ಕೇರಳ ಪೊಲೀಸರನ್ನು ಹೆದರಿಸಿ ಬೆಂಗಳೂರಿನಿಂದ ಪರಾರಿ ಆಗಿದ್ದ ಮೀನು ವ್ಯಾಪಾರಿ
ಬೆಂಗಳೂರು(ಸೆ.10): ಡ್ರಗ್ಸ್ ಪ್ರಕರಣ ಸಂಬಂಧ ಬೆಂಗಳೂರಿನಲ್ಲಿ ಬಂಧಿಸಲು ಬಂದಿದ್ದಾಗ ತಮಗೆ ಅಟಿಕೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿ ತಪ್ಪಿಸಿಕೊಂಡಿದ್ದ ಮೀನು ವ್ಯಾಪಾರಿಯೊಬ್ಬನನ್ನು ಕೊನೆಗೂ ಕೇರಳ ಪೊಲೀಸರು ಬಲೆಗೆ ಹಾಕಿಕೊಂಡಿದ್ದಾರೆ.
ಕೇರಳ ಮೂಲದ ಜಾಫರ್ ಬಂಧಿತನಾಗಿದ್ದು, ಆರೋಪಿಯಿಂದ ಆಟಿಕೆ ಪಿಸ್ತೂಲ್ ಜಪ್ತಿ ಮಾಡಲಾಗಿದೆ. ಡ್ರಗ್ಸ್ ಪ್ರಕರಣ ಸಂಬಂಧ ಆರೋಪಿ ಬಂಧಿಸಲು ಎಚ್‌ಎಸ್‌ಆರ್ ಲೇಔಟ್‌ಗೆ ಬಂಧಿಸಲು ಕೇರಳ ಪೊಲೀಸರ ತಂಡ ಬಂದಿತ್ತು. ಆ ವೇಳೆ ತನಿಖಾ ತಂಡಕ್ಕೆ ಪಿಸ್ತೂಲ್ ತೋರಿಸಿ ಕೇರಳಕ್ಕೆ ಜಾಫರ್ ಪರಾರಿಯಾಗಿದ್ದ. ಕೊನೆಗೆ ಆತನನ್ನು ಪತ್ತೆ ಹಚ್ಚಿ ಕೇರಳ ಪೊಲೀಸರು ಬಂಧಿಸಿದ್ದರು. ಪಿಸ್ತೂಲ್ ತೋರಿಸಿ ಜೀವ ಬೆದರಿಕೆ ಪ್ರಕರಣ ಸಂಬಂಧ ಆರೋಪಿಯನ್ನು ಬಾಡಿ ವಾರೆಂಟ್ ಮೇರೆಗೆ ವಶಕ್ಕೆ ಪಡೆದು ಎಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರು ನಗರಕ್ಕೆ ಕರೆತಂದಿದ್ದಾರೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಡಾ. ಸಿ.ಕೆ.ಬಾಬಾ ತಿಳಿಸಿದ್ದಾರೆ.
ಎಣ್ಣೆ ಮತ್ತಲ್ಲಿ ಮೊಮ್ಮಗನ ರಹಸ್ಯ ಬಾಯ್ಬಿಟ್ಟ ಸ್ನೇಹಿತರು, 8 ತಿಂಗಳ ಬಳಿಕ ತಾತನ ಕೊಲೆ ರಹಸ್ಯ ಬೆಳಕಿಗೆ
ಕೇರಳದಲ್ಲಿ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ಜಾಫರ್ ನೆಲೆಸಿದ್ದು, ಮೀನು ವ್ಯಾಪಾರ ಮಾಡಿಕೊಂಡಿದ್ದಾನೆ. ಹಣದಾಸೆಗೆ ಡ್ರಗ್ಸ್ ಮಾರಾಟ ದಂಧೆಯಲ್ಲಿ ಆತ ತೊಡಗಿದ್ದ. ಈ ಬಗ್ಗೆ ಮಾಹಿತಿ ಪಡೆದ ಕೇರಳ ಪೊಲೀಸರು, ಜಾಫರ್ ಬಂಧನಕ್ಕೆ ಮುಂದಾಗಿದ್ದರು. ಆಗ ತಪ್ಪಿಸಿಕೊಂಡು ಬೆಂಗಳೂರಿಗೆ ಬಂದಿದ್ದ ಆತ, ಎಚ್‌ಎಸ್‌ಆರ್ ಲೇ ಔಟ್‌ನಲ್ಲಿ ಆಶ್ರಯ ಪಡೆದಿದ್ದ. ಈ ಸುಳಿವು ಪಡೆದ ಕೇರಳ ಪೊಲೀಸರು, ಆರೋಪಿ ಬಂಧನಕ್ಕೆ ಕಾರ್ಯಾಚರಣೆಗಿಳಿದಿದ್ದರು. ಆದರೆ ಆಗ ತನಿಖಾ ತಂಡಕ್ಕೆ ಜೀವ ಬೆದರಿಕೆ ಹಾಕಿ ಆರೋಪಿ ಪರಾರಿಯಾಗಿದ್ದ. ಈ ಸಂಬಂಧ ಎಚ್‌ಎಸ್‌ಆರ್ ಲೇಔಟ್ ಠಾಣೆಯಲ್ಲಿ ಕೇರಳ ಪೊಲೀಸರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.