ಮುರುಘಾ ಮಠದ ವಿರುದ್ಧ ಮತ್ತೊಂದು ಆರೋಪ: ಶ್ರೀಗಳಿಗೆ ಎದುರಾಗುತ್ತಾ ಕಾನೂನು ಕಂಟಕ..?

By Suvarna News  |  First Published Sep 20, 2022, 11:11 AM IST

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪದ ಮೇಲೆ ಸ್ವಾಮೀಜಿ ಬಂಧನ ಬೆನ್ನಲ್ಲೇ ಮುರುಘಾ ಮಠದ ಹೆಸರು ರಾಷ್ಟ್ರದ ಮಟ್ಟದಲ್ಲಿ ಸದ್ದು ಮಾಡಿದೆ. ಇದೀಗ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದೆ.


ಚಿತ್ರದುರ್ಗ, (ಸೆಪ್ಟೆಂಬರ್. 20): ಮುರುಘಾ ಶ್ರೀಗಳು ಬಂಧನದ ಬೆನ್ನಲ್ಲೇ ಚಿತ್ರದುರ್ಗದ ಮುರುಘಾ ಮಠದಲ್ಲಿ ಒಂದಿಲ್ಲೊಂದು ಬೆಳವಣಿಗೆಗಳು ನಡೆಯುತ್ತಲೇ ಇವೆ. ಮೊನ್ನೆ ಅಷ್ಟೇ ಮಠದ ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದರು. ಇದೀಗ  ಮುರುಘಾಮಠದಲ್ಲಿದ್ದ ಕೃಷ್ಣಮೃಗ ಹಾಗೂ ಜಿಂಕೆಗಳು ನಾಪತ್ತೆ ಆಗಿರುವ ಆರೋಪ‌ ಕೇಳಿಬಂದಿದೆ.

ಹೌದು..ಮಠದಲ್ಲಿದ್ದ ಸುಮಾರು 40 ಕೃಷ್ಣಮೃಗ, ಜಿಂಕೆಗಳು ನಾಪತ್ತೆಯಾಗಿದ್ದು, ಮಠದವರು ಜಿಂಕೆ, ಕೃಷ್ಣಮೃಗ ಕೊಲ್ಲಿಸಿರುವ ಶಂಕೆ ಇದೆ ಎಂದು ಆರೋಪಿಸಲಾಗಿದೆ. ವಕೀಲ ಡಾ.ಮಧುಕುಮಾರ್ ಎಂಬುವರು ಅರಣ್ಯ ಇಲಾಖೆ ಡಿಎಫ್ಓಗೆ  ದೂರು ನೀಡಿದ್ದು,ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

Tap to resize

Latest Videos

ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿದ ಕೋರ್ಟ್, ಮುರುಘಾ ಶ್ರೀಗಳಿಗೆ ಮತ್ತೆ ನಿರಾಸೆ

2018ರಿಂದ ಜಿಂಕೆಗಳು, ಕೃಷ್ಣಮೃಗಗಳು ನಾಪತ್ತೆ ಆಗಿವೆ. ಚರ್ಮ, ಕೋಡು ಸಂಗ್ರಹಿಸಿ ಮಾರಾಟ ಮಾಡಿರುವ ಶಂಕೆ ಇದೆ ಎಂದು ಮಧುಕುಮಾರ್ ಆರೋಪಿಸಿದ್ದು, 2018ರಿಂದ ನಾಪತ್ತೆ ಆಗಿದ್ದರೂ ಅರಣ್ಯ ಇಲಾಖೆ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಂದು ವೇಳೆ ಈ ಪ್ರಕರಣವನ್ನು ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡರೇ ಮುರುಘಾ ಶರಣರಿಗೆ ಕಾನೂನು ಕಂಟಕ ಎದುರಾಗುವ ಸಾಧ್ಯತೆಗಳಿವೆ. ಯಾಕಂದ್ರೆ, ಡಾ.ಶಿವಮೂರ್ತಿ ಶರಣರೇ ಮಠದ ಮುಖ್ಯಸ್ಥರಾಗಿದ್ದಾರೆ. 

ಸೆ.23ಕ್ಕೆ ಶ್ರೀಗಳ ಭವಿಷ್ಯ ನಿರ್ಧಾರ
ಚಿತ್ರದುರ್ಗದ ಮುರುಘಾ ಶ್ರೀ ವಿರುದ್ಧ ಫೋಕ್ಸೋ ಪ್ರಕರಣದಲ್ಲಿ ಜೈಲುಪಾಲಾಗಿರುವ ಚಿತ್ರದುರ್ಗದ ಮುರೂಘಾ ಶರಣರ ಜಾಮೀನು ಆದೇಶವನ್ನು ಕೋರ್ಟ್  ಸೆಪ್ಟೆಂಬರ್ 23ಕ್ಕೆ ಕಾಯ್ದಿರಿಸಿದೆ. ಈ ಹಿನ್ನೆಲೆಯಲ್ಲಿ ಮುರುಘಾ ಶ್ರೀಗಳಿಗೆ ಬೇಲಾ? ಜೈಲಾ? ಎನ್ನುವ ಭವಿಷ್ಯ ಸೆ.23ಕ್ಕೆ ನಿರ್ಧಾರವಾಗಲಿದೆ. ಇದರಿಂದ ಕೋರ್ಟ್ ಆದೇಶದತ್ತ ಎಲ್ಲರ ಚಿತ್ತ ನೆಟ್ಟಿದೆ.

ಏನಿದು ಪ್ರಕರಣ?:
ಕಳೆದ ವಾರ ಮುರುಘಾ ಶರಣರ ವಿರುದ್ಧ ಮೈಸೂರಿನ ನಜರಾಬಾದ್‌ ಪೊಲೀಸ್‌ ಠಾಣೆಯಲ್ಲಿ ಮಠದ ಶಾಲೆಯಲ್ಲಿ ಓದುತ್ತಿರುವ ಇಬ್ಬರು ವಿದ್ಯಾರ್ಥಿನಿಯಿರಿಂದ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬ ಕಾರಣ ನೀಡಿ ಮೈಸೂರಿನಿಂದ ಚಿತ್ರದುರ್ಗಕ್ಕೆ ಪ್ರಕರಣದ ವಿಚಾರಣೆಯನ್ನು ಹಸ್ತಾಂತರಿಸಲಾಗಿತ್ತು. ಅದಾದ ನಂತರ ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆದ ಬಳಿಕ ಮುರುಘಾ ಶರಣರನ್ನು ಗುರುವಾರ ತಡರಾತ್ರಿ ಪೊಲೀಸರು ಬಂಧಿಸಿದ್ದರು. ಪ್ರಕರಣ ದಾಖಲಾಗಿ ವಾರ ಕಳೆದರೂ ಬಂಧನವಾಗದಿರುವುದಕ್ಕೆ ರಾಜ್ಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಸಹ ಶ್ರೀಗಳ ಪರ ಹೇಳಿಕೆ ನೀಡಿದ್ದರು. ಇದಕ್ಕೂ ಆಕ್ರೋಶ ಕೇಳಿ ಬಂದಿತ್ತು. ಸದ್ಯ ಆಸ್ಪತ್ರೆಯಲ್ಲಿರುವ ಶರಣರಿಗೆ 14 ದಿನಗಳ ನ್ಯಾಯಾಂಗ ಬಂಧನವಾಗಿದೆ. 

click me!