ಆತ್ಮರಕ್ಷಣೆಗಾಗಿ ತನ್ನನ್ನು ಕೊಲ್ಲಲು ಯತ್ನಿಸಿದ ತಂದೆಯನ್ನೇ ಕತ್ತರಿಯಿಂದ ಇರಿದು ಹತ್ಯೆಗೈದ ಮಗಳು| ಬೆಂಗಳೂರಿನ ಬನ್ನೇರುಘಟ್ಟರಸ್ತೆಯ ಮಂತ್ರಿ ಪ್ಯಾರಡೈಸ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಘಟನೆ|
ಬೆಂಗಳೂರು(ಜು.24): 15 ವರ್ಷದ ಬಾಲಕಿಯೊಬ್ಬಳು ಆತ್ಮರಕ್ಷಣೆಗಾಗಿ ತನ್ನನ್ನು ಕೊಲ್ಲಲು ಯತ್ನಿಸಿದ ತಂದೆಯನ್ನೇ ಕತ್ತರಿಯಿಂದ ಇರಿದು ಹತ್ಯೆಗೈದಿರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ. ಬನ್ನೇರುಘಟ್ಟರಸ್ತೆಯ ಮಂತ್ರಿ ಪ್ಯಾರಡೈಸ್ ಅಪಾರ್ಟ್‌ಮೆಂಟ್ ನಿವಾಸಿ ಸಪ್ತಕ್ ಬ್ಯಾನರ್ಜಿ (46) ಕೊಲೆಯಾದವನು. ಈ ಕೃತ್ಯ ಸಂಬಂಧ ಮೃತನ ಪುತ್ರಿಯನ್ನು ವಶಕ್ಕೆ ಪಡೆದ ಮೈಕೋ ಲೇಔಟ್ ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.
2ನೇ ಮಗುವಿನ ಹೆರಿಗೆ ವೇಳೆ ಹೆಂಡತಿ ಮೃತಪಟ್ಟಬಳಿಕ ಮಕ್ಕಳ ಪಾಲನೆ ಹೊತ್ತಿದ್ದ ಬ್ಯಾನರ್ಜಿ, ಮದ್ಯವ್ಯಸನಿಯಾಗಿದ್ದ, ಅವರನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಉದ್ಯೋಗ ತೊರೆದು ತಾನು ಬಾಡಿಗೆಗೆ ನೀಡಿದ್ದ ಮನೆಯಿಂದ ಬರುತ್ತಿದ್ದ 30,000 ರು.ವನ್ನೇ ಆಧರಿಸಿ ಜೀವನ ಮಾಡುತ್ತಿದ್ದ. ಮಕ್ಕಳನ್ನು ಶಾಲೆ ಬಿಡಿಸಿ, ಸಂಬಂಧಿಕರಿಂದಲೂ ಅವರನ್ನು ದೂರ ಮಾಡಿದ್ದ. ಆದರೆ ಓದುವ ಹಂಬಲವಿದ್ದ ಬಾಲಕಿ, ತಂದೆಗೆ ತಿಳಿಯದಂತೆ ನೇರವಾಗಿ ಎಸ್‌ಎಸ್‌ಎಲ್ ಪರೀಕ್ಷೆ ತೆಗೆದುಕೊಳ್ಳಲು ಸಿದ್ಧತೆ ನಡೆಸಿದ್ದಳು. ಅಂತೆಯೇ ತಂದೆ ಮಲಗಿದ ಬಳಿಕ ಬಾಲಕಿ, ಬುಧವಾರ ರಾತ್ರಿ 1 ಗಂಟೆಯಲ್ಲಿ ಓದುತ್ತಿದ್ದಳು. ಆ ವೇಳೆ ಎಚ್ಚರಗೊಂಡ ಬ್ಯಾನರ್ಜಿ, ತನ್ನಿಚ್ಛೆಗೆ ವಿರುದ್ಧವಾಗಿ ವ್ಯಾಸಂಗ ಮಾಡುತ್ತಿದ್ದಾಳೆ ಎಂದು ಕೆರಳಿ ಕತ್ತರಿಯಿಂದ ಆಕೆಗೆ ಇರಿಯಲು ಯತ್ನಿಸಿದ್ದಾನೆ. ಆಗ ಅದೇ ಕತ್ತರಿಯನ್ನು ಕಿತ್ತುಕೊಂಡು ತಂದೆ ಎದೆಗೆ ಪ್ರತಿಯಾಗಿ ಬಾಲಕಿ ಚುಚ್ಚಿದ್ದಾಳೆ. ಬಳಿಕ ನೆರೆಹೊರೆಯವರಿಗೆ ಘಟನೆ ಕುರಿತು ಬಾಲಕಿಯೇ ತಿಳಿಸಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿಚಿತ್ರ ಮನ್ಸಸಿನ ತಂದೆ ಕಾಟಕ್ಕೆ ನರಳಿದ ಮಕ್ಕಳು
ಪಶ್ಚಿಮ ಬಂಗಾಳ ಮೂಲದ ಬ್ಯಾನರ್ಜಿ, ತನ್ನ ಕುಟುಂಬದ ಜತೆ ಬನ್ನೇರುಘಟ್ಟ ರಸ್ತೆಯ ಪ್ಯಾರಡೈಸ್ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ. ಮೊದಲು ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಆತ, ಕೆಲ ವರ್ಷಗಳಿಂದ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಒಂದು ಮನೆಯನ್ನು 30 ಸಾವಿರಕ್ಕೆ ಬಾಡಿಗೆ ಕೊಟ್ಟಿದ್ದ ಆತ, ಆ ಹಣದಲ್ಲಿ ಜೀವನ ಸಾಗಿಸುತ್ತಿದ್ದ.
ವಿಜಯಪುರ: ಲೈಂಗಿಕ ಕ್ರಿಯೆ ನಡೆಸುವಾಗಲೇ ಸಿಕ್ಕಿಬಿದ್ದ ಮಹಿಳೆ, ಯುವಕನ ಬರ್ಬರ ಕೊಲೆ..!
ತನ್ನ ಎರಡನೇ ಮಗುವಿನ ಹೆರಿಗೆ ವೇಳೆ ಆರೋಗ್ಯ ಸಮಸ್ಯೆಯಿಂದ ಪತ್ನಿ ಮೃತಪಟ್ಟ ಬಳಿಕ ಬ್ಯಾನರ್ಜಿ, ಮಕ್ಕಳ ಪಾಲನೆ ಹೊಣೆಗಾರಿಕೆ ಹೊತ್ತ. ಆದರೆ ಆ ಮಕ್ಕಳ ಪಾಲಿಗೆ ತಂದೆಯೇ ಕಂಟಕವಾದ. ಆಟ-ಪಾಠ ಎಲ್ಲದಕ್ಕೂ ತಡೆ ಬಿದ್ದು ಮಕ್ಕಳು ಬೆಂದು ಹೋದರು.
ಪತ್ನಿ ಸಾವಿನ ಬಳಿಕ ವಿಪರೀತ ಮದ್ಯ ವ್ಯಸನಿಯಾದ ಬ್ಯಾನರ್ಜಿ, ತನ್ನ ಕುಟುಂಬ ಸದಸ್ಯರು, ಸ್ನೇಹಿತರು ಸೇರಿದಂತೆ ಸಂಬಂಧದಿಂದ ದೂರವಾಗಿದ್ದ. ಅದೇ ರೀತಿ ಮಕ್ಕಳಿಗೂ ಬೇಲಿ ಹಾಕಿದ. ಅವರನ್ನು ಶಾಲೆಗೆ ಸೇರಿಸಲಿಲ್ಲ. ಸಂಬಂಧಿಕರೊಂದಿಗೆ ಬೇರೆಯಲು ಬಿಡುತ್ತಿರಲಿಲ್ಲ. ಮನೆಯಲ್ಲಿ ಕ್ಷುಲ್ಲಕ ಕಾರಣಗಳಿಗೆಲ್ಲ ಮಕ್ಕಳಿಗೆ ಬ್ಯಾನರ್ಜಿ ಹೊಡೆಯೋದು ಬಡಿಯೋದು ಮಾಡುತ್ತಿದ್ದ. ಬ್ಯಾನರ್ಜಿ ವರ್ತನೆಯಿಂದ ಬೇಸರಗೊಂಡ ಆತನ ಸಂಬಂಧಿಕರು ಸಹ ಮನೆಗೆ ಬರುತ್ತಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ತಮ್ಮ ತಂದೆಯಿಂದ ನಿರಂತರವಾಗಿ ಕಿರುಕುಳಕ್ಕೊಳಗಾದ ಆತನ 15 ವರ್ಷ ಪುತ್ರಿ ಹಾಗೂ 9 ವರ್ಷದ ಪುತ್ರ, ಸುಂದರ ಬದುಕು ಕಾಣಬೇಕಾದ ಸಮಯದಲ್ಲಿ ಜೀವನ ದುಗರ್ಮವಾಯಿತು.
ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಸಿದ್ಧತೆ
ಅಕ್ಷರ ಕಲಿಕೆಗೆ ಆಸಕ್ತಿವುಳ್ಳ ಬಾಲಕಿ, ತಂದೆಗೆ ತಿಳಿಯದಂತೆ ವಯಸ್ಸಿನ ಆಧಾರದಡಿ ನೇರವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಮುಂದಾಗಿದ್ದಳು. ಇದಕ್ಕೆ ನೆರೆಹೊರೆಯವರ ಆಕೆ ಸಹಾಯ ಪಡೆದಿದ್ದಳು. ಅಂತೆಯೇ ತನ್ನ ಅಪ್ಪ ಮಲಗಿದ ಬಳಿಕ ಆಕೆ, ರಾತ್ರಿ ವೇಳೆ ಓದುತ್ತಿದ್ದಳು. ಆದರೆ ನಿದ್ರೆಯಿಂದ ಎಚ್ಚರಗೊಂಡ ಬ್ಯಾನರ್ಜಿ, ಮಗಳ ಮೇಲೆ ಗಲಾಟೆ ಮಾಡಿದ್ದ. ಆಗ ಕತ್ತರಿಯಿಂದ ಮಗಳ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಈ ಹಂತದಲ್ಲಿ ಅದೇ ಕತ್ತರಿ ಕಸಿದು ಬಾಲಕಿ, ತಂದೆಗೆ ಇರಿದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಆನ್‌ಲೈನ್‌ನಲ್ಲೇ ಮಕ್ಕಳಿಗೆ ಫುಡ್
ಮನೆಯಲ್ಲಿ ತನಗೆ ಮತ್ತು ಮಕ್ಕಳಿಗೆ ಬ್ಯಾನರ್ಜಿ ಅಡುಗೆ ಮಾಡುತ್ತಿರಲಿಲ್ಲ. ಆನ್‌ಲೈನ್ ಮೂಲಕ ಮೂರು ಹೊತ್ತು ತರಿಸಿಕೊಳ್ಳುತ್ತಿದ್ದ. ಎಷ್ಟುದಿನಗಳು ಮಕ್ಕಳು ಚಿಫ್ಸ್, ಬಿಸ್ಕೆಟ್ಸ್ ತಿಂದು ಹಸಿವು ನೀಗಿಸಿಕೊಂಡಿವೆ ಎಂದು ಪೊಲೀಸರು ಹೇಳಿದ್ದಾರೆ.
ಓದಲು ಕುಳಿತರೆ ಪಿಯಾನೋ ನುಡಿಸುತ್ತಿದ್ದ
ಮಕ್ಕಳು ಮಲಗಿದರೆ, ಓದಲು ಕುಳಿತರೇ, ನಲಿಯುತ್ತಿದ್ದರೆ ಪಿಯಾನೋ ನುಡಿಸಿ ಬ್ಯಾನರ್ಜಿ ಪೀಡಿಸುತ್ತಿದ್ದ. ಮಕ್ಕಳಿಗೆ ನೆಮ್ಮೆದಿಯೇ ಇಲ್ಲದಂತೆ ಆತ ಕಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯಲ್ಲಿ ತನ್ನ ಮಕ್ಕಳ ಮೇಲೆ ಸಪ್ತಕ್ ಗಲಾಟೆ ಮಾಡುತ್ತಿದ್ದ. ಅಂತೆಯೇ ಬುಧವಾರ ರಾತ್ರಿ ಮಗಳೊಂದಿಗೆ ಜಗಳ ಮಾಡುವಾಗ ಈ ಹತ್ಯೆ ನಡೆದಿದೆ. ಐಪಿಸಿ 304 ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವ್ ಜೋಶಿ ಅವರು ತಿಳಿಸಿದ್ದಾರೆ.