ರಾಜ್ಯಾದ್ಯಂತ ಸೋಮವಾರ ಸುರಿದ ಸಂಜೆ ಮಳೆಗೆ ವಿಜಯಪುರ ಹಾಗೂ ಬಳ್ಳಾರಿಯಲ್ಲಿ ಉಳುಮೆ ಮಾಡುತ್ತಿದ್ದ ರೈತರು ಹೊಲದಲ್ಲಿಯೇ ಸಾವನ್ನಪ್ಪಿದ್ದಾರೆ.
ವಿಜಯಪುರ (ಮೇ 29) : ರಾಜ್ಯಾದ್ಯಂತ ಕಳೆದೊಂದು ವಾರದಿಂದ ಭಾರಿ ಗುಡುಗು, ಮಿಂಚು, ಬಿರುಗಾಳಿ ಹಾಗೂ ಸಿಡಿಲು ಸಮೇತವಾಗಿ ಮಳೆಯಾಗುತ್ತಿದ್ದು, ಸೋಮವಾರ ಸುರಿದ ಸಂಜೆ ಮಳೆಗೆ ವಿಜಯಪುರ ಹಾಗೂ ಬಳ್ಳಾರಿಯಲ್ಲಿ ಉಳುಮೆ ಮಾಡುತ್ತಿದ್ದ ರೈತರು ಹೊಲದಲ್ಲಿಯೇ ಸಾವನ್ನಪ್ಪಿದ್ದಾರೆ.
ವಿಜಯಪುರ ತಾಲೂಕಿನ ಕಿರಶ್ಯಾಳ ಗ್ರಾಮದಲ್ಲಿ ಸೋಮವಾರ ಸಂಜೆ ಸಿಡಿಲು ಬಡಿದು ಯುವ ರೈತನೊಬ್ಬ ಮೃತಪಟ್ಟರೆ ಇಬ್ಬರು ಮೂರ್ಛೆ ಹೋದ ಘಟನೆ ಜರುಗಿದೆ. ಕಿರಿಶ್ಯಾಳ ಗ್ರಾಮದ ದ್ಯಾಮಣ್ಣ ಸಿದ್ದಪ್ಪ ಸೀರೆಕಾರ (22) ಮೃತಪಟ್ಟವರು. ದ್ಯಾಮಣ್ಣ ಸೀರೆಕಾರ, ಬಸಪ್ಪ ಸೀರೆಕಾರ (25) ಹಾಗೂ ಬಸಪ್ಪ ಹೊನ್ನಪ್ಪ ವಗ್ಗರ (25) ಅವರು ಜಮೀನಿನಲ್ಲಿ ಸಂಗ್ರಹಿಸಿದ್ದ ಈರುಳ್ಳಿಗೆ ಹಾಳೆ ಹೊದಿಸುತ್ತಿದ್ದರು. ಈ ಸಂದರ್ಭದಲ್ಲಿ ಸಿಡಿಲು ಬಿದ್ದಿದ್ದರಿಂದ ದ್ಯಾಮಣ್ಣ ಸ್ಥಳದಲ್ಲೇ ಮೃತಪಟ್ಟರೆ ಅವರ ಜತೆಗಿದ್ದ ಇಬ್ಬರು ಮೂರ್ಛೆಗೊಂಡಿದ್ದರು.
ಮದುವೆಯಾದ್ರೆ ನೀವಿಬ್ರೂ ಉಳಿಯಲ್ಲ, ಹೆಂಗ್ ಮದ್ವೆ ಆಗ್ತೀರೋ ಆಗ್ರಿ: ಪ್ರೇಮಿಗಳಿಗೆ ಪ್ರಾಣ ಬೆದರಿಕೆ
ಕೃಷಿ ಕೆಲಸಕ್ಕೆ ಹೋದ ಮಗ ಮಸಣ ಸೇರಿದ: ಇನ್ನು ಘಟನೆ ಕುರಿತು ನಿಡಗುಂದಿ ಪೊಲೀಸ್ ಠಾಣಾಧಿಕಾರಿ ಹಾಲಪ್ಪ ಬಾಲದಂಡಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ನಂತರ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನಿಡಗುಂದಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಹೊಲದಲ್ಲಿ ಕೃಷಿ ಕೆಲಸಕ್ಕೆ ಹೋದ ಮಗ ಮರಳಿ ಮನೆಗೆ ಬಾರದೇ ಮಸಣ ಸೇರಿದನೆಂದು ಮೃತರ ಯುವಕನ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.
ಬಳ್ಳಾರಿಯಲ್ಲಿ ಉಳುಮೆ ಮಾಡುತ್ತಿದ್ದ ರೈತ ಸಾವು: ಬಳ್ಳಾರಿ ತಾಲೂಕಿನಲ್ಲಿಯೂ ಕೂಡ ಸಂಜೆ ಮಳೆಯ ವೇಳೆ ಸಿಡಿಲು ಬಡಿದು ರೈತ ಸಾವನ್ನಪ್ಪಿದ್ದಾರೆ. ಬಳ್ಳಾರಿ ತಾಲೂಕಿನ ಕುಂಟನಾಳ ಗ್ರಾಮದಲ್ಲಿ ಘಟನೆ ನಡೆದಿದೆ. ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಸಾವನ್ನಪ್ಪಿದ ರೈತನನ್ನು ಪಂಪಣ್ಣ (50) ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಉಳುಮೆ ಮಾಡಲು ತೆರಳಿದ್ದನು. ಈ ವೇಳೆ ಮಳೆ ಜೋರಾಗಿ ಸುರಿಯುತ್ತಿದ್ದರಿಂದ ಎತ್ತುಗಳನ್ನು ಹೊಲದಲ್ಲಿ ಬಿಟ್ಟು ರೈತ ಪಂಪಣ್ಣ ಮರದ ಬಳಿ ಬಂದು ನಿಂತಿದ್ದರು. ಆದರೆ, ಸಿಡಿಲು ಮರದ ಬುಡಕ್ಕೆ ಹೊಡೆದಿದ್ದು, ಮರದಡಿ ನಿಂತಿದ್ದ ರೈತನೂ ಬರಸಿಡಿಲಿನ ಹೊಡೆತಕ್ಕೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಕಂದಾಯ ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ: ಇನ್ನು ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಸಿಡಿಲು ಬಡಿದಿದ್ದನ್ನು ಕಂಡು ಪಂಪಣ್ಣ ನಿಂತಿದ್ದ ಸ್ಥಳಕ್ಕೆ ಬಂದಿದ್ದಾರೆ. ಅಷ್ಟರಲ್ಲಾಗಲೇ ಪಂಪಣ್ಣ ಸ್ಥಳದಲ್ಲಿಯೇ ಸಾವನ್ನಪ್ಪಿದ್ದನು. ಈ ಘಟನೆ ಕುರಿತು ಮನೆಯವರಿಗೆ ಮಾಹಿತಿ ನೀಡಲಾಗಿದ್ದು, ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮೃತ ದೇಹವನ್ನು ವೀಕ್ಷಣೆ ಮಾಡಿದ್ದಾರೆ. ನಂತರ ಮೃತ ದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಘಟನೆ ಕುರಿತಂತೆ ಬಳ್ಳಾರಿ ತಾಲೂಕಿನ ಪಿ.ಡಿ. ಹಳ್ಳಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
Mandya: ಪತ್ನಿ ಜೊತೆ ಮೊಬೈಲ್‌ನಲ್ಲಿ ಪ್ರೀತಿಯ ಮಾತು: ಛೇ.. ಸಿಡಿಲು ಬಡಿದು ಪ್ರಾಣ ಹೋಯ್ತು!
ಮುಂದಿನ 5 ದಿನ ರಾಜ್ಯಾದ್ಯಂತ ಭಾರಿ ಮಳೆ: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ರಾಜ್ಯದಲ್ಲಿ ಮುಂದಿನ ಐದು ದಿನ ಗುಡುಗು ಮಿಂಚು ಸಹಿತ ಭಾರಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮತ್ತೊಮ್ಮೆ ಮೂನ್ಸೂಚನೆ ನೀಡಿದೆ. ಹಾಸನ, ಕೊಡಗು, ಚಿಕ್ಕಮಗಳೂರಿನಲ್ಲಿ ಮೇ 31ರಂದು, ಬೆಂಗಳೂರು ನಗರ, ಬೆಂ. ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾ ಪುರ, ಕೋಲಾರ, ಮಂಡ್ಯ, ರಾಮನಗರ ಹಾಗೂ ತುಮಕೂರಿನಲ್ಲಿ ಹಾಗು ಜೂ 1 ರಂದು ಬಿರುಸಾಗಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಸೋಮವಾರ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ: ಇನ್ನು ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ರಾಯಚೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಮೈಸೂರು, ಶಿವಮೊಗ್ಗ ಮತ್ತು ವಿಜಯನಗರದಲ್ಲಿ ಮುಂದಿನ 3 ದಿನ ಹಗುರದಿಂದ ಕೂಡಿದ ಸಾಧಾರಣ ಮಳೆ ಸುರಿಯಲಿದೆ ಎಂದು ಮುನ್ಸೂಚನೆಯನ್ನು ನೀಡಿದೆ. ಸೋಮವಾರ ಬೆಂಗಳೂರು ನಗರ, ರಾಮನಗರ, ಹಾವೇರಿ ಸೇರಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಇವತ್ತೇ ಅಲ್ಲಲ್ಲಿ ಜೋರಾಗಿ ಮಳೆ ಸುರಿದಿದೆ.