ಐಪಿಎಸ್‌ ಅಧಿಕಾರಿ ಎಂದು ಪೋಸ್‌ ನೀಡಿ ಮಹಿಳೆಯರ ವಂಚಿಸಿದ 8ನೇ ತರಗತಿ ಓದಿರುವ ಭೂಪ..!

By BK AshwinFirst Published Dec 19, 2022, 10:42 PM IST
Highlights

ಅವನು ವಂಚಕನೆಂದು ಮಹಿಳಾ ವೈದ್ಯೆ ಕಂಡುಕೊಂಡಾಗ, ಆಕೆ ಪೊಲೀಸರ ಬಳಿ ಹೋಗಲು ನಿರ್ಧರಿಸಿದಳು. ಆದರೆ, ಈ ವೇಳೆ ನಕಲಿ ಐಪಿಎಸ್ ಅಧಿಕಾರಿ ತನಗೆ ರಾಜಕೀಯ ಸಂಪರ್ಕವಿದೆ ಎಂದು ಬೆದರಿಕೆ ಹಾಕಿದ್ದಾನೆ ಎಂದೂ ಪೊಲೀಸರು ತಿಳಿಸಿದ್ದಾರೆ.


8ನೇ ತರಗತಿ ಉತ್ತೀರ್ಣರಾಗಿರುವ (8th Class Pass) ವ್ಯಕ್ತಿಯೊಬ್ಬ ಭಾರತೀಯ ಪೊಲೀಸ್ ಸೇವೆ ಅಥವಾ ಐಪಿಎಸ್ ಅಧಿಕಾರಿ (IPS Officer) ಎಂದು ಬಿಂಬಿಸಿ ಕನಿಷ್ಠ ಒಂದು ಡಜನ್‌ ಮಹಿಳೆಯರ (Women) ಬಳಿ ಲಕ್ಷ ಲಕ್ಷ ರೂಪಾಯಿ ವಸೂಲಿ ಮಾಡಿ ವಂಚಿಸಿದ್ದಾನೆ (Fraud) ಎಂದು ದೆಹಲಿ ಪೊಲೀಸರು (Delhi Police) ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಈ ಆರೋಪಿ ವಿಕಾಸ್ ಗೌತಮ್, ವಿಕಾಸ್ ಯಾದವ್ ಹೆಸರಿನಲ್ಲಿ ಟ್ವಿಟ್ಟರ್‌ (Twitter), ಇನ್‌ಸ್ಟಾಗ್ರಾಮ್ (Instagram) ಮತ್ತು ಫೇಸ್‌ಬುಕ್‌ನಲ್ಲಿ (Facebook) ನಕಲಿ ಪ್ರೊಫೈಲ್‌ಗಳನ್ನು ಸೃಷ್ಟಿಸಿದ್ದಾನೆ ಎಂದೂ ತಿಳಿದುಬಂದಿದೆ. ಇನ್ನು, ತನ್ನ ಪ್ರೊಫೈಲ್ ಅನ್ನು ಅಧಿಕೃತವಾಗಿ ಕಾಣುವಂತೆ ಮಾಡಲು, ಆತ ಕೆಂಪು ದೀಪ ಹೊಂದಿರುವ ಸರ್ಕಾರಿ ಕಾರಿನೊಂದಿಗೆ ಪೋಸ್ ನೀಡಿದ್ದ.

ದೆಹಲಿಯ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿರುವ ಮಹಿಳೆಯೊಬ್ಬರನ್ನು ಸಹ ಈತ ವಂಚಿಸಿದ್ದಾನೆ. ಅವರು ಆನ್‌ಲೈನ್‌ನಲ್ಲಿ ಚಾಟ್ ಮಾಡಲು ಪ್ರಾರಂಭಿಸಿದ್ದು, ಒಂದು ದಿನ, ಆಕೆಯ ನಂಬಿಕೆಯನ್ನು ಗಳಿಸಿಕೊಂಡಿದ್ದಾನೆ. ನಂತರ ವಿಕಾಸ್‌ ಎಂಬ ಹೆಸರಿನ ಈ ವ್ಯಕ್ತಿ ಮಹಿಳಾ ವೈದ್ಯೆಯಿಂದ ತೆಗೆದುಕೊಂಡ ವಿವರಗಳನ್ನು ಬಳಸಿ, ಆಕೆಯ ಬ್ಯಾಂಕ್ ಖಾತೆಯಿಂದ 25,000 ರೂ. ಪಡೆದಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನು ಓದಿ: ಉಡುಪಿಯ ಕಮಲಾಕ್ಷಿ ಸಹಕಾರಿ ಸಂಘದಲ್ಲಿ ಹಗರಣ: 100 ಕೋಟಿ ಗುಳುಂ?

ಅಂತಿಮವಾಗಿ, ಅವನು ವಂಚಕನೆಂದು ಮಹಿಳಾ ವೈದ್ಯೆ ಕಂಡುಕೊಂಡಾಗ, ಆಕೆ ಪೊಲೀಸರ ಬಳಿ ಹೋಗಲು ನಿರ್ಧರಿಸಿದಳು. ಆದರೆ, ಈ ವೇಳೆ ನಕಲಿ ಐಪಿಎಸ್ ಅಧಿಕಾರಿ ತನಗೆ ರಾಜಕೀಯ ಸಂಪರ್ಕವಿದೆ ಎಂದು ಬೆದರಿಕೆ ಹಾಕಿದ್ದಾನೆ ಎಂದೂ ಪೊಲೀಸರು ತಿಳಿಸಿದ್ದಾರೆ.

ಆದರೂ, ವೈದ್ಯರ ದೂರಿನ ಆಧಾರದ ಮೇಲೆ, ಪೊಲೀಸರು ತಾಂತ್ರಿಕ ಕಣ್ಗಾವಲು ಆರಂಭಿಸಿ, ಅಂತಿಮವಾಗಿ ಆತನನ್ನು ಬಂಧಿಸಿದರು. ಈ ವೇಳೆ, ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡು ಹತ್ತಾರು ಮಹಿಳೆಯರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಕಾಸ್ ಗೌತಮ್ ಮಧ್ಯಪ್ರದೇಶದ ಗ್ವಾಲಿಯರ್ ನಿವಾಸಿ ಎಂದು ದೆಹಲಿ ಪೊಲೀಸ್ ಅಧಿಕಾರಿ ಹರಿಂದರ್ ಸಿಂಗ್ ಹೇಳಿದ್ದು, ಆರೋಪಿ 8 ನೇ ತರಗತಿ ಉತ್ತೀರ್ಣರಾದ ನಂತರ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವೆಲ್ಡಿಂಗ್ ಕೋರ್ಸ್ ಮಾಡಿದ್ದಾರೆ.

ಇದನ್ನೂ ಓದಿ: Online Dating: ಹೀಗೆಲ್ಲಾ ವಂಚನೆ ಮಾಡುತ್ತಾರೆ ತಿಳ್ಕೊಳ್ಳಿ!

ಇನ್ನು, ವಿಕಾಸ್ ಗೌತಮ್ ರಾಷ್ಟ್ರ ರಾಜಧಾನಿ ದೆಹಲಿಯ ನಾಗರಿಕ ಸೇವಾ ಪರೀಕ್ಷಾ ಕೋಚಿಂಗ್ ಕೇಂದ್ರಗಳ ಕೇಂದ್ರವಾದ ಉತ್ತರ ದೆಹಲಿಯ ಮುಖರ್ಜಿ ನಗರದ ರೆಸ್ಟೋರೆಂಟ್‌ನಲ್ಲಿಯೂ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅವನು ಆ ಪ್ರದೇಶದಲ್ಲಿ ನಾಗರಿಕ ಸೇವೆ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ನೋಡುತ್ತಿದ್ದ ಮತ್ತು ಅಲ್ಲಿಂದ ಐಪಿಎಸ್ ಅಧಿಕಾರಿಯಂತೆ ನಟಿಸುವ ಆಲೋಚನೆ ಮಾಡಿ ಈ ರೀತಿ ವಂಚಿಸಿದ್ದಾನೆ ಎಂದು ತಿಳಿದುಬಂದಿದೆ. 

ಅಲ್ಲದೆ, ವಿಕಾಸ್ ಗೌತಮ್‌ಗೆ ಕ್ರಿಮಿನಲ್ ಇತಿಹಾಸವಿದೆ ಎಂದು ಪೊಲೀಸರು ಕಂಡುಕೊಂಡಿದ್ದು, ಆತ ಈ ಹಿಂದೆ ಉತ್ತರ ಪ್ರದೇಶ ಮತ್ತು ಗ್ವಾಲಿಯರ್‌ನಲ್ಲಿ ವಂಚನೆ ಆರೋಪದ ಮೇಲೆ ಜೈಲಿನಲ್ಲಿದ್ದ ಎಂಬುದು ಬೆಳಕಿಗೆ ಬಂದಿದೆ. 

ಇದನ್ನೂ ಓದಿ: ವಾಟ್ಸ್ಆ್ಯಪ್ ಬಳಕೆದಾರರೇ ಎಚ್ಚರ; ಸೈಬರ್ ವಂಚಕರು ನಿಮ್ಮ ಬ್ಯಾಂಕ್ ಖಾತೆಗೂ ಕನ್ನ ಹಾಕ್ಬಹುದು!

click me!