ಪೊಲೀಸ್‌ ದಾಳಿ: ಟಾಯ್ಲೆಟ್‌ಗೆ ಡ್ರಗ್ಸ್‌ ಎಸೆದು ನಾಶ ಪಡಿಸಿದ..!

By Kannadaprabha NewsFirst Published Mar 21, 2021, 7:23 AM IST
Highlights

ಪರಾರಿಗೆ ಯತ್ನಿಸಿದ ನೈಜೀರಿಯಾ ಪ್ರಜೆಯ ಬಂಧನ| ಆರೋಪಿಯಿಂದ 60 ಗ್ರಾಂ ಕೊಕೇನ್‌ ಹಾಗೂ ಐಫೋನ್‌ ಸೇರಿದಂತೆ 9 ಲಕ್ಷ ಮೌಲ್ಯದ ವಸ್ತು  ಜಪ್ತಿ| ವೀಸಾ ಅವಧಿ ಮುಗಿದ ಬಳಿಕವೂ ಆತ ಅಕ್ರಮವಾಗಿ ನೆಲೆಸಿದ್ದ ಆರೋಪಿ| 

ಬೆಂಗಳೂರು(ಮಾ.21): ಮಾದಕ ವಸ್ತು ಮಾರಾಟ ಜಾಲದಲ್ಲಿ ಬಿಗ್‌ಬಾಸ್‌ ಸ್ಪರ್ಧಿ ಹಾಗೂ ಚಿತ್ರ ನಿರ್ಮಾಪಕನ ಜೊತೆ ಸಂಪರ್ಕ ಹೊಂದಿರುವ ಪ್ರಕರಣ ಸಂಬಂಧ ಮತ್ತೊಬ್ಬ ವಿದೇಶಿ ಪೆಡ್ಲರ್‌ನನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನೈಜೀರಿಯಾ ಮೂಲದ ಜೇಮ್ಸ್‌ ಕೆಲ್ವಿನ್‌ ಬಂಧಿತನಾಗಿದ್ದು, ಆರೋಪಿಯಿಂದ 60 ಗ್ರಾಂ ಕೊಕೇನ್‌ ಹಾಗೂ ಐಫೋನ್‌ ಸೇರಿದಂತೆ 9 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ನಾಗವಾರ ಸಮೀಪ ಡ್ರಗ್ಸ್‌ ಮಾರಾಟ ಯತ್ನಿಸಿದ್ದಾಗ ಸೆರೆಯಾಗಿದ್ದ ಪೆಡ್ಲರ್‌ ಜಾನ್‌ ಜತೆ ಜೇಮ್ಸ್‌ ಸಂಪರ್ಕದಲ್ಲಿದ್ದ. ವಿಚಾರಣೆ ವೇಳೆ ಜಾನ್‌ ನೀಡಿದ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರು: ನೈಜೀರಿಯಾ ಪ್ರಜೆಗಳಿಂದ 75 ಲಕ್ಷದ ಡ್ರಗ್ಸ್‌ ವಶ

ಟಾಯ್ಲೆಟ್‌ಗೆ ಡ್ರಗ್ಸ್‌ ಎಸೆದ ಆರೋಪಿ

ಹದಿನೈದು ವರ್ಷಗಳ ಹಿಂದೆ ನಗರಕ್ಕೆ ಬಂದಿರುವ ಜೇಮ್ಸ್‌, ಹೆಬ್ಬಾಳ ಸಮೀಪದ ಕೆಂಪಾಪುರದಲ್ಲಿ ತನ್ನ ಕುಟುಂಬದ ಜತೆ ನೆಲೆಸಿದ್ದ. ವೀಸಾ ಅವಧಿ ಮುಗಿದ ಬಳಿಕವೂ ಆತ ಅಕ್ರಮವಾಗಿ ನೆಲೆಸಿದ್ದ. ಹಣಕ್ಕಾಗಿ ಡ್ರಗ್ಸ್‌ ದಂಧೆಯಲ್ಲಿ ತೊಡಗಿದ್ದ ಆರೋಪಿ, ಪೆಡ್ಲರ್‌ ಜಾನ್‌ ಮೂಲಕ ಡ್ರಗ್ಸ್‌ ಖರೀದಿಸಿ ಗ್ರಾಹಕರಿಗೆ ಮಾರುತ್ತಿದ್ದ. ಜಾನ್‌ ಬಂಧನ ಬಳಿಕ ಆತನ ಸಹಚರರಿಗೆ ಹುಡುಕಾಟ ನಡೆಸಲಾಗಿತ್ತು. ಕೆಂಪಾಪುರದ ಜೇಮ್ಸ್‌ ಮನೆ ಮೇಲೆ ದಾಳಿ ನಡೆಸಿದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆ ವೇಳೆ ತನ್ನ ಬಳಿ ಇದ್ದ ಮಾದಕ ವಸ್ತುವನ್ನು ಟಾಯ್ಲೆಟ್‌ನಲ್ಲಿ ಹಾಕಿ ಆರೋಪಿ ನಾಶ ಮಾಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ನಾಗವಾರ ಸಮೀಪ ಡ್ರಗ್ಸ್‌ ಮಾರಾಟದ ವೇಳೆ ಸೆರೆಯಾದ ಆಫ್ರಿಕಾ ಮೂಲದ ಪೆಡ್ಲರ್‌ಗಳಿಗೆ ಬಿಗ್‌ಬಾಸ್‌ ಸ್ಪರ್ಧಿ ಚಂದ್ರ ಮಸ್ತಾನ್‌, ಚಲನಚಿತ್ರ ನಿರ್ಮಾಪಕ ಶಂಕರೇಗೌಡ, ತೆಲುಗು ನಟ ತಾನೀಶ್‌ ಸೇರಿದಂತೆ ಇತರರ ಸಂಪರ್ಕ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಕೆಲವರ ಪೊಲೀಸ್‌ ವಿಚಾರಣೆ ಸಹ ನಡೆದಿದೆ.
 

click me!