ಆತ್ಮಹತ್ಯೆಗೆ ಪ್ರಚೋದನೆ ಆರೋಪ, ಟೀಮ್‌ ಇಂಡಿಯಾ ವಿಶ್ವಕಪ್‌ ಹೀರೋ ಮೇಲೆ ಬಿತ್ತು ಎಫ್‌ಐಆರ್‌!

By Santosh Naik  |  First Published Jan 5, 2024, 3:30 PM IST

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಟೀಮ್‌ ಇಂಡಿಯಾ ವಿಶ್ವಕಪ್‌ ಗೆಲುವಿನ ಹೀರೋ ಮೇಲೆ ಎಫ್‌ಐಆರ್‌ ದಾಖಲು ಮಾಡಲಾಗಿದೆ. ಈ ಕುರಿತಂತೆ ತನಿಖೆ ಕೂಡ ಆರಂಭವಾಗಿದೆ.
 


ನವದೆಹಲಿ (ಜ.5): ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೊಟ್ಟಮೊದಲ ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಐತಿಹಾಸಿಕ ಕೊನೆಯ ಓವರ್‌ ಎಸೆದು ಪಾಕಿಸ್ತಾನ ತಂಡದ ವಿರುದ್ಧ ಭಾರತದ ಗೆಲುವಿಗೆ ಕಾರಣರಾದ ಜೋಗಿಂದರ್‌ ಶರ್ಮ ನೆನಪಿರಬೇಕಲ್ಲ. ಹೌದು, ಟೀಮ್‌ ಇಂಡಿಯಾ ವಿಶ್ವಕಪ್‌ ಹೀರೋ ಆಗಿ ಮಿಂಚಿ ಬಳಿಕ ಹರಿಯಾಣ ಪೊಲೀಸ್‌ ಇಲಾಖೆಯಲ್ಲಿ ಡಿಎಸ್‌ಪಿ ಕೆಲಸ ಪಡೆದುಕೊಂಡಿದ್ದ ಜೋಗಿಂದರ್‌ ಶರ್ಮ ವಿರುದ್ಧ ಈಗ ಎಫ್ಐಆರ್ ದಾಖಲಾಗಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಜೋಗಿಂದರ್‌ ವಿರುದ್ಧ ಎಫ್‌ಐ ಆರ್‌ ದಾಖಲು ಮಾಡಲಾಗಿದೆ.  ಜೋಗಿಂದರ್ ಶರ್ಮಾ ಸೇರಿದಂತೆ ಆರು ಜನರ ವಿರುದ್ಧ ಹಿಸಾರ್‌ನ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಹಿಸಾರ್‌ನ ದಬ್ರಾ ಗ್ರಾಮದ ಪವನ್ ಎಂಬ ವ್ಯಕ್ತಿಯನ್ನು ಆತ್ಮಹತ್ಯೆಗೆ ಪ್ರಚೋದಿಸಿದ್ದಕ್ಕಾಗಿ ಜೋಗಿಂದರ್‌ ವಿರುದ್ಧ ಪ್ರಕರಣ ದಾಖಲಾಗಿದೆ. ಅದೇ ವೇಳೆ ಜೋಗಿಂದರ್ ಈ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ. 

ಆರೋಪಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಹಾಗೂ ಎಸ್‌ಸಿ-ಎಸ್‌ಟಿ ಸೆಕ್ಷನ್‌ ಸೇರಿಸಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಎಎಸ್‌ಪಿ ರಾಜೇಶ್‌ ಕುಮಾರ್‌ ಮೋಹನ್‌ ತಿಳಿಸಿದ್ದಾರೆ. ಪವನ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಹಿಸಾರ್‌ನ ಆಜಾದ್ ನಗರ ಪೊಲೀಸ್ ಠಾಣೆ ಪ್ರಭಾರಿ ಸಂದೀಪ್ ಕುಮಾರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಟುಂಬದ ಸದಸ್ಯರು ಡಿಎಸ್‌ಪಿ ಮೇಲೂ ಆರೋಪ ಮಾಡುತ್ತಿದ್ದಾರೆ, ಈ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ. ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದ ವಿಷಯವನ್ನು ಮತ್ತೊಮ್ಮೆ ಮರು ತನಿಖೆ ನಡೆಸಲಾಗುವುದು ಎಂದು ರಾಜೇಶ್ ಕುಮಾರ್ ಮೋಹನ್ ತಿಳಿಸಿದ್ದಾರೆ.

ಏನಿದು ಘಟನೆ: ಪಾಬ್ದ ಗ್ರಾಮದ ಸುನೀತಾ ಎಂಬುವರು ಜ.2ರಂದು ಆಜಾದ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತಮ್ಮ ಮನೆಗೆ ಸಂಬಂಧಿಸಿದಂತೆ ಅಜಯವೀರ್, ಈಶ್ವರ್ ಪ್ರೇಮ್, ರಾಜೇಂದ್ರ ಸಿಹಾಗ್ ಸೇರಿ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಈ ಪ್ರಕರಣದಿಂದ ಪುತ್ರ ಪವನ್ ತೀವ್ರ ನೊಂದಿದ್ದರು. ಜನವರಿ 1ರಂದು ಮಗ ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕುಟುಂಬಸ್ಥರ ದೂರಿನ ಮೇರೆಗೆ ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tap to resize

Latest Videos

ಮಾಜಿ ಕ್ರಿಕೆಟಿಗ ಹಾಗೂ ಹಿಸಾರ್‌ ಠಾಣೆಯ ಡಿಎಸ್‌ಪಿ ಜೋಗಿಂದರ್, ಅಜಯವೀರ್, ಈಶ್ವರ್ ಪ್ರೇಮ್, ರಾಜೇಂದ್ರ ಮತ್ತಿತರರು ತಮ್ಮ ಮಗನಿಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಮೃತರ ತಾಯಿ ಆರೋಪಿಸಿದ್ದಾರೆ. ಎಸ್‌ಸಿ-ಎಸ್‌ಟಿ ಸೆಕ್ಷನ್‌ ಸೇರಿಸುವುದು ಸೇರಿದಂತೆ ಆರು ಬೇಡಿಕೆಗಳನ್ನು ಕುಟುಂಬ ಸದಸ್ಯರು ಗುರುವಾರ ಎಎಸ್‌ಪಿ ಮುಂದೆ ಸಲ್ಲಿಸಿದ್ದಾರೆ. ಈ ಕುರಿತು ತಡರಾತ್ರಿಯವರೆಗೂ ಪ್ರತಿಭಟನೆ ಮುಂದುವರಿದಿತ್ತು.

ಧರಣಿ ಕುಳಿತಿದ್ದ ಪವನ್ ಕುಟುಂಬದ ಸದಸ್ಯರನ್ನು ಭೇಟಿ ಮಾಡಲು ಡಿಎಸ್ಪಿ ಅಶೋಕ್ ಕುಮಾರ್ ಆಗಮಿಸಿದರು. ಹಿಸ್ಸಾರ್ ಪೊಲೀಸರ ತನಿಖೆಯಿಂದ ನೀವು ತೃಪ್ತರಾಗದಿದ್ದರೆ, ಹಿಸಾರ್ ವಿಭಾಗದಲ್ಲಿ ಬರುವ ಇತರ ನಾಲ್ಕು ಜಿಲ್ಲೆಗಳ ಯಾವುದೇ ಅಧಿಕಾರಿಯಿಂದ ನೀವು ತನಿಖೆಯನ್ನು ಮಾಡಬಹುದು ಎಂದು ಅವರು ಹೇಳಿದರು. ಡಿಎಸ್ಪಿ ಮಾತಿಗೆ ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ತನಿಖೆ ನಡೆಸಿ ಎಎಸ್‌ಪಿ ಅವರ ಬಳಿಯೇ ಮಾತನಾಡುವಂತೆ ಕೋರಿದರು. ಎಎಸ್ಪಿ ಡಾ.ರಾಜೇಶ್ ಮೋಹನ್ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುವುದಾಗಿ ಕುಟುಂಬಸ್ಥರಿಗೆ ಭರವಸೆ ನೀಡಿದ್ದಾರೆ.

2007ರ ಟಿ20 ವಿಶ್ವಕಪ್ ಹೀರೋ, ಇದೀಗ ರಿಯಲ್ ಲೈಫ್‌ನಲ್ಲೂ ಹೀರೋನೇ..!

ಕುಟುಂಬಸ್ಥರ ಬೇಡಿಕೆಯೇನು: ಮೃತ ಯುವಕನ ಅಂತ್ಯಸಂಸ್ಕಾರದ ವೆಚ್ಚವನ್ನೂ ಆಡಳಿತ ಮಂಡಳಿಯೇ ಭರಿಸಬೇಕು. ಸಂತ್ರಸ್ತ ಕುಟುಂಬದ ಒಬ್ಬ ಮಗಳು ಮತ್ತು ಒಬ್ಬ ಮಗ ಓದುತ್ತಿದ್ದು, ಅವರಿಗೆ ಆರ್ಥಿಕ ಸಹಾಯ ಮಾಡಬೇಕು. ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಶಸ್ತ್ರಾಸ್ತ್ರ ಪರವಾನಗಿಗಳನ್ನು ನೀಡಬೇಕು. 50 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಬೇಕು. ಕುಟುಂಬದ ಸದಸ್ಯರಿಗೆ ಸರ್ಕಾರಿ ಇಲಾಖೆಯಲ್ಲಿ ಉದ್ಯೋಗ ನೀಡಬೇಕು. ಕಳೆದ ಮಾರ್ಚ್ ನಲ್ಲಿ ಸಿರ್ಸಾ ಎಸ್ಪಿಗೆ ನೀಡಿದ ದೂರಿನ ಕುರಿತು ತನಿಖೆ ನಡೆಸಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ 2020-2021ರ ಕಳೆದ ಮೂರು ಪ್ರಕರಣಗಳಲ್ಲಿ ಮೂರು ಪ್ರಕರಣಗಳ ತನಿಖೆ ನಡೆಸಿ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಮನವಿ ಮಾಡಿದ್ದಾರೆ.

ಪೊಲೀಸ್‌ ಸೇವೆಗೆ ಹಾಜರಾದ ಭಾರತದ ಕ್ರೀಡಾ ತಾರೆಯರು!

ಪವನ್‌ ಯಾರು ಅನ್ನೋದೇ ಗೊತ್ತಿಲ್ಲ ಎಂದ ಜೋಗಿಂದರ್: ಈ ವಿಷಯಕ್ಕೆ ಸಂಬಂಧಿಸಿದಂತೆ ಹಿಸಾರ್ ಜನರಲ್ ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಯುತ್ತಿದೆ. ತಮ್ಮ ಬೇಡಿಕೆ ಈಡೇರುವವರೆಗೂ ಶವ ಸಂಸ್ಕಾರ ಮಾಡುವುದಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಈ ವಿಷಯದ ಬಗ್ಗೆ ಡಿಎಸ್ಪಿ ಜೋಗಿಂದರ್ ಶರ್ಮಾ ಅವರು ಈ ವಿಷಯ ತಮ್ಮ ಅರಿವಿಗೆ ಬಂದಿಲ್ಲ. ನನಗೆ ಪವನ್‌ನ ಪರಿಚಯವೂ ಇಲ್ಲ, ಭೇಟಿಯೂ ಇಲ್ಲ ಎಂದಿದ್ದಾರೆ. ನನ್ನ ಮೂರೂವರೆ ವರ್ಷಗಳ ಅವಧಿಯಲ್ಲಿ ಸಾಕಷ್ಟು ತನಿಖೆ ನಡೆಸಿದ್ದು, ಅಂತಹ ಯಾವುದೇ ಪ್ರಕರಣ ನನ್ನ ಗಮನಕ್ಕೆ ಬಂದಿಲ್ಲ ಎಂದಿದ್ದಾರೆ.
 

click me!