
ಬೆಂಗಳೂರು(ಫೆ.04): ಎಟಿಎಂಗೆ ತುಂಬಿಸಬೇಕಿದ್ದ 64 ಲಕ್ಷ ಹಣ ಕದ್ದು ಖಾಸಗಿ ಏಜೆನ್ಸಿಯೊಂದರ ವಾಹನ ಚಾಲಕ ಪರಾರಿಯಾಗಿರುವ ಘಟನೆ ರಾಜಾಜಿನಗರದ ನವರಂಗ ಸಮೀಪ ನಡೆದಿದೆ.
ಎಟಿಎಂಗಳಿಗೆ ಹಣ ತುಂಬಿಸುವ ಗುತ್ತಿಗೆ ಪಡೆದಿರುವ ಸೆಕ್ಯುರ್ ಅಂಡ್ ವ್ಯಾಲ್ಯುವ್ ಏಜೆನ್ಸಿ ವಾಹನ ಚಾಲಕ ಯೋಗೇಶ್ ಈ ಕೃತ್ಯ ಎಸಗಿದ್ದು, ನವರಂಗ ಹತ್ತಿರದ ಆಕ್ಸಿಸ್ ಬ್ಯಾಂಕ್‌ನ ಎಟಿಎಂಗೆ ಮಂಗಳವಾರ ಸಂಜೆ ಏಜೆನ್ಸಿ ಸಿಬ್ಬಂದಿ ಬಂದಿದ್ದಾಗ ಈ ಘಟನೆ ನಡೆದಿದೆ. ತಲೆಮರೆಸಿಕೊಂಡಿರುವ ಆರೋಪಿ ಪತ್ತೆಗೆ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಆಟೋದಲ್ಲಿ ಪರಾರಿ:
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಯಲಚೇನಹಳ್ಳಿ ಗ್ರಾಮದ ಯೋಗೇಶ್, ತನ್ನ ಪತ್ನಿ ಮತ್ತು ಮಕ್ಕಳ ಜತೆ ದೊಡ್ಡಬಿದರಕಲ್ಲಿನಲ್ಲಿ ನೆಲೆಸಿದ್ದ. ನಾಲ್ಕು ವರ್ಷಗಳಿಂದ ಸೆಕ್ಯುರ್ ಅಂಡ್ ವ್ಯಾಲ್ಯುವ್ ಏಜೆನ್ಸಿಯಲ್ಲಿ ಆತ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ. ನಗರದಲ್ಲಿರುವ ವಿವಿಧ ಬ್ಯಾಂಕ್‌ಗಳ ಎಟಿಎಂಗಳಿಗೆ ಹಣ ತುಂಬಿಸುವ ಹಾಗೂ ಎಟಿಎಂ ಕೇಂದ್ರದಲ್ಲಿ ಗ್ರಾಹಕರು ಡಿಪಾಸಿಟ್ ಮಾಡಿದ ಹಣವನ್ನು ಸಂಗ್ರಹಿಸುವ ಗುತ್ತಿಗೆಯನ್ನು ಆ ಏಜೆನ್ಸಿ ಪಡೆದಿದೆ. ಈ ಹಣ ಪೂರೈಕೆ ವಾಹನದ ಚಾಲಕನಾಗಿ ಯೋಗೇಶ್ ನಿಯೋಜಿತನಾಗಿದ್ದ.
ಆಮಂತ್ರಣ ನೀಡಲು ಬಂದು ಕಾರು ಕಳೆದುಕೊಂಡರು!
ಎಂದಿನಂತೆ ಮಂಗಳವಾರ ಕೂಡಾ ಸುಮಾರು 50 ಎಟಿಎಂಗಳಿಗೆ ಹಣ ತುಂಬಿಸಲು 1.7 ಕೋಟಿ ತೆಗೆದುಕೊಂಡು ಏಜೆನ್ಸಿ ಮೂವರು ಸಿಬ್ಬಂದಿ ಜತೆ ವಾಹನದಲ್ಲಿ ಯೋಗೇಶ್ ಬಂದಿದ್ದ. ರಾಜಾಜಿನಗರದ ನವರಂಗ ಹತ್ತಿರದ ಆಕ್ಸಿಸ್ ಬ್ಯಾಂಕ್‌ನ ಎಟಿಎಂ ಘಟಕಕ್ಕೆ ಸಂಜೆ 6 ಗಂಟೆ ಸುಮಾರಿಗೆ ಹಣ ತುಂಬಿಸಲು ಏಜೆನ್ಸಿ ಸಿಬ್ಬಂದಿ ಬಂದಿದ್ದಾರೆ. ಆಗ ಹಣದ ತೆಗೆದುಕೊಂಡು ಮೂವರು ಸಿಬ್ಬಂದಿ ಕಾರಿನಿಂದಿಳಿದು ಎಟಿಎಂ ಕೇಂದ್ರಕ್ಕೆ ತೆರಳಿದ್ದಾರೆ. ಆಗ ವಾಹನದಲ್ಲಿದ್ದ ಯೋಗೇಶ್ ತಕ್ಷಣವೇ, ವಾಹನದಲ್ಲಿ ಮತ್ತೊಂದು ಪೆಟ್ಟಿಗೆಯಲ್ಲಿದ್ದ 64 ಲಕ್ಷ ಹಣವನ್ನು ತನ್ನ ಬ್ಯಾಗ್‌ಗೆ ತುಂಬಿಕೊಂಡು ಆಟೋ ಹತ್ತಿ ಪರಾರಿಯಾಗಿದ್ದಾನೆ.
ಕೆಲ ಹೊತ್ತಿನ ಬಳಿಕ ವಾಹನದ ಬಳಿಗೆ ಸಿಬ್ಬಂದಿ ಬಂದಾಗ ಚಾಲಕ ನಾಪತ್ತೆಯಾಗಿರುವುದು ಕಂಡು ಗಾಬರಿಗೊಂಡಿದ್ದಾರೆ. ಕೂಡಲೇ ವಾಹನದಲ್ಲಿದ್ದ ಹಣವನ್ನು ಪರಿಶೀಲಿಸಿದಾಗ ಕಳ್ಳತನ ಬೆಳಕಿಗೆ ಬಂದಿದೆ. ಬಳಿಕ ಆಕ್ಸಿಸ್ ಬ್ಯಾಂಕ್ ಮ್ಯಾನೇಜರ್ ಅವರು, ಘಟನೆ ಕುರಿತು ಸುಬ್ರಹ್ಮಣ್ಯನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕಳ್ಳತನ ವಿಚಾರ ತಿಳಿದ ಕೂಡಲೇ ಪೊಲೀಸರು, ಮಂಗಳವಾರ ರಾತ್ರಿಯಿಂದಲೇ ಚಾಲಕನ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ.
ಕೆ.ಆರ್.ಪೇಟೆ ತಾಲೂಕಿನಲ್ಲಿರುವ ಆರೋಪಿ ಮನೆಗೆ ತೆರಳಿ ಸಹ ಶೋಧಿಸಿದ್ದಾರೆ. ಆದರೆ ಎಲ್ಲೂ ಆತನ ಸುಳಿವು ಪತ್ತೆಯಾಗಿಲ್ಲ. ಘಟನೆ ನಡೆದ ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾಗಳನ್ನು ವಶಕ್ಕೆ ಪಡೆದು ಚಾಲಕ ತಪ್ಪಿಸಿಕೊಂಡು ಸಾಗಿರುವ ಹಾದಿಗೆ ಬಗ್ಗೆ ತಲಾಶ್ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ