
ಬೆಂಗಳೂರು (ಮೇ.26): ಪ್ರೀತಿಸಿ ಮದುವೆಯಾದ ಮೂರು ತಿಂಗಳಿಗೆ ಪತಿ ಹಾಗೂ ಆತನ ಕುಟುಂಬದ ಸದಸ್ಯರು ವರದಕ್ಷಿಣೆ ಕಿರುಕುಳ ನೀಡಿ ಮನೆಯಿಂದ ಹೊರ ಹಾಕಿದ್ದಾರೆ ಎಂದು ಆರೋಪಿಸಿ ನೊಂದ ಮಹಿಳೆಯೊಬ್ಬರು ಪಶ್ಚಿಮ ವಿಭಾಗದ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಕೋಲಾರ ಮೂಲದ 21 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಕಾಮಾಕ್ಷಿಪಾಳ್ಯ ನಿವಾಸಿ ಪತಿ ಹೇಮಂತ್ ಕುಮಾರ್, ಆತನ ತಾಯಿ ಶಿವಶಂಕರಿ ಹಾಗೂ ಸಹೋದರ ಶಶಿಕುಮಾರ್ ವಿರುದ್ಧ ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ, ಜೀವ ಬೆದರಿಕೆ ಸೇರಿದಂತೆ ವಿವಿಧ ಆರೋಪದಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರಿನ ವಿವರ: ದೂರುದಾರೆ ಒಂದು ವರ್ಷದ ಹಿಂದೆ ಮಾಲ್‌ವೊಂದರಲ್ಲಿ ಕೆಲಸ ಮಾಡುವಾಗ ಹೇಮಂತ್ ಕುಮಾರ್ ಪರಿಚಯವಾಗಿತ್ತು. ನಂತರ ಇಬ್ಬರ ನಡುವೆ ಸ್ನೇಹ ಬೆಳೆದು ಅದು ಪರಸ್ಪರ ಪ್ರೀತಿಗೆ ತಿರುಗಿ ಕಳೆದ ಫೆ.1ರಂದು ಇಬ್ಬರು ಮದುವೆಯಾಗಿದ್ದಾರೆ. ದಂಪತಿ ಕಾಮಾಕ್ಷಿಪಾಳ್ಯದ ಸ್ನೇಹಿತರ ಮನೆಯಲ್ಲಿ ನೆಲೆಸಿದ್ದರು. ಮದುವೆಯಾದ ದಿನದಿಂದ ದಂಪತಿ ನಡುವೆ ಗಲಾಟೆ ಶುರುವಾಗಿದ್ದು, ಪತಿ ಹೇಮಂತ್ ಕುಮಾರ್ ನಿತ್ಯ ಗಲಾಟೆ ತೆಗೆದು ಅವಾಚ್ಯ ಶಬ್ಧಗಳಿಂದ ನಿಂದಿಸುವುದು, ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲು ಆರಂಭಿಸಿದ್ದಾರೆ.
ಹಣ, ಚಿನ್ನಾಭರಣ ಪಡೆದು ಅಡಮಾನ: ಮದುವೆ ವಿಚಾರ ತಿಳಿದು ಹೇಮಂತ್ ಕುಮಾರ್ ತಾಯಿ ಶಿವಶಂಕರಿ ಮತ್ತು ಸಹೋದರ ಶಶಿಕುಮಾರ್ ದೂರುದಾರೆ ಜತೆಗೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ಈ ನಡುವೆ ಪತಿ ಹೇಮಂತ್ ಕುಮಾರ್ ಹೊಸ ಮನೆ ಮಾಡುವುದಾಗಿ ದೂರುದಾರೆಯಿಂದ 1.50 ಲಕ್ಷ ರು. ನಗದು ಹಾಗೂ 15 ಗ್ರಾ ಚಿನ್ನಾಭರಣ ಪಡೆದು ಅಡಮಾನ ಇರಿಸಿದ್ದಾರೆ. ಅತ್ತೆ ಶಿವಶಂಕರಿ ಮತ್ತು ಭಾವ ಶಶಿಕುಮಾರ್ 10 ಲಕ್ಷ ರು. ವರದಕ್ಷಿಣೆ ಕೊಟ್ಟು ಬಳಿಕ ನಮ್ಮ ಮನೆಗೆ ಬರುವಂತೆ ದೂರುದಾರೆಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮನೆಯಿಂದ ಹೊರಹಾಕಿದ ಆರೋಪ: ಏ.24ರಂದು ದೂರುದಾರೆ ಗರ್ಭಿಣಿ ಎಂಬ ವಿಚಾರ ಗೊತ್ತಿದ್ದರೂ ಆಕೆಯನ್ನು ಮನೆಯಿಂದ ಹೊರ ಹಾಕಿದ್ದಾರೆ. ಹೀಗಾಗಿ ತನಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ ಪತಿ ಹೇಮಂತ್ ಕುಮಾರ್, ಅತ್ತೆ ಶಿವಶಂಕರಿ ಹಾಗೂ ಭಾವ ಶಶಿಕುಮಾರ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ