Bengaluru Crime: ಯಡಿಯೂರಪ್ಪ ಪುತ್ರಿಯ ಬಿಸಿನೆಸ್‌ ಪಾರ್ಟನರ್‌ ಹೆಸರಲ್ಲಿ ಭಾರೀ ವಂಚನೆ

By Kannadaprabha NewsFirst Published Sep 13, 2022, 7:27 AM IST
Highlights

ಕಡತ ವಿಲೇವಾರಿ ಮಾಡಿಸುವುದಾಗಿ 40 ಲಕ್ಷ ಮೋಸ, ಮಹಿಳೆ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್‌ ದಾಖಲು

ಬೆಂಗಳೂರು(ಸೆ.13):  ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರಿಯ ವ್ಯವಹಾರದ ಪಾಲುದಾರರೆಂದು ವ್ಯಕ್ತಿಯನ್ನು ನಂಬಿಸಿ, ನಗರಾಭಿವೃದ್ಧಿ ಇಲಾಖೆಯಲ್ಲಿನ ಕಡತ ವಿಲೇವಾರಿ ಮಾಡಿಸುವುದಾಗಿ ಸಾಲದ ರೂಪದಲ್ಲಿ 40 ಲಕ್ಷ ರು. ಪಡೆದು ವಂಚಿಸಿದ ಆರೋಪದಡಿ ಮಹಿಳೆ ಸೇರಿ ನಾಲ್ವರ ವಿರುದ್ಧ ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಕರ್ನಾಟಕ ಹ್ಯೂಮನ್‌ ರೈಟ್ಸ್‌ ಡಿಫೆಂಡ​ರ್‍ಸ್ ಪೇಪರ್‌ನ ಪತ್ರಕರ್ತ ಎಂ.ಆರ್‌.ರಾಜ್‌ಕುಮಾರ್‌ ನೀಡಿದ ದೂರಿನ ಮೇರೆಗೆ ಅಂಬಿಕಾ ಅಲಿಯಾಸ್‌ ನಾಗಲಾಂಬಿಕೆ, ಎಂಎಸ್‌ಡಿ ಕಾಮತ್‌, ರಮೇಶ್‌ಕುಮಾರ್‌ ಹಾಗೂ ಜಗದೀಶ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರುದಾರ ಎಂ.ಆರ್‌.ರಾಜ್‌ಕುಮಾರ್‌ 2021ರ ಜುಲೈ 23ರಂದು ಸದಾಶಿವನಗರದ ಸ್ಯಾಂಕಿ ರಸ್ತೆಯ ಕಾಫಿ ಡೇನಲ್ಲಿ ಪರಿಚಿತ ರಮೇಶ್‌ ಕುಮಾರ್‌ ಅವರನ್ನು ಭೇಟಿಯಾಗಿದ್ದರು. ಈ ವೇಳೆ ರಮೇಶ್‌ಕುಮಾರ್‌, ಎಂಎಸ್‌ಡಿ ಕಾಮತ್‌ ಎಂಬುವವರನ್ನು ರಾಜ್‌ಕುಮಾರ್‌ಗೆ ಪರಿಚಿಸಿದ್ದಾನೆ. ಮಾತಿನ ಮಧ್ಯ ರಾಜ್‌ಕುಮಾರ್‌, ತನ್ನ ಸ್ನೇಹಿತ ಗೋಪಾಲಕೃಷ್ಣ ಅವರಿಗೆ ಸರ್ಕಾರದಿಂದ .208.56 ಕೋಟಿ ಮೊತ್ತದ ಗುತ್ತಿಗೆ ಬಿಲ್‌ ಬಾಕಿ ಇದೆ ಎಂದಿದ್ದಾರೆ. ಈ ಬಾಕಿ ಬಿಲ್‌ ಕ್ಲಿಯರ್‌ಗೆ .30 ಕೋಟಿ ನೀಡಿದರೆ ಕೆಲಸ ಮಾಡಿ ಕೊಡುವುದಾಗಿ ಎಂಎಸ್‌ಡಿ ಕಾಮತ್‌ ಹೇಳಿದ್ದಾನೆ.

WhatsApp: ಸಿಇಒ ಪೂನಾವಾಲ ಹೆಸರಿನಲ್ಲಿ ಸೀರಂಗೆ 1 ಕೋಟಿ ವಂಚನೆ!

ಕೆಲ ಹೊತ್ತಿನ ಚರ್ಚೆಯ ಬಳಿಕ ಬಾಕಿ ಬಿಲ್‌ ಬಿಡುಗಡೆ ಮಾಡಿಸಲು ಅಂತಿಮವಾಗಿ .25 ಕೋಟಿ ನೀಡಲು ವ್ಯವಹಾರ ಕುದುರಿಸಲಾಗಿದೆ. ಅದರಂತೆ ಎಂಎಸ್‌ಡಿ ಕಾಮತ್‌, ದೇವಾಸ್‌ ಹ್ಯಾಬಿಟೇಟ್‌ ಪ್ರೈ.ಲಿ. ಕಂಪನಿ ಹೆಸರಿನಲ್ಲಿ ಕರಾರು ಒಪ್ಪಂದ ಪತ್ರ ಮಾಡಿಕೊಂಡು, .25 ಕೋಟಿ ಮೊತ್ತದ ಚೆಕ್‌ ತಂದು ಕೊಡಲು ದೂರುದಾರ ಹಾಗೂ ಅವರ ಸ್ನೇಹಿತ ಗೋಪಾಲ ಕೃಷ್ಣ ಅವರಿಗೆ ಸೂಚಿಸಿದ್ದಾನೆ. ಬಾಕಿ ಬಿಲ್‌ ಬಿಡುಗಡೆಯಾದ ಬಳಿಕವೇ .25 ಕೋಟಿ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ.

ಇದಾದ ಕೆಲ ದಿನಗಳಲ್ಲಿ ಅದೇ ಕಾಫಿ ಡೇಗೆ ಎಂಎಸ್‌ಡಿ ಕಾಮತ್‌ ಮತ್ತು ರಮೇಶ್‌ ಕುಮಾರ್‌, ಅಂಬಿಕಾ ಎಂಬ ಹೆಸರಿನ ಮಹಿಳೆಯ ಜತೆಗೆ ಬಂದಿದ್ದು, ರಾಜ್‌ಕುಮಾರ್‌ಗೆ ಆಕೆಯನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರಿ ಅರುಣಾದೇವಿ ಅವರ ವ್ಯವಹಾರದ ಪಾಲುದಾರರು ಎಂದು ನಂಬಿಸಿದ್ದಾರೆ. ಇವರ ಮೂಲಕ ಬಿಲ್‌ ಬಿಡುಗಡೆಗೊಳಿಸುವುದಾಗಿ ಹೇಳಿದ್ದಾರೆ.

ಈ ನಡುವೆ ಅಂಬಿಕಾ ಮತ್ತು ಎಂಎಸ್‌ಡಿ ಕಾಮತ್‌ .50 ಲಕ್ಷವನ್ನು ಒಂದು ತಿಂಗಳ ಅವಧಿಗೆ ಸಾಲವಾಗಿ ನೀಡುವಂತೆ ದೂರುದಾರ ರಾಜ್‌ಕುಮಾರ್‌ ಅವರನ್ನು ಕೇಳಿದ್ದಾರೆ. ಇದಕ್ಕೆ ಒಪ್ಪಿದ 2 ಕಂತುಗಳಲ್ಲಿ ಅಂಬಿಕಾಗೆ 40 ಲಕ್ಷ ನೀಡಿದ್ದಾರೆ. ಆದರೆ, ನಿಗದಿತ ಅವಧಿಯಲ್ಲಿ ಹಣವನ್ನು ವಾಪಾಸ್‌ ನೀಡಿಲ್ಲ. ಹಣ ವಾಪಾಸ್‌ ಕೊಡುವಂತೆ ಒತ್ತಡ ಹಾಕಿದಾಗ ಅವಾಚ್ಯಶಬ್ಧಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ರಾಜ್‌ಕುಮಾರ್‌ ಮನವಿ ಮಾಡಿದ್ದಾರೆ.
 

click me!