ಒಂದು ವರ್ಷದ ಗಂಡು ಮಗುವಿನ ಮೇಲೆ ಅನೈಸರ್ಗಿಕ ಸಂಭೋಗ ನಡೆಸಿ ಬರ್ಬರವಾಗಿ ಹತ್ಯೆಗೈದ ವ್ಯಕ್ತಿಗೆ ಮರಣ ದಂಡನೆ ವಿಧಿಸಿ ನಗರದ ತ್ವರಿತಗತಿ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ಬೆಂಗಳೂರು (ನ.19): ಒಂದು ವರ್ಷದ ಗಂಡು ಮಗುವಿನ ಮೇಲೆ ಅನೈಸರ್ಗಿಕ ಸಂಭೋಗ ನಡೆಸಿ ಬರ್ಬರವಾಗಿ ಹತ್ಯೆಗೈದ ವ್ಯಕ್ತಿಗೆ ಮರಣ ದಂಡನೆ ವಿಧಿಸಿ ನಗರದ ತ್ವರಿತಗತಿ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಯಶವಂತಪುರದ ತ್ರಿವೇಣಿ ರಸ್ತೆಯಲ್ಲಿರುವ ಕರೀಮಣಿ ಕೊಳಚೆ ಪ್ರದೇಶದ ನಿವಾಸಿ ಮೂರ್ತಿ ಅಲಿಯಾಸ್ ಹಲ್ಲುಜ್ಜ, ಮರಣ ದಂಡನೆಗೆ ಒಳಗಾಗಿರುವ ಅಪರಾಧಿ. ಪ್ರಕರಣದ ವಿಚಾರಣೆ ನಡೆಸಿದ ನಗರದ 1ನೇ ತ್ವರಿತಗತಿಯ ನ್ಯಾಯಾಲಯದ ನ್ಯಾಯಾಧೀಶೆ ಕೆ.ಎನ್.ರೂಪಾ ಅವರು, ದೋಷಿಗೆ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 302 ಅಡಿ (ಕೊಲೆ) ಮರಣ ದಂಡನೆ ವಿಧಿಸಿದ್ದಾರೆ.
ಹಾಗೆಯೇ, ಐಪಿಸಿ ಸೆಕ್ಷನ್ 377 (ಅನೈಸರ್ಗಿಕ ಲೈಂಗಿಕ ಕ್ರಿಯೆ) ಮತ್ತು ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ (ಪೋಕ್ಸೋ) ಸೆಕ್ಷನ್ 5 ಹಾಗೂ 6 ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು .50 ಸಾವಿರ ದಂಡ ವಿಧಿಸಿರುವ ನ್ಯಾಯಾಲಯ, ಮೃತ ಬಾಲಕನ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡುವಂತೆ ಬೆಂಗಳೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನಿರ್ದೇಶಿಸಿದೆ.
Bengaluru: ಟಾಕಿಂಗ್ ಟಾಮ್ ಬಳಸಿ ಡ್ರಗ್ಸ್ ಕಳ್ಳಸಾಗಣೆ: ಮೂವರ ಬಂಧನ
ಅಪರಾಧಿಗಳಿಗೆ ಕಠಿಣ ಸಂದೇಶ: ಪೋಕ್ಸೋ ಕಾಯ್ದೆ 2012ರಲ್ಲಿ ಜಾರಿಗೆ ಬಂದಿದ್ದರೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಇನ್ನೂ ಮಾತ್ರ ನಿಂತಿಲ್ಲ. ದಿನದಿಂದ ದಿನಕ್ಕೆ ದೌರ್ಜನ್ಯ ಹೆಚ್ಚಾಗುತ್ತಿದ್ದು, ದೇಶದ ಭವಿಷ್ಯವಾಗಿರುವ ಮಕ್ಕಳ ಮೇಲೆ ಕ್ರೂರತನ ಮರೆಯುವ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕಿದೆ. ಇಲ್ಲವಾದರೆ ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ ಎಂದು ನ್ಯಾಯಾಧೀಶರು ಆದೇಶದಲ್ಲಿ ಕಟುವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಿರುಚಿಕೊಂಡಿದ್ದಕ್ಕೆ ಕಲ್ಲು ಎತ್ತಿಹಾಕಿ ಹತ್ಯೆ: ಮೃತ ಬಾಲಕನ ತಂದೆಗೆ ಆರೋಪಿ ಮೂರ್ತಿ ಪರಿಚಯವಿದ್ದರು. 2015ರ ಸೆ.12ರಂದು ಮಧ್ಯಾಹ್ನ 2ಕ್ಕೆ ಉಲ್ಲಾಸ್ ಚಿತ್ರಮಂದಿರ ಬಳಿ ಮೂರ್ತಿಗೆ ಮೃತ ಬಾಲಕ ಮತ್ತು ಆತನ ತಂದೆ ಸಿಕ್ಕಿದ್ದರು. ತುರ್ತು ಕೆಲಸದ ಹಿನ್ನೆಲೆಯಲ್ಲಿ ತಂದೆ, ಮೃತ ಬಾಲಕನನ್ನು ಆರೋಪಿ ಮನೆಯಲ್ಲಿಯೇ ಬಿಟ್ಟು ಹೋಗಿದ್ದರು.
ಈ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡ ಆರೋಪಿ, ಮಗುವನ್ನು ನಿರ್ಜನ ಪ್ರದೇಶವಾಗಿದ್ದ ಗೊರಗುಂಟೆಪಾಳ್ಯದ ಏರ್‌ಫೋರ್ಸ್ ಆವರಣಕ್ಕೆ ಕರೆದೊಯ್ದು ಅನೈಸರ್ಗಿಕ ಸಂಭೋಗ ನಡೆಸಿದ್ದ. ಇದರಿಂದ ಮಗು ಕಿರುಚುಕೊಂಡಾಗ ಭಯಭೀತನಾದ ಮೂರ್ತಿ, ಸ್ಥಳದಲ್ಲಿ ಬಿದ್ದಿದ್ದ 40 ಕೆ.ಜಿ ತೂಕದ ಸಿಮೆಂಟ್ ಮೌಲ್ಡ್ ಕಲ್ಲನ್ನು ಮಗುವಿನ ತಲೆ ಮೇಲೆ ಎತ್ತಿಹಾಕಿ ಕೊಲೆ ಮಾಡಿದ್ದ. ನಂತರ ಅಕ್ಕಪಕ್ಕ ಬಿದ್ದಿದ್ದ ಕಾಗದವನ್ನು ಮೃತದೇಹದ ಮೇಲೆ ಸುರಿದು ಹಾಕಿ ಬೆಂಕಿ ಹಚ್ಚಿದ್ದ.
ವೈದ್ಯರ ನಿರ್ಲಕ್ಷ್ಯದಿಂದ ಹೊಟ್ಟೆ ನೋವಿನಿಂದಾಗಿ ಆಸ್ಪತ್ರೆ ಸೇರಿದ್ದ ಮಹಿಳೆ ಸಾವು
ಪ್ರಕರಣ ಬೆಳಕಿಗೆ ಬಂದ ನಂತರ ರಾಜಗೋಪಾಲನಗರ ಠಾಣಾ ಪೊಲೀಸರು ಎಫ್‌ಐಆರ್ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದರು. ಬಳಿಕ ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿಸಲ್ಲಿಸಿದ್ದರು. ಪ್ರಕರಣವನ್ನು ಸುದೀರ್ಘವಾಗಿ ವಿಚಾರಣೆ ನಡೆಸಿದ ತ್ವರಿತಗತಿ ನ್ಯಾಯಾಲಯ, ಎಂಟು ಜನರ ಸಾಕ್ಷ್ಯ ಪರಿಗಣಿಸಿ ದೋಷಿಗೆ ಮರಣ ದಂಡನೆ ವಿಧಿಸಿದೆ. ಪ್ರಾಸಿಕ್ಯೂಷನ್ ಪರ ಸರ್ಕಾರಿ ಅಭಿಯೋಜಕರಾದ ಪಿ.ಕೃಷ್ಣವೇಣಿ ವಾದ ಮಂಡಿಸಿದ್ದರು.