
ಕಲಬುರಗಿ (ಏ.27): ಏಪ್ರಿಲ್ 9ರಂದು ಕಲಬುರಗಿಯಲ್ಲಿ ನಡೆದಿದ್ದ ಎಟಿಎಂ ದರೋಡೆ ಪ್ರಕರಣ ಕೇವಲ 15 ದಿನದಲ್ಲಿ ಭೇದಿಸಿರುವ ಇಲ್ಲಿನ ಪೊಲೀಸರು, ಶನಿವಾರ ಬೆಳ್ಳಂ ಬೆಳಗ್ಗೆ ಇಲ್ಲಿನ ಬೇಲೂರು ಕ್ರಾಸ್ ಬಳಿ ಹರಿಯಾಣ ಮೂಲದ ಎಟಿಎಂ ದರೋಡೆಕೋರ ಗ್ಯಾಂಗ್ ಮೇಲೆ ಗುಂಡಿನ ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಹರಿಯಾಣದ ಶಿರೋಳಿಯ ತಸ್ಲೀಂ (28), ತವಾಣೆಯ ಶರೀಫ್ (20), ಶಿಕಾಂಪೂರದ ಶಾಹೀದ್ (27) ಹಾಗೂ ಕಾರು ಚಾಲಕ ಹೈದ್ರಾಬಾದ್‌ನ ಅಮೀರ್ (25) ಎಂದು ಗುರುತಿಸಲಾಗಿದೆ.
ಇವರೆಲ್ಲರೂ ಇಲ್ಲಿನ ರಿಂಗ್ ರಸ್ತೆ ಪೂಜಾರಿ ಚೌಕ್ ಹತ್ತಿರವಿರುವ ಎಸ್‌ಬಿಐ ಎಟಿಎಂನಲ್ಲಿ ಏ.9ರಂದು ₹18 ಲಕ್ಷ ದೋಚಿ ಪರಾರಿಯಾಗಿದ್ದರು. ಬೇಲೂರ್ ಕ್ರಾಸ್ ಬಳಿ ಇನ್ನೊಂದು ಎಟಿಎಂ ದೋಚಲು ಹೊಂಚು ಹಾಕಿ ಕಲಬುರಗಿಗೆ ಬಂದಿದ್ದರು. ಆರೋಪಿಗಳು ಏ.9ರ ದರೋಡೆ ಒಪ್ಪಿಕೊಂಡಿದ್ದಾರಾದರೂ, ದುಡ್ಡು ಪತ್ತೆಯಾಗಿಲ್ಲ. ಗ್ಯಾಸ್ ಕಟ್ಟರ್ ಮಶೀನ್, ಸಿಲಿಂಡರ್, ಐ20 ಕಾರು ಜಪ್ತಿ ಮಾಡಲಾಗಿದೆ ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ। ಶರಣಪ್ಪ ಢಗೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ಈ ಹಿಂದೆ ದರೋಡೆಗೆ ಬಿಳಿ ಬಣ್ಣದ ಐ-20 ಕಾರು ಬಳಸಿದ ಬಗ್ಗೆ ಮಾಹಿತಿ ಇತ್ತು.
ನಿಗಾ ಇಡಲು ಸೂಚಿಸಲಾಗಿತ್ತು. ಶುಕ್ರವಾರ ರಾತ್ರಿ ಬೇಲೂರು ಕ್ರಾಸ್ ಬಳಿ ಎಸ್ಬಿಐ ಎಟಿಎಂ ಹತ್ತಿರ ಬಿಳಿ ಬಣ್ಣದ ಐ- 20 ಕಾರು ಸುತ್ತಾಡುತ್ತಿರುವುದನ್ನು ರಾತ್ರಿ ಗಸ್ತು ಪೊಲೀಸರು ಕಂಡಿದ್ದಾರೆ. ತನಿಖಾಧಿಕಾರಿ ಗ್ರಾಮೀಣ ಠಾಣೆ ಪಿಐ ಸಂತೋಷ ತಟ್ಟೆಪಳ್ಳಿಗೆ ಮಾಹಿತಿ ನೀಡಿದ್ದಾರೆ. ಸಂತೋಷ ಸಿಬ್ಬಂದಿ ಸಮೇತ ಸ್ಥಳಕ್ಕೆ ಧಾವಿಸಿ ಐ - 20 ಕಾರು ಬೆನ್ನಟ್ಟಿದ್ದಾರೆ. ಆರೋಪಿಗಳು ಪೊಲೀಸರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಆತ್ಮರಕ್ಷಣೆಗೋಸ್ಕರ ಪಿಐ ಸಂತೋಷ, ಪಿಎಸ್‌ಐ ಬಸವರಾಜ ಆರೋಪಿಗಳಿಬ್ಬರ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆಂದು ಡಾ.ಶರಣಪ್ಪ ಢಗೆ ಮಾಹಿತಿ ನೀಡಿದರು.
ಪಾಕಿಸ್ತಾನ ಪ್ರಜೆಗಳ ವಾಪಸ್ ಕಳುಹಿಸಿ: ಗೃಹ ಸಚಿವ ಪರಮೇಶ್ವರ್
ಘಟನೆಯಲ್ಲಿ ಪೊಲೀಸ್ ಕಾನ್‌ಸ್ಟೆಬಲ್‌ಗಳಾದ ಮಂಜು, ಫಿರೋಜ್, ರಾಜಕುಮಾರ್ ಅವರಿಗೂ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳನ್ನು ಕಲಬುರಗಿ ಜಿಮ್ಸ್‌ಗೆ ದಾಖಲಿಸಲಾಗಿದೆ. ದರೋಡೆಕೋರರನ್ನು ಬಂಧಿಸಿದ ತಂಡಕ್ಕೆ ಕಮೀಶ್ನರ್ ಶರಣಪ್ಪ ಅವರು ₹25 ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ