
ಬೆಂಗಳೂರು, (ಮಾ.21): ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಹಾಗೂ ನನ್ನನ್ನೂ ಸೇರಿದಂತೆ ಪ್ರಮುಖರನ್ನು ಹತ್ಯೆ ಮಾಡುವ ಬೆದರಿಕೆ ಪತ್ರ ಬಂದಿದೆ ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಹೇಳಿದ್ದಾರೆ.
ಇಂದು (ಭಾನುವಾರ) ಬೆಂಗಳೂರಿನಲ್ಲಿ ಮಾಜಿ ಸಚಿವ ಎಚ್.ಎಂ. ರೇವಣ್ಣ ಅಭಿನಂದನಾ ಸಮಾರಂಭ ಪಾಲ್ಗೊಂಡು ಈ ಆಘಾತಕಾರಿ ವಿಚಾರವನ್ನು ಸ್ವತಃ ಬಿ.ಟಿ ಲಲಿತಾ ನಾಯಕ್ ಅವರೇ ಬಹಿರಂಗ ಪಡಿಸಿದ್ದಾರೆ.
ಮೇ. 1 ರಂದು ನನ್ನನ್ನು ಕೊಲೆ ಮಾಡುತ್ತಾರಂತೆ. ಈ ಕುರಿತ ಪತ್ರ ನನಗೆ ಬಂದಿದೆ. ಬಿಜೆಪಿ ಶಾಸಕ ಸಿ.ಟಿ. ರವಿ, ಸಂಪಾದಕ ರಂಗನಾಥ್(ಪಬ್ಲಿಕ್ ಟಿವಿ), ನಟ ಶಿವರಾಜ್ ಕುಮಾರ್ ಅವರನ್ನು ಕೊಲೆ ಮಾಡುತ್ತಾರಂತೆ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಪೊಲೀಸರು ಅದನ್ನು ಪರಿಶೀಲನೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಬ್ರಾಹ್ಮಣ ಹೆಣ್ಮಕ್ಕಳು ಅನ್ಯ ಜಾತಿ ವಿವಾಹವಾಗುವುದನ್ನು ತಪ್ಪಿಸಿ : ಪೇಜಾವರ ಶ್ರೀ
ಈ ಬೆದರಿಕೆಗಳಿಗೆ ನಾನು ಹೆದರುವಳು ಅಲ್ಲ. ಸಿ.ಟಿ. ರವಿಯನ್ನು ಕೊಲೆ ಮಾಡಿದರೆ ನಾನು ಉಳಿಯುತ್ತೇನೆ. ನನ್ನ ಕೊಲೆ ಮಾಡಿದರೆ ಸಿಟಿ ರವಿ ಉಳಿಯುತ್ತಾರೆ. ಇಂತಹ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ಕೊಲೆ ಮಾಡುವರು ಎಲ್ಲಿದ್ದರೂ ಕೊಲೆ ಮಾಡುತ್ತಾರೆ. ಹಾಗಾಗಿ ನಾನು ಹೆದರಿಕೆಯಿಲ್ಲದೇ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದೇನೆ ಎಂದು ಲಲಿತಾ ನಾಯಕ್ ಆತಂಕ ವ್ಯಕ್ತಪಡಿಸಿದರು.
ಇನ್ನು ಬ್ರಾಹ್ಮಣ ಅಂತರ್ ಜಾತಿ ಮದುವೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬ್ರಾಹ್ಮಣ ಹುಡುಗಿಯರು ಅಂತರ್ಜಾತಿ ಮದುವೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಡೆಯಬೇಕು ಎಂದು ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಎಚ್.ಎಂ. ರೇವಣ್ಣ ಅವರು ಕೂಡ ಬ್ರಾಹ್ಮಣ ಸಮುದಾಯದ ಹುಡುಗಿಯನ್ನು ಮದುವೆಯಾಗಿದ್ದಾರೆ. ಅವರು ತುಂಬಾ ಚೆನ್ನಾಗಿ ಜೀವನ ನಡೆಸುತ್ತಿದ್ದಾರೆ ಎಂದು ಪರೋಕ್ಷವಾಗಿ ಪೇಜಾರ ಶ್ರೀಗಳಿಗೆ ಟಾಂಗ್ ಕೊಟ್ಟರು.
ಬ್ರಾಹ್ಮಣ ಸಮುದಾಯದವರು ಹೆಣ್ಣು ಮಕ್ಕಳು ಋತುಮತಿಯಾದ ವೇಳೆ ಕಣ್ಣಿಗೆ ಬಟ್ಟೆ ಕಟ್ಟಿ ಕಾಡಿಗೆ ಬಿಡುತ್ತಿದ್ದರು. ಆಗ ಅಲೆಮಾರಿ ಸಮುದಾಯ ಅವರನ್ನು ಮದುವೆ ಆಗುತ್ತಿದ್ದರು. ಈಗ ಅಂತರ್ಜಾತಿ ವಿವಾಹಗಳು ಪ್ರೀತಿ ಆಧಾರದ ಮೇಲೆ ನಡೆಯುತ್ತಿವೆ. ಪ್ರೀತಿ ಇರೋದ್ರಿಂದ ಜಾತಿ ಮೀರಿ ಮದುವೆಗಳಾಗುತ್ತಿವೆ. ಇದನ್ನು ಸ್ವಾಮೀಜಿ ಅರ್ಥ ಮಾಡಿಕೊಳ್ಳಬೇಕು ಎಂದು ಕುಟುಕಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ