ಮಾದಕ ವಸ್ತು ದಂಧೆ: ಅಂತಾರಾಜ್ಯ ಪೆಡ್ಲ​ರ್ಸ್‌ ಸೇರಿ ಐವರ ಬಂಧನ

By Kannadaprabha NewsFirst Published Sep 19, 2020, 7:25 AM IST
Highlights

ಲಕ್ಷಾಂತರ ಮೌಲ್ಯದ 17.8 ಕೆ.ಜಿ. ಗಾಂಜಾ, 600 ಎಂ.ಎಲ್‌ ಗಾಂಜಾ ಆಯಿಲ್‌ ಜಪ್ತಿ| ಮಲ್ಲೇಶ್ವರಂ, ಶ್ರೀರಾಮಪುರ, ಸುಬ್ರಮಣ್ಯನಗರ ಸೇರಿದಂತೆ 12 ಠಾಣಾ ವ್ಯಾಪ್ತಿಯಲ್ಲಿ 33 ಮಾದಕ ವ್ಯಸನಿಗಳ ಬಂಧನ| ಖಚಿತ ಮಾಹಿತಿ ಮೇರೆಗೆ ಪೊಲೀಸರ ದಾಳಿ| 

ಬೆಂಗಳೂರು(ಸೆ.19): ಉತ್ತರ ವಿಭಾಗದ ಪೊಲೀಸರು ಮಾದಕ ವಸ್ತು ದಂಧೆಕೋರರ ವಿರುದ್ಧ ಕಾರ್ಯಾಚರಣೆ ನಡೆಸಿ ಮೂವರು ಅಂತಾರಾಜ್ಯ ಪೆಡ್ಲರ್‌ಗಳು ಸೇರಿ ಐವರನ್ನು ಬಂಧಿಸಿದ್ದು, ಆರೋಪಿಗಳಿಂದ ಲಕ್ಷಾಂತರ ಮೌಲ್ಯದ 17.8 ಕೆ.ಜಿ. ಗಾಂಜಾ ಮತ್ತು 600 ಎಂ.ಎಲ್‌ ಗಾಂಜಾ ಆಯಿಲ್‌ ಜಪ್ತಿ ಮಾಡಲಾಗಿದೆ. ಎರಡು ಪ್ರತ್ಯೇಕ ಪ್ರಕರಣದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಅಂತಾರಾಜ್ಯ ಪೆಡ್ಲರ್‌ ಸೇರಿ ಮೂವರು ಆರೋಪಿಗಳು ಆರ್‌ಎಂಸಿ ಯಾರ್ಡ್‌ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ತಮಿಳುನಾಡು ಮೂಲದ ಅರುಣ್‌ (29), ವಿಜಯನ್‌ (25) ಹಾಗೂ ಮಾಗಡಿ ಮುಖ್ಯರಸ್ತೆಯ ಮಾಚೋಹಳ್ಳಿ ನಿವಾಸಿ ದೀಪನ್‌ ಅಲಿಯಾಸ್‌ ಕಾರ್ತಿಕ್‌ (24) ಬಂಧಿತರು. ಆರೋಪಿಗಳಿಂದ 13.8 ಕೆ.ಜಿ. ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಅರುಣ್‌ ತಮಿಳುನಾಡಿನಲ್ಲಿ ಮೊಬೈಲ್‌ ಅಂಗಡಿ ಇಟ್ಟುಕೊಂಡಿದ್ದರೆ, ವಿಜಯನ್‌ ಕಾರು ಚಾಲಕನಾಗಿದ್ದಾನೆ. ಬೆಂಗಳೂರಿನಲ್ಲಿ ತಮ್ಮದೇ ಆದ ಜಾಲ ಸೃಷ್ಟಿಸಿಕೊಂಡಿರುವ ಆರೋಪಿಗಳು ಮೂರ್ನಾಲ್ಕು ವರ್ಷದಿಂದ ದಂಧೆಯಲ್ಲಿ ತೊಡಗಿದ್ದರು. ಬಸ್‌ನಲ್ಲಿ ಬಂದು ಒಂದು ಕೆ.ಜಿ. ಗಾಂಜಾವನ್ನು ಸುಮಾರು 25 ಸಾವಿರದಿಂದ 40 ಸಾವಿರದ ತನಕ ಮಾರಾಟ ಮಾಡುತ್ತಿದ್ದರು. ಯಶವಂತಪುರ ಕೈಗಾರಿಕಾ ಪ್ರದೇಶದಲ್ಲಿನ ಕಾಲೇಜು ಸುತ್ತ-ಮುತ್ತ ಪ್ರದೇಶದಲ್ಲಿ ಸಬ್‌ ಪೆಡ್ಲರ್‌ಗಳಿಗೆ ಪೂರೈಕೆ ಮಾಡುತ್ತಿದ್ದರು. ದಾಳಿ ವೇಳೆ ಆರೋಪಿಗಳಿಂದ 10.4 ಕೆ.ಜಿ. ಪತ್ತೆ ಹಚ್ಚಲಾಯಿತು ಎಂದು ಪೊಲೀಸರು ತಿಳಿಸಿದರು.

ಜೆಲ್ಲಿ ಡ್ರಗ್ಸ್‌ ಮಾರಾಟ ಜಾಲ ಪತ್ತೆ: ಕಾಲೇಜು ವಿದ್ಯಾ​ರ್ಥಿ​ಗಳು, ಟೆಕ್ಕಿ​ಗಳೇ ಟಾರ್ಗೆಟ್‌

ಮತ್ತೊಂದು ಪ್ರಕರಣದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ದೀಪನ್‌ ಎಂಬಾತನನ್ನು ಬಂಧಿಸಲಾಗಿದೆ. ದೀಪನ್‌ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದು, ಮೊದಲ ಮಾದಕ ವ್ಯಸನಿಯಾಗಿದ್ದ. ಸುಲಭವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಮಾದಕ ವಸ್ತು ಮಾರಾಟ ದಂಧೆಗೆ ಇಳಿದಿದ್ದ. ಆರೋಪಿಯಿಂದ 3.4 ಕೆ.ಜಿ.ಜಪ್ತಿ ಮಾಡಲಾಗಿದೆ.

ಗಾಂಜಾ ಆಯಿಲ್‌ ಜಪ್ತಿ: 

ಜಾಲಹಳ್ಳಿಯ ಸೆಂಟ್‌ಕ್ಲಾರೆಟ್‌ ಕಾಲೇಜು ಬಳಿ ಅಪರಿಚಿತ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ತವನೀಶ್‌ ಅಲಿಯಾಸ್‌ ಈಶ (35) ಎಂಬಾತನನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 600 ಎಂ.ಎಲ್‌.ಗಾಂಜಾ ಆಯಿಲ್‌ ಜಪ್ತಿ ಮಾಡಲಾಗಿದೆ. ಜಾಲಹಳ್ಳಿ ವಿಲೇಜ್‌ ನಿವಾಸಿ ಆರೋಪಿ ಹೊರ ರಾಜ್ಯದಿಂದ ಮಾದಕ ದ್ರವ್ಯ ತಂದು ಮಾರಾಟ ಮಾಡುತ್ತಿದ್ದ. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇನ್ನು ಮಲ್ಲೇಶ್ವರಂ, ಶ್ರೀರಾಮಪುರ, ಸುಬ್ರಮಣ್ಯನಗರ ಸೇರಿದಂತೆ 12 ಠಾಣಾ ವ್ಯಾಪ್ತಿಯಲ್ಲಿ 33 ಮಾದಕ ವ್ಯಸನಿಗಳನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಬಿ.ಟೆಕ್‌ ವಿದ್ಯಾರ್ಥಿ ಸೆರೆ

ಆಂಧ್ರಪ್ರದೇಶದಿಂದ ಮಾದಕ ವಸ್ತು ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಬಿ.ಟೆಕ್‌ ವಿದ್ಯಾರ್ಥಿಯೊಬ್ಬನನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ವಿಜಯವಾಡ ಜಿಲ್ಲೆಯ ವಿನಯ್‌ ಕುಮಾರ್‌ ಡೆಸಿಯಾಕೆ (22) ಬಂಧಿತ. ಆರೋಪಿಯಿಂದ 4.9 ಕೆ.ಜಿ. ಗಾಂಜಾ ತೂಕದ ವಶಕ್ಕೆ ಪಡೆಯಲಾಗಿದೆ.

ಆರೋಪಿ ವಿಜಯವಾಡದಲ್ಲಿ ಬಿ.ಟೆಕ್‌ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಾನೆ. ಬಸ್‌ನಲ್ಲಿ ಗಾಂಜಾ ತರುತ್ತಿದ್ದ ಆರೋಪಿ ನಗರದ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡಿ ಹೋಗುತ್ತಿದ್ದ. ಬಂದ ಹಣದಲ್ಲಿ ಮೋಜು ಮಾಡುತ್ತಿದ್ದ. ಮೊದಲ ಬಾರಿಗೆ ಸಿಕ್ಕಿ ಬಿದ್ದಿದ್ದಾನೆ. ಆಂಧ್ರಪ್ರದೇಶ ಮತ್ತು ಒಡಿಶಾ ರಾಜ್ಯಗಳ ನಡುವೆ ಬರುವ ಅಕುರ್‌ ವ್ಯಾಲಿಯಲ್ಲಿ ವ್ಯಕ್ತಿಯೊಬ್ಬರಿಂದ ಮಾದಕ ವಸ್ತು ಖರೀದಿಸುತ್ತಿದ್ದ ಎಂಬುದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 

click me!