ಪೂಜೆ ಹೆಸರಲ್ಲಿ ಚಿನ್ನಾಭರಣ ದೋಚುತ್ತಿದ್ದ ನಕಲಿ ಮಂತ್ರವಾದಿ ಬಂಧನ

Kannadaprabha News   | Kannada Prabha
Published : Oct 15, 2025, 05:30 AM IST
gold

ಸಾರಾಂಶ

ವಿಶೇಷ ಪೂಜೆ ಮಾಡಿ ಕಷ್ಟ ಕಾರ್ಪಣ್ಯ ನಿವಾರಿಸುವುದಾಗಿ ಜನರಿಗೆ ಮಂಕುಬೂದಿ ಎರಚಿ ಚಿನ್ನಾಭರಣ ದೋಚುತ್ತಿದ್ದ ನಕಲಿ ಮಂತ್ರವಾದಿಯೊಬ್ಬ ಹುಳಿಮಾವು ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.ಕೋಲಾರದ ದಾದಾಪೀರ್ ಬಂಧಿತನಾಗಿದ್ದು, ಆರೋಪಿಯಿಂದ 53 ಲಕ್ಷ ರು. ಮೌಲ್ಯದ 485 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ

ಬೆಂಗಳೂರು : ವಿಶೇಷ ಪೂಜೆ ಮಾಡಿ ಕಷ್ಟ ಕಾರ್ಪಣ್ಯ ನಿವಾರಿಸುವುದಾಗಿ ಜನರಿಗೆ ಮಂಕುಬೂದಿ ಎರಚಿ ಚಿನ್ನಾಭರಣ ದೋಚುತ್ತಿದ್ದ ನಕಲಿ ಮಂತ್ರವಾದಿಯೊಬ್ಬ ಹುಳಿಮಾವು ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಕೋಲಾರ ನಗರದ ಜಾಮಲ್ಷಾ ನಗರದ ದಾದಾಪೀರ್ ಬಂಧಿತನಾಗಿದ್ದು, ಆರೋಪಿಯಿಂದ 53 ಲಕ್ಷ ರು. ಮೌಲ್ಯದ 485 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಬನ್ನೇರುಘಟ್ಟ ಮುಖ್ಯರಸ್ತೆಯ ಕೋಳಿ ಫಾರಂ ಗೇಟ್ ಬಳಿ ಶಂಕಾಸ್ಪದವಾಗಿ ಓಡಾಡುತ್ತಿದ್ದ ಆತನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಿದಾಗ ವಂಚನೆ ಕೃತ್ಯಗಳು ಬೆಳಕಿಗೆ ಬಂದಿವೆ.

ಓದಿದ್ದು 10ನೇ ಕ್ಲಾಸ್‌, ವಂಚನೆಯಲ್ಲಿ ಮಾಸ್ಟರ್:

ದಾದಾಪೀರ್ ವೃತ್ತಿಪರ ಕ್ರಿಮಿನಲ್‌ ಆಗಿದ್ದು, ಹನ್ನೆರಡು ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ಆತ ನಿರತನಾಗಿದ್ದಾನೆ. 10ನೇ ತರಗತಿ ಓದಿಗೆ ಸಲಾಂ ಹೊಡೆದ ಆರೋಪಿ ವಂಚನೆ ಕೃತ್ಯಗಳಲ್ಲಿ ಮಾಸ್ಟರ್‌ ಆಗಿದ್ದ. ಈತನ ವಿರುದ್ಧ ಬೆಂಗಳೂರು, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾತ್ರವಲ್ಲದೆ ಆಂಧ್ರಪ್ರದೇಶ ರಾಜ್ಯಗಳಲ್ಲಿ ಸಹ ಪ್ರಕರಣಗಳು ದಾಖಲಾಗಿವೆ. ಪೂಜೆ ಹಾಗೂ ನಿಧಿ ತೋರಿಸುವ ಸೋಗಿನಲ್ಲಿ ಜನರಿಗೆ ವಂಚಿಸಿ ಚಿನ್ನಾಭರಣ ದೋಚುವುದು ದಾದಾಪೀರ್ ಕೃತ್ಯವಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಧ್ಯಮ ವರ್ಗದ ಕುಟುಂಬಗಳನ್ನೇ ಗುರಿಯಾಗಿಸಿ ದಾದಾಪೀರ್ ಮೋಸ ಮಾಡುತ್ತಿದ್ದ. ‘ನಿಮಗೆ ಯಾರೋ ಮಾಟ ಮಂತ್ರ ಮಾಡಿಸಿದ್ದಾರೆ. ಇದರಿಂದ ನೀವು ಏಳಿಗೆ ಕಾಣುತ್ತಿಲ್ಲ. ಈ ಸಮಸ್ಯೆಗೆ ತಾನು ಹೇಳಿದಂತೆ ಪೂಜೆ ಮಾಡಿಸಿದರೆ ದೋಷ ಮುಕ್ತರಾಗಿ ಸಮೃದ್ಧಿ ಕಾಣುತ್ತೀರಾ’ ಎಂದು ಹೇಳುತ್ತಿದ್ದ. ಈತನ ನಾಜೂಕಿನ ಮಾತುಗಳಿಗೆ ಮರುಳಾಗುವ ಜನರನ್ನು ತನ್ನ ಮೋಸದ ಬಲೆಗೆ ಬೀಳಿಸಿಕೊಳ್ಳುತ್ತಿದ್ದ. ಅಂತೆಯೇ ಸಂತ್ರಸ್ತರ ಮನೆಗೆ ತೆರಳಿ ಪೂಜೆ ನಡೆಸುವಾಗ ನಿಮ್ಮ ಮನೆಯಲ್ಲಿರುವ ಅಷ್ಟು ಆಭರಣಗಳನ್ನು ತಂದು ಚೆಂಬಿನಲ್ಲಿ ತುಂಬಿಡಬೇಕು. ಪೂಜೆ ಸಲ್ಲಿಸಿದ 45 ದಿನಗಳ ಬಳಿಕ ಆ ಚೆಂಬು ತೆರೆಯುವಂತೆ ಆತ ಸೂಚಿಸುತ್ತಿದ್ದ. ಆಗ ಪೂಜೆ ನೆಪದಲ್ಲಿ ಹೊಗೆ ಎಬ್ಬಿಸಿ ಚೆಂಬಿನಲ್ಲಿಡುತ್ತಿದ್ದ ಆಭರಣಗಳನ್ನು ತನ್ನ ಬ್ಯಾಗ್‌ಗೆ ತುಂಬಿಕೊಂಡು ಪೇರಿ ಕೀಳುತ್ತಿದ್ದ. ಕೆಲ ದಿನಗಳ ಬಳಿಕ ಚೆಂಬು ತೆರೆದಾಗ ಜನರು ಮೋಸ ಹೋಗಿರುವುದು ಗೊತ್ತಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪೂಜೆಗೆ ಚಿನ್ನಾಭರಣಗಳು ಕಡಿಮೆ ಇವೆ ಎಂದು ಹೇಳಿ ಪಕ್ಕದ ಮನೆಯವರಿಂದಲೂ ಆಭರಣಗಳನ್ನು ತರಿಸಿಕೊಂಡು ದೋಚುತ್ತಿದ್ದ ಎಂದೂ ಪೊಲೀಸರು ತಿಳಿಸಿದ್ದಾರೆ.

ಇದೇ ರೀತಿ ಮೂರು ವರ್ಷಗಳ ಹಿಂದೆ ಹುಳಿಮಾವು ಠಾಣಾ ವ್ಯಾಪ್ತಿಯಲ್ಲಿ ಆತ ವಂಚನೆ ಮಾಡಿದ್ದ. ಇದಾದ ಬಳಿಕ ಬಳ್ಳಾರಿ ಹಾಗೂ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಆತ ಕೈ ಚಳಕ ತೋರಿಸಿದ್ದ. ಈ ವಂಚನೆ ಕೃತ್ಯದ ಬಗ್ಗೆ ತನಿಖೆಗಿಳಿದ ಇನ್ಸ್‌ಪೆಕ್ಟರ್ ಬಿ.ಜಿ. ಕುಮಾರಸ್ವಾಮಿ ಹಾಗೂ ಸಬ್ ಇನ್ಸ್‌ಪೆಕ್ಟರ್ ಅರವಿಂದ್ ಕುಮಾರ್ ತಂಡವು, ಕೊನೆಗೆ ಆರು ತಿಂಗಳ ಸತತ ಪ್ರಯತ್ನದ ಬಳಿಕ ಬನ್ನೇರುಘಟ್ಟ ರಸ್ತೆಯಲ್ಲಿ ಖಚಿತ ಮಾಹಿತಿ ಪಡೆದು ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೂವರು ಪತ್ನಿಯರ ಸರದಾರ!

ದಾದಾಪೀರ್‌ಗೆ ಮೂರು ಬಾರಿ ಮದುವೆಯಾಗಿದ್ದು, ವಂಚನೆಯಿಂದ ಸಂಪಾದಿಸಿದ ಹಣದಲ್ಲಿ ಆತ ಸುಖ ಜೀವನ ನಡೆಸುತ್ತಿದ್ದ. ವಂಚನೆ ಎಸಗಿದ ಬಳಿಕ ಆ ನಗರ ತೊರೆದು ಉತ್ತರ ಭಾರತದ ಕಡೆಗೆ ಪ್ರವಾಸ ಹೋಗುತ್ತಿದ್ದ. ಆ ಪ್ರಕರಣ ತಣ್ಣಗಾದ ನಂತರ ಮತ್ತೆ ಅಲ್ಲಿಗೆ ದಾದಾಪೀರ್ ಪ್ರವೇಶಿಸಿ ಮೋಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮೊಬೈಲ್ ಬಳಸದ ಚಾಲಾಕಿ!

ಪೊಲೀಸರಿಗೆ ಸಿಕ್ಕಿ ಬೀಳುವ ಭಯದಿಂದ ದಾದಾಪೀರ್‌ ಮೊಬೈಲ್ ಬಳಸುತ್ತಿರಲಿಲ್ಲ. ವಸತಿ ಪ್ರದೇಶಗಳ ಕಡೆ ಅಡ್ಡಾಡುತ್ತ ತನ್ನ ಮೋಸದ ಬಲೆ ಬೀಸುತ್ತಿದ್ದ. ತನ್ನ ಸಂಪರ್ಕಕ್ಕೆ ಬಂದ ಸಂತ್ರಸ್ತರ ಮೂಲಕವೇ ಮತ್ತೊಬ್ಬರಿಗೆ ಆತ ಗಾಳ ಹಾಕಿ ವಂಚಿಸುತ್ತಿದ್ದ. ಆರು ತಿಂಗಳಿಂದ ದಾದಾಪೀರ್ ಜಾಡು ಪತ್ತೆಗೆ ಶ್ರಮಿಸಲಾಯಿತು. ಆತನ ಒಂದೊಂದೇ ಸಂಪರ್ಕ ಕೊಂಡಿಗಳನ್ನು ಶೋಧಿಸಿದಾಗ ಅಂತಿಮವಾಗಿ ಸೆರೆ ಸಿಕ್ಕ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಮುಸ್ಲಿಂ ಆದ್ರೂ ಹಿಂದೂಗಳ ಹೆಸರಿಟ್ಟುಕೊಂಡಿದ್ದ!

ಹಿಂದೂಗಳಿಗೆ ಗಾಳ ಹಾಕುವಾಗ ತನ್ನನ್ನು ಹಿಂದೂ ಧರ್ಮೀಯ ಪೂಜಾರಿ ಎಂದೇ ಆತ ಪರಿಚಯಿಸಿಕೊಳ್ಳುತ್ತಿದ್ದ. ಇದಕ್ಕಾಗಿ ಶಿವಶಂಕರ್‌, ಧನಂಜಯ ಹೀಗೆ ಐದಾರು ನಕಲಿ ಹೆಸರುಗಳನ್ನು ಮುಸ್ಲಿಂ ಧರ್ಮೀಯ ದಾದಾಪೀರ್ ಇಟ್ಟುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!