ಕೊರೋನಾ ನೆಗೆಟಿವ್‌ ರಿಪೋರ್ಟ್‌ ನೀಡುವ ದಂಧೆ: ನಾಲ್ವರ ಬಂಧನ

By Kannadaprabha News  |  First Published May 1, 2021, 7:22 AM IST

ಹಣ ಪಡೆದು ವರದಿ ನೀಡುತ್ತಿದ್ದ ಗ್ಯಾಂಗ್‌| ಆರೋಪಿಗಳಿಂದ ಎರಡು ಮೊಬೈಲ್‌ ಹಾಗೂ ಐದು ಕೊರೋನಾ ನೆಗೆಟಿವ್‌ ವರದಿ ಜಪ್ತಿ| ಕೊರೋನಾ ನೆಗೆಟಿವ್‌ ವರದಿಗಳನ್ನು ವೈದ್ಯರ ನಕಲಿ ಸಹಿ, ಸೀಲ್‌ ಬಳಸಿ ಜನರಿಗೆ ಮಾರಾಟ| ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಸಿಸಿಬಿ ಪೊಲೀಸರು| 


ಬೆಂಗಳೂರು(ಮೇ.01): ಕೊರೋನಾ ಸೋಂಕಿತರನ್ನು ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸದೆ ನೆಗೆಟಿವ್‌ ವರದಿ ನೀಡುತ್ತಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರದ ಲ್ಯಾಬ್‌ ಟೆಕ್ನಿಶಿಯನ್‌ ಹಾಗೂ ಮಹಿಳಾ ಸಹಾಯಕಿ ಸೇರಿದಂತೆ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ದೊಮ್ಮಸಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರದ ಅನಿಲ್‌ ಕುಮಾರ್‌, ಸಹಾಯಕಿ ಭಾಗ್ಯ, ಮಧ್ಯವರ್ತಿಗಳಾದ ಚೋಡದೇನಹಳ್ಳಿ ಮುಖೇಶ್‌ ಸಿಂಗ್‌ ಹಾಗೂ ಹೊಸಹಳ್ಳಿಯ ನಾಗರಾಜ್‌ ಅಲಿಯಾಸ್‌ ಓಂ ಶಕ್ತಿ ಬಂಧಿತರಾಗಿದ್ದು, ಆರೋಪಿಗಳಿಂದ ಎರಡು ಮೊಬೈಲ್‌ ಹಾಗೂ ಐದು ಕೊರೋನಾ ನೆಗೆಟಿವ್‌ ವರದಿಗಳನ್ನು ಜಪ್ತಿ ಮಾಡಲಾಗಿದೆ.

Latest Videos

undefined

ದೊಮ್ಮಸಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೋನಾ ಸೋಂಕು ಪರೀಕ್ಷೆಗೆ ಜನರಿಂದ ಸ್ವಾ್ಯಬ್‌ಗಳನ್ನು ಪಡೆಯದೆ ಆರೋಪಿಗಳು, ಹಣ ವಸೂಲಿ ಮಾಡಿ ಜನರಿಗೆ ನೆಗೆಟಿವ್‌ ವರದಿ ನೀಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಅಧಿಕಾರಿಗಳು, ಮಾರುವೇಷದಲ್ಲಿ ಆರೋಪಿಗಳನ್ನು ಕೊರೋನಾ ವರದಿ ಪಡೆಯುವ ನೆಪದಲ್ಲಿ ಸಂಪರ್ಕಿಸಿದ್ದರು. ಅಂತೆಯೇ ಆರೋಪಿಗಳಿಗೆ ಇಬ್ಬರಿಗೆ ತಲಾ .700 ಕೊಟ್ಟಿದ್ದರು. ಮೂರು ದಿನಗಳ ಬಳಿಕ ನೆಗೆಟಿವ್‌ ವರದಿ ನೀಡುವ ವೇಳೆ ಆರೋಪಿಗಳನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕುಡಿದ ಮತ್ತಲ್ಲಿ ಘೋರ ಕೃತ್ಯ : ಗರ್ಭಿಣಿ ಪತ್ನಿ, ಎರಡು ಮಕ್ಕಳು, ತಾಯಿಯ ಭೀಕರ ಕೊಲೆ

ದೊಮ್ಮಸಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಜತೆ ಮಧ್ಯವರ್ತಿಗಳು ಶಾಮೀಲಾಗಿದ್ದಾರೆ. ಮುಖೇಶ್‌ ಹಾಗೂ ನಾಗರಾಜ್‌ ಮಧ್ಯವರ್ತಿಗಳಾಗಿದ್ದು, ಕೊರೋನಾ ಪರೀಕ್ಷೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುತ್ತಿದ್ದ ಜನರಿಗೆ ನೆಗೆಟಿವ್‌ ವರದಿ ನೀಡುವುದಾಗಿ ಹೇಳಿ ಆರೋಗ್ಯದ ಕೇಂದ್ರದ ಸಿಬ್ಬಂದಿ ಪರವಾಗಿ ಹಣ ವಸೂಲಿ ಮಾಡುತ್ತಿದ್ದರು. ಈ ಕೃತ್ಯದಲ್ಲಿ ಆರೋಗ್ಯದ ಕೇಂದ್ರದ ಇಬ್ಬರು ನೌಕರರು ಪಾಲ್ಗೊಂಡಿರುವುದು ಸಿಸಿಬಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ವೈದ್ಯರ ಸಹಿ ಮಾಡುತ್ತಿದ್ದ ಟೆಕ್ನಿಶಿಯನ್‌ ಅನಿಲ್‌

ಕೊರೋನಾ ನೆಗೆಟಿವ್‌ ವರದಿಗಳನ್ನು ವೈದ್ಯರ ನಕಲಿ ಸಹಿ, ಸೀಲ್‌ ಬಳಸಿ ಲ್ಯಾಬ್‌ ಟೆಕ್ನಿಶಿಯನ್‌ ಅನಿಲ್‌ ಕುಮಾರ್‌ ತಯಾರಿಸಿ ಜನರಿಗೆ ಮಾರಾಟ ಮಾಡುತ್ತಿದ್ದ. ಈ ನಕಲಿ ನೆಗೆಟಿವ್‌ ವರದಿ ದಂಧೆಯಲ್ಲಿ ಅನಿಲ್‌ ಮಾಸ್ಟರ್‌ ಮೈಂಡ್‌ ಆಗಿದ್ದು, ಆತನ ಸೂಚನೆ ಮೇರೆಗೆ ಹಣದಾಸೆಗೆ ಇನ್ನುಳಿದವರು ಕೃತ್ಯ ಎಸಗಿದ್ದಾರೆ. ಎಷ್ಟುಜನರಿಗೆ ವರದಿ ಕೊಡಲಾಗಿದೆ ಎಂಬ ಬಗ್ಗೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೆಲವು ಖಾಸಗಿ-ಸರ್ಕಾರಿ ಸಂಸ್ಥೆಗಳಲ್ಲಿ ಕೊರೋನಾ ಪರೀಕ್ಷೆ ವರದಿ ಸಲ್ಲಿಸುವಂತೆ ನೌಕರರಿಗೆ ಸೂಚನೆ ಇತ್ತು. ಇದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪರೀಕ್ಷೆಗಾಗಿ ತೆರಳಿದ್ದಾಗ ಆರೋಪಿಗಳು ಹಣಕ್ಕೆ ನೆಗೆಟಿವ್‌ ವರದಿ ನೀಡಿದ್ದಾರೆ ಎಂದಿದ್ದಾರೆ.
 

click me!