ಬೀದರ್ ಜಿಲ್ಲೆಯ ಚಿಟಗುಪ್ಪ ತಾಲೂಕಿನ ಅಂಬರೀಶ ರಾಜಪ್ಪ (23) ಎಂಬ ಯುವಕನೇ ಮಗಳ ಆತ್ಮಹತ್ಯೆಗೆ ಕಾರಣ ಎಂದು ಸಂತ್ರಸ್ತೆ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಪೋಕ್ಸೋ ಕಾಯ್ದೆಯಡಿ ಯುವಕನನ್ನು ಬಂಧಿಸಿದ ಪೊಲೀಸರು.
ಬೀದರ್(ಸೆ.24): ನಗರದ ಕಾಲೇಜೊಂದರಲ್ಲಿ ಪಿಯುಸಿ ಅಭ್ಯಸಿಸುತ್ತಿದ್ದ ಬಾಲಕಿ, ಯುವಕನೋರ್ವನ ಕಿರುಕುಳಕ್ಕೆ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಚಿಟಗುಪ್ಪ ತಾಲೂಕಿನ ಅಂಬರೀಶ ರಾಜಪ್ಪ (23) ಎಂಬ ಯುವಕನೇ ಮಗಳ ಆತ್ಮಹತ್ಯೆಗೆ ಕಾರಣ ಎಂದು ಸಂತ್ರಸ್ತೆ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಯುವಕನನ್ನು ಪೊಲೀಸರು ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದಾರೆಂದು ತಿಳಿದು ಬಂದಿದೆ.
ಕಳೆದ ಐದಾರು ತಿಂಗಳುಗಳಿಂದ ಪುತ್ರಿಯ ಮೊಬೈಲ್‌ಗೆ ಕರೆ ಮಾಡಿ ಹಣಕ್ಕಾಗಿ ಪೀಡಿಸುತ್ತಿದ್ದ, ಇಲ್ಲವಾದಲ್ಲಿ ಬಾಲಕಿಯ ಭಾವಚಿತ್ರಗಳನ್ನು, ವಿಡಿಯೋ ಹಾಗೂ ಆಡಿಯೋ ಸಂಭಾಷಣೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವದಾಗಿ ಬೆದರಿಕೆಯೊಡ್ಡುತ್ತಿದ್ದ. ಕೆಲ ಬಾರಿ ಇದಕ್ಕೆ ಹೆದರಿ 25-30ಸಾವಿರ ರು. ಹಣವನ್ನು ಆನ್‌ಲೈನ್ ಮೂಲಕ ಕಳುಹಿಸಿದ್ದರೂ ಆ.13 ಹಾಗೂ 17ರಂದು ಮತ್ತೇ ಕರೆ ಮಾಡಿ ಹಣವನ್ನು ಫೋನ್‌ಪೇ ಮಾಡಿದರೆ ಮಾತ್ರ ಆಡಿಯೋ, ಫೋಟೋ ಡಿಲೀಟ್ ಮಾಡುವದಾಗಿ ಬೆದರಿಕೆ ಹಾಕಿದ್ದು, ಹೀಗೆಯೇ ನಿಲ್ಲದ ಕಿರುಕುಳದಿಂದ ಬೇಸತ್ತು ಮನೆಯ ಕೋಣೆಯೊಂದರಲ್ಲಿ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಇದೇ ರೀತಿಯಾಗಿ ನಾಲ್ಕೈದು ಬಾಲಕಿಯರಿಗೂ ಯುವಕ ಬ್ಲಾಕ್‌ಮೇಲ್ ಮಾಡಿದ್ದಾನೆಂದು ಸಂತ್ರಸ್ತೆಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.
ಕೌಟುಂಬಿಕ ಕಲಹ ಹಿನ್ನೆಲೆ ತಾಯಿ-ಮಗಳ ಸಾವು!
ಈ ಕುರಿತಂತೆ ಬೆಮಳಖೇಡಾ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ 67/2023 ಕಲಂ 305 ಐಪಿಸಿ ಜೊತೆ 8.12 ಪೊಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ಸೆ.21ರಂದು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಇದಕ್ಕೂ ಮುನ್ನ ತನ್ನ ಮಗಳ ಸಾವಿಗೆ ಕಾರಣನಾದ ಯುವಕನ ಕುರಿತಂತೆ ದೂರು ನೀಡಿದರೂ ಅದನ್ನು ಪಡೆಯದೇ ಪಿಎಸ್‌ಐ ನಿರ್ಲಕ್ಷಿಸಿ ವಾಪಸ್ ಕಳಿಸಿದ್ದಾರೆ ಎಂದು ಹುಮನಾಬಾದ್ ಡಿಎಸ್‌ಪಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿ, ಮಕ್ಕಳ ಹಕ್ಕುಗಳ ರಕ್ಷಣಾ ಇಲಾಖೆ ಸೇರಿದಂತೆ ಮತ್ತಿತರೆಡೆ ಗೋಗರೆದಿರುವ ಮೃತ ಅಪ್ರಾಪ್ತ ಬಾಲಕಿಯ ತಾಯಿ ನೀಡಿದ ಮತ್ತೊಂದು ಪತ್ರದಲ್ಲಿ ಆರೋಪಿಸಲಾಗಿದೆ. ಈ ಕುರಿತಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗಂಭೀರವಾಗಿ ಯೋಚಿಸಿ ಲೋಪವಾಗಿರುವ ಕುರಿತು ಕ್ರಮ ಕೈಗೊಳ್ಳುವ ಅಗತ್ಯವಂತೂ ಇದೆ.