
ಉಪ್ಪಿನಂಗಡಿ(ಸೆ.23): ಜುಲೈ 18 ರಿಂದ 34ನೇ ನೆಕ್ಕಿಲಾಡಿಯಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ನಾಪತ್ತೆ ಪ್ರಕರಣದ ಹಿಂದೆ ಭಯೋತ್ಪಾದನಾ(Terrorist) ನಂಟಿದೆ ಎಂಬ ಸುದ್ದಿಯ ಬೆನ್ನೇರಿ ಜಿಲ್ಲಾ ಪೊಲೀಸ್ ತಂಡ ತನಿಖೆಯನ್ನು ಮುಂದುವರಿಸಿದೆ. ಈ ಮಧ್ಯೆ ನಾಪತ್ತೆಯಾದ ವ್ಯಕ್ತಿಯ ಮೊಬೈಲ್ ಸಂಖ್ಯೆಯ ಲೊಕೇಷನ್ ಹಿಮಾಚಲ ಪ್ರದೇಶದಲ್ಲಿ (Himachal Pradesh) ಇರುವ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ದೊರಕಿದೆ ಎಂದು ತಿಳಿದು ಬಂದಿದೆ.
ಮೂಲತಃ ಉತ್ತರ ಪ್ರದೇಶದ ನಿವಾಸಿ ಎನ್ನುವ ಬಗ್ಗೆ ದಾಖಲೆ ಹೊಂದಿದ್ದ 48ರ ಹರೆಯದ ವ್ಯಕ್ತಿ ಕಾರ್ಯನಿಮಿತ್ತ ಬೆಂಗಳೂರಿಗೆ ಹೋದಾತ ಜುಲೈ 18ರಿಂದ ನಾಪತ್ತೆಯಾಗಿರುವುದಾಗಿ ಆತನ ನೆಕ್ಕಿಲಾಡಿಯ ಪತ್ನಿ ಆಗಸ್ಟ್ ಮೊದಲ ವಾರದಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿಗೆ ಸಂಬಂಧಿಸಿ ಪೊಲೀಸ್ ತನಿಖೆ ಮುಂದುವರಿಯುತ್ತಿದ್ದಂತೆಯೇ ನಾಪತ್ತೆಯಾದ ವ್ಯಕ್ತಿ ಉಗ್ರ ನಂಟು ಹೊಂದಿರುವ ಬಗ್ಗೆ ಮಾಹಿತಿ ಹರಡಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡ ಬೆನ್ನಲ್ಲೇ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಆತನ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿ ಆತ ಬಳಸುತ್ತಿದ್ದ ಮೊಬೈಲ್ ಸಂಪರ್ಕದ ಪ್ರದೇಶವನ್ನು ಪತ್ತೆ ಮಾಡಿದ್ದಾರೆ. ಆತನ ಬಳಕೆಯಲ್ಲಿದ್ದ ಮೊಬೈಲ್ ಸಂಖ್ಯೆ ಹಿಮಾಚಲ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ. ಶಂಕಿತ ವ್ಯಕ್ತಿಯು ಹಿಮಾಚಲ ಪ್ರದೇಶದ ಪೊಲೀಸರ ವಶದಲ್ಲಿದ್ದನೋ ಅಥವಾ ಸ್ವತಃ ತಲೆ ಮರೆಯಿಸಿಕೊಂಡಿದ್ದಾನೋ ಎನ್ನುವುದು ತನಿಖೆಯಿಂದ ತಿಳಿದುಬರಬೇಕಿದೆ.
ಮಂಗಳೂರು ವಿಮಾನ ನಿಲ್ದಾಣದ ಸುತ್ತ ಹೈ ಅಲರ್ಟ್.. ಜನರೇನು ಮಾಡಬೇಕು?
ಸೆರೆಯಾಳೇ, ತಲೆ ಮರೆಸಿದ್ದೇ?:
ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾದವರ ಬಗ್ಗೆ ಸಂಬಂಧಪಟ್ಟ ಇಲಾಖೆಯು ಸ್ಥಳೀಯ ಪೊಲೀಸರಿಂದ ಪ್ರಾಥಮಿಕ ಮಾಹಿತಿಯನ್ನು ಪಡೆಯುವ ಅಥವಾ ನೀಡುವ ಪರಿಪಾಠವಿದ್ದು, ಈತನ ಪ್ರಕರಣದಲ್ಲಿ ಅದ್ಯಾವುದೂ ನಡೆಯದೇ ಇರುವುದರಿಂದ ಪೊಲೀಸ್ ಇಲಾಖೆ ಸಹಜ ಶಂಕೆಯೊಂದಿಗೆ ತನಿಖೆ ನಡೆಸುತ್ತಿದೆ. ನೆಕ್ಕಿಲಾಡಿ ಪರಿಸರದಲ್ಲಿ ತಾನು ಪಡೆದ ಸಾಲವನ್ನು ಮರು ಪಾವತಿಸುವುದನ್ನು ತಪ್ಪಿಸುವ ಸಲುವಾಗಿ ತನ್ನನ್ನು ತಾನು ತನಿಖಾ ತಂಡದ ವಶನಾಗಿರುವ ಸುದ್ದಿ ಹಬ್ಬಿಸಲಾಯಿತೇ ಎಂಬ ಶಂಕೆಯ ನೆಲೆಗಟ್ಟಿನಲ್ಲಿಯೂ ತನಿಖೆ ನಡೆಯುತ್ತಿದೆ. ಪ್ರಸಕ್ತ ದ.ಕ. ಪೊಲೀಸರು ಹಿಮಾಚಲ ಪ್ರದೇಶದ ಪೊಲೀಸರೊಂದಿಗೆ(Police) ಸಂಪರ್ಕ ಸಾಧಿಸಿ ತನಿಖೆ ಮುಂದುವರಿಸಿದ್ದಾರೆ.
ಆಧಾರ್, ಗುರುತು ಚೀಟಿ ಹೊಂದಿದ್ದ!
ನಾಪತ್ತೆಯಾಗಿರುವ ವ್ಯಕ್ತಿ ಉತ್ತರ ಭಾರತೀಯನೆಂಬುದು ತಿಳಿದಿದ್ದರೂ ಆತನಿಗೆ ಆಧಾರ್ ಹಾಗೂ ಚುನಾವಣಾ ಗುರುತು ಪತ್ರಗಳೆಲ್ಲವನ್ನೂ ಸ್ಥಳೀಯ ಆಡಳಿತ ಒದಗಿಸಿದೆ. ಆತ ಪರ ಊರಿನವನೆಂದೂ ಗೊತ್ತಿದ್ದರೂ ಆತನಿಗೆ ಇಲ್ಲಿ ಸುಗಮ ಜೀವನ ನಡೆಸಲು ಬೇಕಾದ ಎಲ್ಲ ದಾಖಲೆಗಳು ಸುಲಭವಾಗಿ ದೊರೆತಿರುವುದು ತನಿಖಾ ತಂಡಕ್ಕೆ ಅಚ್ಚರಿಯಾಗಿದೆ. ಆತನಿಗೆ ಸ್ಥಳೀಯ ವಿಳಾಸದಲ್ಲಿ ಆಧಾರ್ ಹಾಗೂ ಗುರುತು ಚೀಟಿ ನೀಡಲಾಗಿದ್ದು, ಇದು ತನಿಖೆ ವೇಳೆ ಪತ್ತೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ