
ಬೆಂಗಳೂರು (ನ.08): ಉಪನ್ಯಾಸಕ ಎಂದು ಹೇಳಿಕೊಂಡ ವ್ಯಕ್ತಿ ಖಾಸಗಿ ಬ್ಯಾಂಕ್‌ವೊಂದಕ್ಕೆ ನಕಲಿ ದಾಖಲೆ ಸಲ್ಲಿಸಿ 15 ಲಕ್ಷ ರು. ಸಾಲ ಪಡೆದು ಬಳಿಕ ವಂಚಿಸಿದ ಆರೋಪದಡಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಸ್ತೂರ ಬಾ ರಸ್ತೆಯ ಯೆಸ್ ಬ್ಯಾಂಕಿನ ವ್ಯವಸ್ಥಾಪಕ ಗೋಪಾಲ್ ಜೀ ನವೀನ್ ಎಂಬುವವರು ನೀಡಿದ ದೂರಿನ ಮೇರೆಗೆ ಶೇಷಾದ್ರಿಪುರ ನೆಹರು ನಗರ ನಿವಾಸಿ ಕೆ.ಭಾಸ್ಕರ್ (36) ಎಂಬಾತನ ವಿರುದ್ಧ ವಂಚನೆ ಆರೋಪದಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಏನಿದು ಪ್ರಕರಣ?: ಆರೋಪಿ ಭಾಸ್ಕರ್ ಕಳೆದ 2022ರ ಜುಲೈನಲ್ಲಿ ಯೆಸ್ ಬ್ಯಾಂಕಿನ ಅಧಿಕಾರಿಗಳನ್ನು ಭೇಟಿ ಮಾಡಿದ್ದು, ತಾನು ಮೈಸೂರು ರಸ್ತೆಯ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿರುವುದಾಗಿ ಪರಿಚಯಿಸಿಕೊಂಡಿದ್ದಾನೆ. ಬಳಿಕ ನಿಗದಿತ ದಾಖಲೆಗಳನ್ನು ಬ್ಯಾಂಕಿಗೆ ಸಲ್ಲಿಸಿ 15 ಲಕ್ಷ ರು. ಸಾಲ ಪಡೆದುಕೊಂಡಿದ್ದಾನೆ. ಬಳಿಕ ಸಾಲದ ಕಂತುಗಳನ್ನು ಪಾವತಿಸಿಲ್ಲ.
ಬ್ಯಾಂಕ್ ಅಧಿಕಾರಿಗಳು ಆರೋಪಿ ಸಾಲ ಪಡೆಯುವಾಗ ಬ್ಯಾಂಕಿಗೆ ಸಲ್ಲಿಸಿದ್ದ ಕೆವೈಸಿ ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲಿಸಿದಾಗ, ನಕಲಿ ದಾಖಲೆ ಸಲ್ಲಿಸಿರುವುದು ಬೆಳಕಿಗೆ ಬಂದಿದೆ. ಆರೋಪಿಯು ಖಾಸಗಿ ಕಾಲೇಜಿನ ಉದ್ಯೋಗಿಯೊಬ್ಬರ ಪಾನ್‌ಕಾರ್ಡ್‌ನ ಫೋಟೋವನ್ನು ಮಾರ್ಫಿಂಗ್ ಮಾಡಿ, ಪಾನ್‌ಕಾರ್ಡ್ ನಕಲಿ ಮಾಡಿರುವುದು ಗೊತ್ತಾಗಿದೆ. ಆರೋಪಿಯು ಈ ಹಿಂದೆ ಬ್ಯಾಂಕ್‌ವೊಂದರಿಂದ ಸಾಲ ಪಡೆದು 4.63 ಲಕ್ಷ ರು. ಬಾಕಿ ಇರುವುದು ಬೆಳಕಿಗೆ ಬಂದಿದೆ.
ಲೋಕಾಯುಕ್ತ ಪೊಲೀಸರ ವಿಚಾರಣೆ ಬಳಿಕ ಸಿಎಂ ಸಿದ್ದರಾಮಯ್ಯಗೆ ಈಗ ಇ.ಡಿ. ನೋಟಿಸ್?
ತನ್ನ ಸಿಬಿಲ್ ಸ್ಕೋರ್ ಕಡಿಮೆಯಿದ್ದ ಹಿನ್ನೆಲೆ ಆರೋಪಿಯು ಬ್ಯಾಂಕ್‌ಗೆ ನಕಲಿ ದಾಖಲೆ ಸಲ್ಲಿಸಿ ಸಾಲ ಪಡೆದು ಬಳಿಕ ಸಾಲ ಮರುಪಾವತಿಸದೆ ವಂಚಿಸಿರುವುದು ಗೊತ್ತಾಗಿದೆ. ಈ ಸಂಬಂಧ ಯೆಸ್ ಬ್ಯಾಂಕ್ ವ್ಯವಸ್ಥಾಪಕ ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದು, ನ್ಯಾಯಾಲಯದ ಸೂಚನೆ ಮೇರೆಗೆ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಆರೋಪಿ ಭಾಸ್ಕರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ