ಬನಶಂಕರಿ 2ನೇ ಹಂತದ ಸಂಗೀತಾ ಮೊಬೈಲ್ ಪ್ರೈವೆಟ್ ಲಿಮಿಟೆಡ್ ಕಂಪನಿ ವ್ಯವಸ್ಥಾಪಕ ಕೆ.ಬಿ. ರಾಜೇಶ್ ಎಂಬುವವರು ನೀಡಿದ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಯ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ.
ಬೆಂಗಳೂರು(ಡಿ.31): ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಆಪ್ತ ಸಹಾಯಕನ ಹೆಸರಿನಲ್ಲಿ ಕರೆ ಮಾಡಿ ಪ್ರಾಯೋಜಕತ್ವದ ನೆಪದಲ್ಲಿ ಸಂಗೀತಾ ಮೊಬೈಲ್ಸ್ ಕಂಪನಿಯಿಂದ 10.40 ಲಕ್ಷ ರು. ಪಡೆದು ವಂಚಿಸಿದ ಆರೋಪದಡಿ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬನಶಂಕರಿ 2ನೇ ಹಂತದ ಸಂಗೀತಾ ಮೊಬೈಲ್ ಪ್ರೈವೆಟ್ ಲಿಮಿಟೆಡ್ ಕಂಪನಿ ವ್ಯವಸ್ಥಾಪಕ ಕೆ.ಬಿ. ರಾಜೇಶ್ ಎಂಬುವವರು ನೀಡಿದ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಯ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಯ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ದೂರು?:
ದೂರುದಾರ ಕೆ.ಬಿ.ರಾಜೇಶ್ ಅವರ ಮೊಬೈಲ್‌ಗೆ 2 ವರ್ಷದ ಹಿಂದೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದೆ. ಕರೆ ಮಾಡಿದ್ದ ವ್ಯಕ್ತಿ ತಾನು ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ರೆಡ್ಡಿ ಅವರ ಆಪ್ತ ಸಹಾಯಕ ಕೆ.ನಾಗೇಶ್ವರ ರೆಡ್ಡಿ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ಆಂಧ್ರ ಪ್ರದೇಶ ಕ್ರಿಕೆಟ್ ಸಂಸ್ಥೆಯಿಂದ ಆಟವಾಡುತ್ತಿರುವ ರಿಕಿ ಭುವಿ ಎಂಬ ಆಟಗಾರನಿಗೆ ಪ್ರಾಯೋಜಕತ್ವದ ಅಗತ್ಯವಿದೆ. ಆತನಿಗೆ ನಿಮ್ಮ ಕಂಪನಿಯಿಂದ ಎರಡು ಸೆಟ್ ಕ್ರಿಕೆಟ್ ಸೆಟ್ ಪ್ರಾಯೋಜಕತ್ವ ನೀಡುವಂತೆ ಕೇಳಿಕೊಂಡಿದ್ದಾನೆ. ಈ ಎರಡು ಸೆಟ್ ಕೆಟ್‌ಗೆ 10.40 . ಲಕ್ಷ ರು. ವೆಚ್ಚವಾಗಲಿದೆ. ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸುವಂತೆ ಬ್ಯಾಂಕ್ ಖಾತೆ ವಿವರ ನೀಡಿದ್ದಾನೆ.
2 ಕಂತುಗಳಲ್ಲಿ ಹಣ ವರ್ಗಾವಣೆ:
ಅಪರಿಚಿತನ ಮಾತು ನಂಬಿದ ದೂರುದಾರ ರಾಜೇಶ್, 2022ರ ಮೇ 10 ಮತ್ತು ಮೇ 11ರಂದು 5.20 ಲಕ್ಷ ರು.ನಂತೆ ಒಟ್ಟು 10.40 ಲಕ್ಷ ರು. ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ. ಬಳಿಕ ಇನ್ ವಾಯ್ಸ್ ಕೊಡುವಂತೆ ಕೇಳಿದಾಗ ಒಂದೊಂದು ಕಾರಣ ನೀಡಿದ್ದಾನೆ. ಬಳಿಕ ಹಲವು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸದೆ ಸಂಪರ್ಕ ಕಡಿದುಕೊಂಡಿದ್ದಾನೆ. ಈ ಬಗ್ಗೆ ಅನುಮಾನ ಗೊಂಡು ವಿಚಾರಿಸಿದಾಗ, ಅಪರಿಚಿತ ವ್ಯಕ್ತಿಯು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿಯ ಆಪ್ತ ಸಹಾಯಕ ಕೆ.ನಾಗೇಶ್ವರ ರೆಡ್ಡಿ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಹಣ ಪಡೆದು ವಂಚಿಸಿರುವುದು ಗೊತ್ತಾಗಿದೆ. ಹೀಗಾಗಿ ಅಪರಿಚಿತ ವಂಚಕನ ವಿರುದ್ದ ಕಾನೂನುಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಯುವಕರಿಗೆ ಉಗ್ರ ತರಬೇತಿ: ಬಾಂಗ್ಲಾ ಪ್ರಜೆಗೆ 7 ವರ್ಷ ಶಿಕ್ಷೆ
ಬೆಂಗಳೂರು: ಭಾರತದಲ್ಲಿ ಮುಸ್ಲಿಂ ಯುವಕರನ್ನು ಉಗ್ರಗಾಮಿಗಳಾಗಿ ಮಾಡಲು ತರಬೇತಿ ನೀಡಿದ ಜೊತೆಗೆ ನಗರದಲ್ಲಿ ಡಕಾಯಿತಿ ಮೂಲಕ ಉಗ್ರ ಚಟುವಟಿಕೆಗಳಿಗೆ ಹಣ ಸಂಗ್ರಹ ಮಾಡುತ್ತಿದ್ದ ಬಾಂಗ್ಲಾದೇಶ ಮೂಲದ ವ್ಯಕ್ತಿಗೆ ಬೆಂಗಳೂರಿನ ಎನ್‌ಐಎ ನ್ಯಾಯಾಲಯ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. 57,000 ರು. ದಂಡ ಹಾಕಿದೆ.
ಜಹೀದುಲ್ ಇಸ್ಲಾಂ ಶಿಕ್ಷೆಗೊಳಗಾದವ. ಬಾಂಗ್ಲಾದೇಶದ ಜೈಲಿನಿಂದ ತಪ್ಪಿಸಿಕೊಂಡು ಬೆಂಗಳೂರಿನಲ್ಲಿ ನೆಲೆಸಿ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಿಂದ ಮುಸ್ಲಿಂ ಯುವಕರನ್ನು ಬೆಂಗಳೂರಿಗೆ ಕರೆತಂದು ಅವರಿಗೆ ಉಗ್ರಗಾಮಿಗಳಾಗುವ ರೀತಿ ತರಬೇತಿ ನೀಡಿ, ಶಸ್ತ್ರಾಸ್ತ್ರ ತರಬೇತಿ ಕೊಡಿಸುತ್ತಿದ್ದ. ಜೊತೆಗೆ ಶಸ್ತ್ರಾಸ್ತ್ರ ಸಂಗ್ರಹ, ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಸಲು ಬೆಂಗಳೂರಿನಲ್ಲಿ ಡಕಾಯಿತಿಯನ್ನು ಸಹ ನಡೆಸಿದ್ದ. ಇದರಿಂದ ಬಂದ ಹಣವನ್ನು ಉಗ್ರ ಚಟುವಟಿಕೆಗಳಿಗೆ ಬಳಸುತ್ತಿದ್ದ.
ಯಾರೀ ಜಹಿದುಲ್ ಇಸ್ಲಾಂ?:
ಜಹಿದುಲ್ ಇಸ್ಲಾಂ ನಿಷೇಧಿತ ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ (ಜೆಎಂಬಿ) ಸಂಘಟನೆಯ ಭಾರತದ ಕಮಾಂಡರ್ ಆಗಿದ್ದು, ಈತ ಮತ್ತು ಸಂಘಟನೆಯ ಮುಖ್ಯಸ್ಥ ಸಲಾಲುದ್ದೀನ್ ಸಲೆಹಿನ್ ಬಾಂಗ್ಲಾದೇಶದಲ್ಲಿ 2005ರಲ್ಲಿ ನಡೆದ ಸರಣಿ ಸ್ಫೋಟದಲ್ಲಿ ಬಂಧಿತರಾಗಿದ್ದರು. 2014ರಲ್ಲಿ ಜೈಲಿನಿಂದ ಪರಾರಿಯಾಗಿ ಭಾರತಕ್ಕೆ ಕಾಲ್ಕಿತ್ತಿದ್ದರು. ತಲೆಮರೆಸಿಕೊಂಡಿ ದ್ದಾಗಲೇ ಪಶ್ಚಿಮ ಬಂಗಾಳದಲ್ಲಿ 2014ರಲ್ಲಿ ಸ್ಪೋಟವನ್ನು ನಡೆಸಿದ್ದರು. ಇದರಿಂದ ಇಬ್ಬರು ಮೃತಪಟ್ಟಿದ್ದರು. ಇದಾದ ಬಳಿಕ ಬೆಂಗಳೂರಿಗೆ ಬಂದು, 2018ರಲ್ಲಿ ಬೋಧಗಯಾದಲ್ಲಿ ಸ್ಫೋಟವನ್ನು ನಡೆಸಿದ್ದರು.