
ಗೌರಿಬಿದನೂರು (ಜೂ.19): ತಾಲೂಕಿನ ತೊಂಡೆಬಾವಿ ಹೋಬಳಿಯ ಬಸವನಹಳ್ಳಿ ಗ್ರಾಮದಲ್ಲಿ ನಡೆದ ದರೋಡೆ ಹಾಗೂ ಹಲ್ಲೆ ಪ್ರಕರಣವೊಂದು ವೃದ್ಧೆಯ ಸಾವಿನಲ್ಲಿ ಅಂತ್ಯಗೊಂಡಿದ್ದು, ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ. ಒಂಟಿಯಾಗಿದ್ದ 60 ವರ್ಷದ ಸುಬ್ಬಮ್ಮ ಎಂಬ ವೃದ್ಧೆಯ ಮೇಲೆ ಕಳ್ಳರು ಅಮಾನುಷವಾಗಿ ಹಲ್ಲೆ ನಡೆಸಿ, ಕಿವಿಯಲ್ಲಿದ್ದ ಬಂಗಾರದ ಓಲೆಗಳನ್ನು ಕಿವಿಯ ಸಮೇತ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದ್ದು, ಚಿಕಿತ್ಸೆ ಫಲಕಾರಿಯಾಗದೆ ವೃದ್ಧೆ ಮೃತಪಟ್ಟಿದ್ದಾರೆ.
ಸುಬ್ಬಮ್ಮ ಮನೆಯಲ್ಲಿ ಒಬ್ಬರೇ ಇದ್ದರು. ಕುಟುಂಬದ ಸದಸ್ಯರು ಜಮೀನಿನ ಕೆಲಸಕ್ಕೆ ತೆರಳಿದ್ದ ವೇಳೆ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಕಳ್ಳರು ಮನೆಗೆ ನುಗ್ಗಿದ್ದಾರೆ. ಅವರ ಕಿವಿಯಲ್ಲಿದ್ದ ಬಂಗಾರದ ಓಲೆಗಳನ್ನು ಕಸಿದುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಸುಬ್ಬಮ್ಮಜೋರಾಗಿ ಕೂಗಾಡಲು ಆರಂಭಿಸಿದ್ದು, ಕಳ್ಳರ ಕೃತ್ಯಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಆತಂಕಗೊಂಡ ಆರೋಪಿಗಳು ಓಲೆಗಳನ್ನು ಬಲವಂತವಾಗಿ ಕಿತ್ತುಕೊಂಡಿದ್ದಾರೆ. ಕಳ್ಳರು ಓಲೆಗಳನ್ನು ಕಿತ್ತುಕೊಳ್ಳುವ ವೇಳೆ ವೃದ್ಧೆಯ ಕಿವಿಗಳಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ರಕ್ತಸ್ರಾವ ಉಂಟಾಗಿದೆ. ಅಲ್ಲದೆ ವೃದ್ಧೆ ನಿರಂತರವಾಗಿ ಕೂಗಾಡುತ್ತಿದ್ದುದನ್ನು ಕಂಡು ಕೋಪಗೊಂಡ ಕಳ್ಳರು, ತಲೆಗೆ ಬಲವಾದ ವಸ್ತುವಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಹಲ್ಲೆಯ ಪರಿಣಾಮ ವೃದ್ಧೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಘಟನೆ ನಡೆದ ಸಮಯದಲ್ಲಿ ಅಕ್ಕಪಕ್ಕದ ಮನೆಗಳಲ್ಲಿ ಯಾರೂ ಇಲ್ಲದ ಕಾರಣ ನೆರವು ಸಿಗಲಿಲ್ಲ. ಮಧ್ಯಾಹ್ನ ಸುಮಾರು 3.30 ರ ವೇಳೆಗೆ ಜಮೀನಿನ ಕೆಲಸ ಮುಗಿಸಿ ಮನೆಗೆ ಬಂದ ಸೊಸೆ, ವೃದ್ಧೆ ರಕ್ತಸ್ರಾವದಿಂದ ಒದ್ದಾಡುತ್ತಿರುವುದನ್ನು ಕಂಡು ಆತಂಕಗೊಂಡಿದ್ದಾರೆ. ಕೂಡಲೇ ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರ ನೆರವಿನಿಂದ ಅವರನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ, ತಲೆಗೆ ತೀವ್ರ ಪೆಟ್ಟಾಗಿರುವುದು ಹಾಗೂ ಅಧಿಕ ರಕ್ತಸ್ರಾವವಾಗಿರುವುದನ್ನು ಗಮನಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಚಿಕಿತ್ಸೆ ಮುಂದುವರಿದರೂ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಕಾರಣ ಸುಬ್ಬಮ್ಮ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಹಗಲು ಹೊತ್ತಿನಲ್ಲೇ ಮನೆಗೆ ನುಗ್ಗಿ ವೃದ್ಧೆಯ ಮೇಲೆ ಹಲ್ಲೆ ನಡೆಸಿ ದರೋಡೆ ನಡೆಸಿರುವ ಘಟನೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಆರೋಪಿಗಳನ್ನು ಶೀಘ್ರ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸುಬ್ಬಮ್ಮ ಅವರ ದುರ್ಮರಣದಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಬಸವನಹಳ್ಳಿ ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ