ಚಿನ್ನ ದೋಚಿದ್ದ ಗ್ಯಾಂಗ್‌: 400 ಕಿ.ಮೀ ಚೇಸ್‌ ಮಾಡಿ ಕಳ್ಳನ ಬಂಧನ

By Kannadaprabha NewsFirst Published Mar 21, 2021, 7:42 AM IST
Highlights

ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸರ ಕಾರ್ಯಾಚರಣೆ| ಆರೋಪಿಯಿಂದ 24 ಲಕ್ಷ ಮೌಲ್ಯದ 440 ಗ್ರಾಂ ಚಿನ್ನಾಭರಣ ಜಪ್ತಿ| ತಲೆಮರೆಸಿಕೊಂಡಿರುವ ಗ್ಯಾಂಗ್‌ನ ಲೀಡರ್‌ ಪೇಟಲ ಪ್ರತೀಷ್‌, ಚೆಲ್ಲಾ ಪ್ರಭುದಾಸನ ಸೋದರ ಚೆಲ್ಲಾ ಅಲೆಕ್ಸಾಂಡರ್‌ ಸೇರಿದಂತೆ ಇತರೆ ಆರೋಪಿಗಳ ಪತ್ತೆಗೆ ಜಾಲ ಬೀಸಿದ ಪೊಲೀಸರು| 

ಬೆಂಗಳೂರು(ಮಾ.21):  ರಸ್ತೆ ಬದಿ ಮೂತ್ರ ವಿಸರ್ಜನೆಗೆ ತೆರಳಿದ್ದಾಗ ಚಿನ್ನಾಭರಣ ವ್ಯಾಪಾರಿಯೊಬ್ಬರ ಬೈಕ್‌ ಡಿಕ್ಕಿಯಲ್ಲಿದ್ದ 1 ಕೆ.ಜಿ.ಆಭರಣವಿದ್ದ ಬ್ಯಾಗನ್ನು ದೋಚಿದ್ದ ‘ಆಂಧ್ರ ಗ್ಯಾಂಗ್‌’ನನ್ನು 400 ಕಿ.ಮೀ. ಬೆನ್ನುಹತ್ತಿ ಹೋಗಿ ಒಬ್ಬಾತನನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಚೆಲ್ಲಾ ಪ್ರಭುದಾಸ್‌ ಅಲಿಯಾಸ್‌ ಹರ್ಷ ಬಂಧಿತನಾಗಿದ್ದು, ಆರೋಪಿಯಿಂದ 24 ಲಕ್ಷ ಮೌಲ್ಯದ 440 ಗ್ರಾಂ ಚಿನ್ನಾಭರಣ ಜಪ್ತಿಯಾಗಿದೆ. ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಆ ಗ್ಯಾಂಗ್‌ನ ಲೀಡರ್‌ ಪೇಟಲ ಪ್ರತೀಷ್‌, ಚೆಲ್ಲಾ ಪ್ರಭುದಾಸನ ಸೋದರ ಚೆಲ್ಲಾ ಅಲೆಕ್ಸಾಂಡರ್‌ ಸೇರಿದಂತೆ ಇತರೆ ಆರೋಪಿಗಳ ಪತ್ತೆಗೆ ತನಿಖೆ ಮುಂದುವರೆದಿದೆ. ಕೆಲ ದಿನಗಳ ಹಿಂದೆ ಹೆಗಡೆ ನಗರದ ಸಮೀಪ ವ್ಯಾಪಾರಿ ಶಿವರಾಂ ಅವರಿಗೆ ಸೇರಿದ ಬಂಗಾರವನ್ನು ಆರೋಪಿಗಳು ಕದ್ದಿದ್ದರು.

ಪೊಲೀಸ್‌ ದಾಳಿ: ಟಾಯ್ಲೆಟ್‌ಗೆ ಡ್ರಗ್ಸ್‌ ಎಸೆದು ನಾಶ ಪಡಿಸಿದ..!

ಚಿನ್ನಾಭರಣ ವ್ಯಾಪಾರಿ ಶಿವರಾಂ ಅವರು, ಯಲಹಂಕ ಸಮೀಪ ಆಭರಣ ಅಂಗಡಿಗಳಿಗೆ ಆಭರಣಗಳ ಮಾರಾಟಕ್ಕೆ ತೆರಳಿದ್ದರು. ಆ ವೇಳೆ ಬೆಳ್ಳಳ್ಳಿ ಕ್ರಾಸ್‌ನಿಂದ ಹೆಗಡೆ ನಗರದ ಕಡೆಗೆ ಅವರು ಹೊರಟಿದ್ದರು. ಮಾರ್ಗ ಮಧ್ಯೆ ರಾಷ್ಟ್ರೋತ್ಥಾನ ಶಾಲೆ ಮೇಲ್ಸೇತುವೆ ಸಮೀಪದ ಖಾಲಿ ಪ್ರದೇಶದಲ್ಲಿ ಬೈಕ್‌ ನಿಲ್ಲಿಸಿ ಮೂತ್ರ ವಿಸರ್ಜನೆಗೆ ತೆರಳಿದ್ದಾಗ ಬೈಕ್‌ನಲ್ಲಿದ್ದ 1 ಕೆ.ಜಿ 200 ಗ್ರಾಂ ಚಿನ್ನ ಇದ್ದ ಬಾಕ್ಸ್‌ ಕಳ್ಳತನವಾಗಿತ್ತು. ಈ ಬಗ್ಗೆ ಸಂಪಿಗೆಹಳ್ಳಿ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದರು ಎಂದು ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಹೇಳಿದ್ದಾರೆ.

ಬೆಂಗಳೂರು ಟು ಆಂಧ್ರ

ಈ ಪ್ರಕರಣ ತನಿಖೆಗೆ ಆರಂಭಿಸಿದ ಪೊಲೀಸರಿಗೆ ಆಂಧ್ರಪ್ರದೇಶದ ಗ್ಯಾಂಗ್‌ವೊಂದು ಕೆ.ಆರ್‌.ಪುರ, ಹೊಸಕೋಟೆ, ಕೋಲಾರ ಮೂಲಕ ಆಂಧ್ರಪ್ರದೇಶಕ್ಕೆ ತೆರಳಿರುವ ಸುಳಿವು ಸಿಕ್ಕಿತು. ಕೃತ್ಯ ನಡೆದ ಸ್ಥಳದಿಂದ ಆಂಧ್ರಪ್ರದೇಶದ ನೆಲ್ಲೂರು ವರೆಗೆ (ಸುಮಾರು 400 ಕಿ.ಮೀ)ವರೆಗೆ ರಸ್ತೆಯಲ್ಲಿ ಸಿಗುವ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಸಂಗ್ರಹಿಸಿ ಪರಿಶೀಲಿಸಿದ್ದರು. ಅಲ್ಲದೆ, ಆ ದಾರಿಯಲ್ಲಿ ಸಿಗುವ 5 ಟೋಲ್‌ಗಳಲ್ಲಿ ಆರೋಪಿಗಳ ಫೋಟೋ ಮತ್ತು ಬೈಕ್‌ ಬಗ್ಗೆ ಪೊಲೀಸರು ವಿಚಾರಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಕೊನೆಗೆ ಕಳ್ಳರ ತಂಡದ ಆಂಧ್ರದಲ್ಲಿ ಚೆಲ್ಲಾ ಪ್ರಭುದಾಸ್‌ ಸಿಕ್ಕಿಬಿದ್ದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

click me!