ಕೋಲಾರ ಜಿಲ್ಲೆ ಮಾಲೂರು ಪಟ್ಟಣದಲ್ಲಿ ನಡೆದ ಘಟನೆ
ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ
ಕೋಲಾರ(ನ.09): ಆ ಯುವಕ ಅವರ ಮನೆಯಲ್ಲೇ ತಿಂದು ಉಂಡು ಓಡಾಡಿಕೊಂಡು ಅವರ ಜೊತೆಗೆ ಕೆಲಸ ಮಾಡಿಕೊಂಡಿದ್ದವನು. ಆದರೆ ಅವನಿಗೆ ತಾನು ಸಾಕಲು ಕೊಟ್ಟಿದ್ದ ಎರಡು ಪಾರಿವಾಳಗಳನ್ನು ಕೇಳಿದ ತಕ್ಷಣ ಕೊಡಲಿಲ್ಲ ಅನ್ನೋ ಕಾರಣಕ್ಕೆ ಕುಡಿದ ಮತ್ತಿನಲ್ಲಿದ್ದ ಆ ಯುವಕ ಮನೆಯಲ್ಲಿದ್ದ ಮಕ್ಕಳು ಮಹಿಳೆಯರು, ಹಿರಿಯರು, ಯಾರನ್ನು ನೋಡದೆ ಎಲ್ಲರ ಮೇಲೆ ಮನಬಂದಂತೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಆಸ್ಪತ್ರೆಯಲ್ಲಿ ಮುಖ ಮೈ ಮೇಲೆಲ್ಲಾ ಬ್ಯಾಂಡೇಜ್ ಹಾಕಿಕೊಂಡು ಮಲಗಿರುವ ವ್ಯಕ್ತಿ, ಅಲ್ಲೇ ಅಕ್ಕ ಪಕ್ಕದ ಮೈಕೈಗೆಲ್ಲಾ ಬ್ಯಾಂಡೇಜ್ ಕಟ್ಟಿಕೊಂಡು ಮಲಗಿರುವ ಮಹಿಳೆಯರು ಹಾಗೂ ಮಕ್ಕಳು, ಇನ್ನೊಂದೆಡೆ ಮನೆಯ ಬಾಗಿಲಲ್ಲಿ ಕಾಣುವ ರಕ್ತದ ಕಲೆಗಳು ಇದೆಲ್ಲಾ ದೃಷ್ಯಗಳು ನಮಗೆ ಕಂಡುಬಂದಿದ್ದು ಕೋಲಾರ ಜಿಲ್ಲೆ ಮಾಲೂರು ಪಟ್ಟಣದಲ್ಲಿ.
ಮಾಲೂರು ಪಟ್ಟಣದ ಗಾಂಧಿಸರ್ಕಲ್ ಬಳಿ ಇರುವ ರಾಮು ಎಂಬುವರಿಗೆ ಪಾರಿವಾಳ ಸಾಕುವ ಹವ್ಯಾಸ, ಪಾರಿವಾಳಗಳನ್ನು ಸಾಕುವುದು ಹಾಗೂ ಅದರ ಟೂರ್ನಾಮೆಂಟ್ಗಳನ್ನು ಆಯೋಜನೆ ಮಾಡುವ ಹವ್ಯಾಸ, ಹೀಗಿರುವಾಗಲೇ ಅದೇ ಗಾಂಧಿ ಸರ್ಕಲ್ನಲ್ಲಿ ವಾಸಿವಿದ್ದ ಇಮ್ರಾನ್ ಖಾನ್ ಎಂಬಾತ ರಾಮು ಅವರ ಜೊತೆಗೆ ಪೇಂಟಿಂಗ್ ಕೆಲಸಕ್ಕೆ ಹೋಗುತ್ತಿದ್ದ, ಹೀಗಿರುವಾಗಲೇ ಇಮ್ರಾನ್ ಖಾನ್ ಕಳೆದ ಕೆಲವು ದಿನಗಳ ಹಿಂದೆ ಎರಡು ಪಾರಿವಾಳಗಳನ್ನು ಸಾಕಿಕೊಡುವಂತೆ ರಾಮುಗೆ ಕೊಟ್ಟಿದ್ದಾನೆ. ಕಳೆದ ರಾತ್ರಿ ಏಕಾಏಕಿ ಕುಡಿದುಕೊಂಡು ರಾಮು ಮನೆಗೆ ಬಂದ ಇಮ್ರಾನ್ಖಾನ್ ತನ್ನ ಪಾರಿವಾಳಗಳನ್ನು ಕೊಡುವಂತೆ ಒತ್ತಾಯ ಮಾಡಿದ್ದಾನೆ. ಈ ವೇಳೆ ರಾಮು ಸಂಜೆಯಾದ ಮೇಲೆ ನಾನು ಪಾರಿವಾಳ ಕೊಡುವುದಿಲ್ಲ ಬೆಳಿಗ್ಗೆ ಬಾ ಕೊಡ್ತೀನಿ ಎಂದಿದ್ದಾನೆ. ಆ ವಿಚಾರಕ್ಕೆ ಇಮ್ರಾನ್ ಖಾನ್ ರಾಮುವನ್ನು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ರೇಣುಕಾಚಾರ್ಯ ಅಣ್ಣನ ಮಗ ನಾಪತ್ತೆ ಪ್ರಕರಣ: ಚಂದ್ರಶೇಖರ್ ಸ್ನೇಹಿತ ಕಿರಣ್ ಬಂಧನ
ಈ ವೇಳೆ ಮನೆಯಲ್ಲಿದ್ದ ರಾಮು ಅಣ್ಣ ನಾಗರಾಜ್ ಹೊರಬಂದು ಇಮ್ರಾನ್ ಖಾನ್ಗೆ ಬೈದಿದ್ದಾರೆ. ಈ ವೇಳೆ ಗಾಂಜಾ ಹಾಗೂ ಕುಡಿದ ಮತ್ತಿನಲ್ಲಿದ್ದ ಇಮ್ರಾನ್ ಖಾನ್ ಏಕಾಏಕಿ ನಾಗರಾಜ್ ಮೇಲೆ ಚಾಕುವಿನಿಂದ ಮನ ಬಂದಂತೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಅಲ್ಲೇ ಕುಸಿದು ಬಿದ್ದ ನಾಗರಾಜ್ರನ್ನು ಕಂಡು ರಾಮು, ರಾಮು ಪತ್ನಿ, ಮಕ್ಕಳು, ನಾಗರಾಜ್ ಮಕ್ಕಳು ಎಲ್ಲರೂ ಓಡಿ ಬಂದು ನಾಗರಾಜ್ರನ್ನು ಬಿಡಿಸಲು ಬಂದಿದ್ದಾರೆ. ಈ ವೇಳೆ ಯಾರನ್ನೂ ನೋಡದೆ ಮಹಿಳೆಯರು ಮಕ್ಕಳು ಎಲ್ಲರ ಮೇಲೂ ಚಾಕುವಿನಿಂದ ಹಲ್ಲೆ ಮಾಡಿ ಇಮ್ರಾನ್ ಖಾನ್ ಪರಾರಿಯಾಗಿದ್ದಾನೆ.
ಇನ್ನು ನೋಡ ನೋಡುತ್ತಿದ್ದಂತೆ ಎರಡೇ ನಿಮಿಷದಲ್ಲಿ ಮನೆಯಲ್ಲಿದ್ದ ನಾಗರಾಜ್, ರಾಮು, ರಾಜೇಶ್ವರಿ, ನಾಗವೇಣಿ, ಚಂದ್ರಕಲಾ, ಕಲ್ಯಾಣಿ ಹೀಗೆ ಅಲ್ಲಿದ್ದವರ ಮೇಲೆಲ್ಲಾ ಇಮ್ರಾನ್ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ನಾಗರಾಜ್ ಮುಖ ಹಾಗೂ ಎದೆಯ ಬಾಗದಲ್ಲಿ ಗಂಭೀರ ಗಾಯಗಳಾದ್ರೆ, ನಾಗರಾಜ್ ಕಾಪಾಡಲು ಬಂದ ಇಬ್ಬರು ಹೆಣ್ಣು ಮಕ್ಕಳಿಗೂ ಗಂಭೀರವಾಗಿ ಗಾಯಗೊಳಿಸಿದ್ದಾನೆ. ತಕ್ಷಣ ಅಲ್ಲಿಂದ ಇಮ್ರಾನ್ ಪರಾರಿಯಾಗಿದ್ದಾನೆ,ನಿನ್ನೆ ಗ್ರಹಣದ ವೇಳೆ ಕರೆಂಟ್ ಇಲ್ಲದ ಸಮಯದಲ್ಲಿ ಈ ಘಟನೆ ನಡೆದಿದೆ.
ಕುಡಿದ ಅಮಲಿನಲ್ಲಿ ಯುವಕನ ಕೈ ಕತ್ತರಿಸಿ ದುಷ್ಕರ್ಮಿಗಳ ಪುಂಡಾಟಿಕೆ: ಓರ್ವನ ಬಂಧನ
ತಕ್ಷಣ ಗಾಯಾಳುಗಳನ್ನು ಮಾಲೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಜೊತೆಗೆ ಮಾಲೂರು ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಮಾಲೂರು ಪೊಲೀಸರು ಆರೋಪಿ ಇಮ್ರಾನ್ನ್ನು ಬಂಧಿಸಿದ್ದಾರೆ. ಇನ್ನು ವಿಷಯ ತಿಳಿದ ಮಾಲೂರು ಬಿಜೆಪಿ ಮುಖಂಡ ಹೂಡಿ ವಿಜಯ್ಕುಮಾರ್ ಕೂಡಾ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಕ್ಷುಲ್ಲಕ ಕಾರಣಕ್ಕೆ ನಡೆದ ಘಟನೆಯಿಂದ ಇಡೀ ಕುಟುಂಬ ಇಂದು ಗಾಯಗೊಂಡು ಆಸ್ಪತ್ರೆ ಸೇರುವಂತಾಗಿದ್ದು, ನಾಗರಾಜ್ ಮುಖ ಹಾಗೂ ಎದೆಯ ಭಾಗಕ್ಕೆ ಚಾಕುವಿನಿಂದ ಇರಿಯಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಒಟ್ಟಾರೆ ಜೊತೆಯಲ್ಲೇ ಕೆಲಸ ಮಾಡಿಕೊಂಡು ಮನೆಗೆ ಬಂದು ಹೋಗುತ್ತಿದ್ದ ಇಮ್ರಾನ್ ಖಾನ್ ಹೀಗೆ ಗಾಂಜಾ ಹಾಗೂ ಕುಡಿದ ಮತ್ತಿನಲ್ಲಿ ಮಾಡಿದ ಅನಾಹುತದಿಂದ ರಾಮು ಅವರ ಇಡೀ ಕುಟುಂಬ ಇಂದು ಆಸ್ಪತ್ರೆ ಸೇರುವಂತಾಗಿದೆ. ಇಷ್ಟು ದಿನ ಕೆಲಸ ಊಟ ಹಾಕಿ ನಮ್ಮವನೆಂದು ನೋಡಿಕೊಂಡಿದ್ದಕ್ಕೆ ರಾಮು ಹಾಗೂ ಅವರ ಕುಟುಂಬದವರು ಸದ್ಯ ಹಾವಿಗೆ ಹಾಲೆರೆದಂತಾಗಿದೆ.