಬರು ರೀಲ್ಸ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾಳೆ.
ಹೌದು.. ಚಿಕ್ಕಬಳ್ಳಾಪುರ ಜಿಲ್ಲೆಯ ಗಂಗಾನಹಳ್ಳಿ ಗ್ರಾಮದ ಬಳಿ ಈ ಅವಘಡ ನಡೆದಿದೆ. ಅಮೃತ (22) ಸಾವಿಗೀಡಾದ ಯುವತಿ. ಈಕೆ ಮೂಲತಃ ಶಿಡ್ಲಘಟ್ಟ ತಾಲೂಕಿನ ಗಾಜಿಲುವಾರುಪಲ್ಲಿ ಗ್ರಾಮದವಳು. ಎಂಎ ಪದವೀಧರೆ ಆಗಿರುವ ಈಕೆ ಚಿಕ್ಕಬಳ್ಳಾಪುರದ ಜಂಬಿಗೆಮರದಹಳ್ಳಿಯ ನೆಂಟರ ಗೃಹಪ್ರವೇಶಕ್ಕಾಗಿ ಬಂದಿದ್ದಳು.
Instagram Reels ಮಾಡಲು ಹೋಗಿ ರೈಲು ಅಪಘಾತದಲ್ಲಿ ತೀವ್ರ ಗಾಯಗೊಂಡ ಯುವಕ
ಅಲ್ಲಿ ಗಂಗಾನಹಳ್ಳಿ ಕೆರೆ ಕೋಡಿ ಹರಿಯುತ್ತಿರುವ ವಿಚಾರ ತಿಳಿದು ಮತ್ತೊಬ್ಬಳು ಯುವತಿ ಜೊತೆ ಅಲ್ಲಿಗೆ ತೆರಳಿದ್ದಳು. ಈ ವೇಳೆ ಜೊತೆಯಲ್ಲಿದ್ದ ಯುವತಿಗೆ ವಿಡಿಯೋ ಮಾಡಲು ಹೇಳಿ ಮೊಬೈಲ್ ನೀಡಿ ಕೆರೆಯ ಅಂಚಿನ ದಿಂಡಿನ ಮೇಲೆ ತೆರಳಿದ್ದಳು. ಆದರೆ ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾಳೆ.
ಕೆರೆಯ ನೀರಲ್ಲಿ ಅಮೃತ ಉರುಳಿದ ಘಟನೆಯನ್ನು ಗೆಳತಿ ಅಕ್ಷತಾ ತೋಟದಲ್ಲಿದ್ದ ಗ್ರಾಮಸ್ಥರಿಗೆ ತಿಳಿಸಿದ್ದು, ಅರ್ಧ ಗಂಟೆಯಲ್ಲೇ ಕೆರೆಯಿಂದ ಮೃತ ಅಮೃತಳನ್ನ ಸ್ಥಳೀಯರೇ ಮೇಲೆ ಎತ್ತಿದ್ದಾರೆ.
ಇನ್ನು ಇತ್ತೀಚೆಗೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದವರ ಮೃತದೇಹದ ಮೇಲೆ ಅರ್ಧ ಗಂಟೆಯೊಳಗೆ ಉಪ್ಪು ಹಾಕಿ ಮಲಗಿಸಿದ್ರೆ ಬದುಕ್ತಾರೆ ಅನ್ನೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಸಂದೇಶದಂತೆ,ಯುವತಿಯನ್ನು ಉಪ್ಪಿನೊಳಗೆ ಇಟ್ಟಿದ್ದಾರೆ. ಆದ್ರೆ, ಹೋದ ಜೀವ ಮತ್ತೆ ಬರಲೇ ಇಲ್ಲ.