ಬೆಂಗ್ಳೂರಿನ ಅತುಲ್ ರೀತಿ ಪತ್ನಿಯ ಹಿಂಸೆಗೆ ವ್ಯಕ್ತಿ ಬಲಿ: ನದಿಗೆ ಹಾರಿ ಆತ್ಮಹತ್ಯೆ

By Kannadaprabha News  |  First Published Jan 2, 2025, 5:26 AM IST

ನನ್ನ ಮಗನ ಜತೆ ಸಂಬಂಧಿಕರು ಯಾರೂ ಮಾತನಾಡದಂತೆ ತಡೆಯಲಾಗಿತ್ತು. ಮಗನ ನೋಡಲು ಮನೆಗೆ ಅಪ್ಪ- ಅಮ್ಮ ಕೂಡ ಹೋಗುವ ಹಾಗಿರಲಿಲ್ಲ. ನನ್ನ ಮಗನಿಗೆ ಕಿರುಕುಳ ಕೊಟ್ಟು ಸಾವಿಗೆ ಕಾರಣರಾಗಿದ್ದಾರೆ. ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೋ ಇಲ್ಲವೇ ಹೊಡೆದು ನದಿಗೆ ಎಸೆದಿದ್ದಾರೋ ಗೊತ್ತಿಲ್ಲ. ಈ ಬಗ್ಗೆ ನಮಗೆ ನ್ಯಾಯ ಬೇಕು ಎಂದು ಮನವಿ ಮಾಡಿದರು.


ಹಾಸನ(ಜ.02):  ಪತ್ನಿ ಮತ್ತು ಅವರ ಮನೆಯವರ ಕಿರುಕುಳದಿಂದ ಬೇಸತ್ತು ಇತ್ತೀಚೆಗೆ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ ಅತುಲ್ ಸುಭಾಷ್ ಪ್ರಕರಣದ ಮಾದರಿಯಲ್ಲಿಯೇ ಹಾಸನದಲ್ಲಿ ಮತ್ತೊಂದು ಘಟನೆ ನಡೆದಿದೆ. ಪತ್ನಿಯ ಕುಟುಂಬದವರು ಕಿರುಕುಳಕ್ಕೆ ಬೇಸತ್ತಿದ್ದರೆನ್ನಲಾದ ಎಂಜಿನಿಯರ್ ಪ್ರಮೋದ್ (35) ತಾಲೂಕಿನ ಶೆಟ್ಟಿಹಳ್ಳಿ ಬಳಿ ಹೇಮಾವತಿ ನದಿಗೆ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಬುಧವಾರ ಅವರ ಶವ ಪತ್ತೆಯಾಗಿದೆ. ನಗರದ ಇಂದಿರಾನಗರ ಬಡಾವಣೆ ನಿವಾಸಿ ಪ್ರಮೋದ್, ಡಿ.29ರಂದು ಮನೆಯಲ್ಲೇ ಮೊಬೈಲ್ ಬಿಟ್ಟು ಹೊರ ಹೋಗಿದ್ದರು. ಪೋಷಕರು ಕೆ.ಆರ್.ಪುರಂ ಠಾಣೆಗೆ ನಾಪತ್ತೆ ದೂರು ದಾಖಲಿಸಿದ್ದರು. 
ಮರು ದಿನ ಹೇಮಾವತಿ ನದಿ ಸೇತುವೆ ಬಳಿ ಪ್ರಮೋದ್ ಟಿವಿಎಸ್ ಜ್ಯುಪಿಟರ್ ವಾಹನ ಕಂಡು ಬಂದಿದೆ. ಡಿ.30ರಿಂದ ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ಹುಡುಕಾಡ ನಡೆಸಿದ್ದರು. ಜ.1ರಂದು ಬೆಳಗ್ಗೆ ಪ್ರಮೋದ್ ಶವ ನದಿಯಲ್ಲಿ ತೇಲುತ್ತಿರುವುದನ್ನು ಕಂಡು ಶವ ಹೊರತೆಗೆಯಲಾಗಿದೆ. ಈ ನಡುವೆ ಇಲ್ಲಿನ ಶವಾಗಾರದ ಬಳಿ ಪತ್ನಿ ನಂದಿನಿ ಬಂದಾಗ ಎರಡೂ ಕಡೆಯವರಿಗೂ ತೀವ್ರ ವಾಗ್ವಾದವೂ ನಡೆಯಿತು. ಪ್ರಮೋದ್ ಕಿರುಕುಳ ನೀಡುತ್ತಿದ್ದ ಎಂದು ನಂದಿನಿ ಆರೋಪಿಸಿದರು. ಪೊಲೀಸರು ನಂದಿನಿ ಅವರನ್ನು ಆಟೋದಲ್ಲಿ ಕಳುಹಿಸಿಕೊಟ್ಟರು. ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

Tap to resize

Latest Videos

ಅತುಲ್ ಸುಭಾಷ್ ಕೇಸ್; ಜಗಳ ನಡೆದ ಕಾರಣ ಬಿಚ್ಚಿಟ್ಟ ನಿಖಿತಾ ಸಿಂಘಾನಿಯಾ

ಪ್ರಮೋದ್ ತಂದೆ ಆರೋಪ:

ನನ್ನ ಮಗ ಬಿಇ ಮಾಡಿ ಬೆಂಗಳೂರಿನಲ್ಲಿ ಎಂಜಿನಿಯ‌ರ್ ಆಗಿ ಕೆಲಸ ಮಾಡುತ್ತಿದ್ದ. ಮದುವೆಯಾಗಿ ಏಳು ವರ್ಷಗಳಾಗಿದ್ದು, ನಮ್ಮ ಮನೆಗೆ ಸೊಸೆ ಬಂದಿರಲಿಲ್ಲ. ಆದರೂ ಪ್ರಮೋದ್ ಮರ್ಯಾದಿಗೆ ಅಂಜಿ ಮನೆ ಕಲಹದ ಬಗ್ಗೆ ಏನೂ ಹೇಳುತ್ತಿರಲಿಲ್ಲ. ಮದುವೆಯಾದ ಎರಡನೇ ವರ್ಷಕ್ಕೆ ಮಗನಿಗೆ ಹೊಡೆದು ಖಾಲಿ ಪೇಪರ್‌ಗೆ ಸಹಿ ಹಾಕಿಸಿಕೊಂಡಿದ್ದರು ಎಂದು ಆತ್ಮಹತ್ಯೆ ಮಾಡಿಕೊಂಡ ಪ್ರಮೋದ್ ತಂದೆ ಜಗದೀಶ್ ಬುಧವಾರ ಇಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. 

ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ಕೊಟ್ಟಾಗ ಖಾಲಿ ಪೇಪರ್‌ ತಂದು ಕೊಡುವಂತೆ ಪೊಲೀಸರು ಹೇಳಿದರೂ ಕೂಡ ಕೊಡಲಿಲ್ಲ. ನಂತರ ತಂದು ಕೊಡಲಾಯಿತು. ರಾಜಿ ಮಾತುಕತೆ ನಡೆಸಿ ಹೊಂದಾಣಿಕೆಯಿಂದ ಹೋಗಲು ಬುದ್ದಿವಾದ ಹೇಳಿ ಕಳುಹಿಸಲಾಗಿತ್ತು. ಆದರೂ ಪಾನಿಪುರಿ ಕೊಡಿಸಲ್ಲ, ನನಗೆ ತಿಂಡಿ ತರುವುದಿಲ್ಲ ಎಂದು ಪತ್ನಿ ದೂರುತ್ತಿದ್ದರು. ಕಳೆದ 8 ತಿಂಗಳ ಹಿಂದೆ ನನ್ನ ಮಗನಿಗೆ ಹೆಂಡತಿ ಕಡೆಯವರು ಥಳಿಸಿದ್ದರು ಎಂದು ಮೊಬೈಲ್‌ನಲ್ಲಿ ಇದ್ದ ಫೋಟೋ ಪ್ರದರ್ಶಿಸಿ ದೂರಿದರು. 

ನನ್ನ ಮಗನ ಜತೆ ಸಂಬಂಧಿಕರು ಯಾರೂ ಮಾತನಾಡದಂತೆ ತಡೆಯಲಾಗಿತ್ತು. ಮಗನ ನೋಡಲು ಮನೆಗೆ ಅಪ್ಪ- ಅಮ್ಮ ಕೂಡ ಹೋಗುವ ಹಾಗಿರಲಿಲ್ಲ. ನನ್ನ ಮಗನಿಗೆ ಕಿರುಕುಳ ಕೊಟ್ಟು ಸಾವಿಗೆ ಕಾರಣರಾಗಿದ್ದಾರೆ. ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೋ ಇಲ್ಲವೇ ಹೊಡೆದು ನದಿಗೆ ಎಸೆದಿದ್ದಾರೋ ಗೊತ್ತಿಲ್ಲ. ಈ ಬಗ್ಗೆ ನಮಗೆ ನ್ಯಾಯ ಬೇಕು ಎಂದು ಮನವಿ ಮಾಡಿದರು.

click me!