ಸಿಐಡಿ ಪೇದೆಯಿಂದಲೇ ಕರೆ ವಿವರ ಮಾರಾಟ..!

By Kannadaprabha News  |  First Published Aug 9, 2024, 11:48 AM IST

ಸಿಐಡಿ ಟೆಕ್ನಿಕಲ್ ಸೆಲ್‌ನ ಹೆಡ್‌ಕಾನ್‌ಸ್ಟೇಬಲ್‌ ಮುನಿರತ್ನ ಬಂಧಿತ. ಇತ್ತೀಚೆಗೆ ದಂಧೆಯ ಕಿಂಗ್‌ಪಿನ್ ಆಂಧ್ರಪ್ರದೇಶ ನಾಗೇಶ್ವರ ರೆಡ್ಡಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಈ ಇಬ್ಬರ ಬಂಧನದೊಂದಿಗೆ ಈ ಪ್ರಕರಣದಲ್ಲಿ ಈವರೆಗೆ ಬಂಧಿತ ಆರೋಪಿಗಳ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. 


ಬೆಂಗಳೂರು(ಆ.09):  ಅನಧಿಕೃತವಾಗಿ ಸಿಡಿಆರ್ (ಕರೆಗಳ ವಿವರ) ಪಡೆದು ಮಾರಾಟ ದಂಧೆ ಪ್ರಕರಣ ಸಂಬಂಧ ಅಪರಾಧ ತನಿಖಾ ದಳದ (ಸಿಐಡಿ) ತಂತ್ರಜ್ಞಾನ ವಿಭಾಗದ ಹೆಡ್‌ ಕಾನ್‌ಸ್ಟೇಬಲ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಿಐಡಿ ಟೆಕ್ನಿಕಲ್ ಸೆಲ್‌ನ ಹೆಡ್‌ಕಾನ್‌ಸ್ಟೇಬಲ್‌ ಮುನಿರತ್ನ ಬಂಧಿತ. ಇತ್ತೀಚೆಗೆ ದಂಧೆಯ ಕಿಂಗ್‌ಪಿನ್ ಆಂಧ್ರಪ್ರದೇಶ ನಾಗೇಶ್ವರ ರೆಡ್ಡಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಈ ಇಬ್ಬರ ಬಂಧನದೊಂದಿಗೆ ಈ ಪ್ರಕರಣದಲ್ಲಿ ಈವರೆಗೆ ಬಂಧಿತ ಆರೋಪಿಗಳ ಸಂಖ್ಯೆ 12ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಐಡಿ ಹೆಡ್‌ ಕಾನ್‌ಸ್ಟೇಬಲ್‌ ಮುನಿರತ್ನನಿಂದ ಕಿಂಗ್‌ಪಿನ್‌ ನಾಗೇಶ್ವರ ರೆಡ್ಡಿ ತಮಗೆ ಬೇಕಾದವರ ಮೊಬೈಲ್‌ ಕರೆಗಳ ಸಿಡಿಆರ್‌ ಪಡೆದು, ಪ್ರಶಾಂತನಗರದ ‘ಮಹಾನಗರ ಡಿಟೆಕ್ಟಿವ್ ಆ್ಯಂಡ್ ಸೆಕ್ಯೂರಿಟಿ ಸರ್ವೀಸ್’, ಗೋವಿಂದರಾಜನಗರದ ‘ರಾಜಧಾನಿ ಕಾರ್ಪೋರೇಷನ್’ ಡಿಟೆಕ್ಟಿವ್ ಏಜೆನ್ಸಿ ಹಾಗೂ ಬಸವೇಶ್ವರನಗರದ ‘ಎಲಿಗೆಂಟ್‌ ಡಿಟೆಕ್ಟಿವ್‌ ಏಜೆನ್ಸಿ’ಗೆ ಮಾರಾಟ ಮಾಡಿ ಹಣ ಪಡೆಯುತ್ತಿದ್ದ. ಈ ಹಣದಲ್ಲಿ ಮುನಿರತ್ನನಿಗೂ ಒಂದು ಪಾಲು ನೀಡುತ್ತಿದ್ದ ಎಂದು ವಿಚಾರಣೆಯಿಂದ ತಿಳಿದು ಬಂದಿದೆ.

Latest Videos

undefined

ಬೆಂಗಳೂರು: ಬರ್ತ್‌ಡೇ ಖುಷಿಯಲ್ಲಿ ಗಾಂಜಾ ಸೇವಿಸಿ ಬೈಕ್‌ನಲ್ಲಿ ವ್ಹೀಲಿಂಗ್‌..!

ಈ ಖಾಸಗಿ ಡಿಟೆಕ್ಟಿವ್‌ ಏಜೆನ್ಸಿಗಳು ತಮಗೆ ಬೇಕಾದ ವ್ಯಕ್ತಿಗಳ ಮೊಬೈಲ್‌ನ ಸಿಡಿಆರ್‌ ಪಡೆಯಲು ಕಿಂಗ್‌ಪಿನ್‌ ನಾಗೇಶ್ವರ ರೆಡ್ಡಿಯನ್ನು ಸಂಪರ್ಕಿಸುತ್ತಿದ್ದವು. ನಾಗೇಶ್ವರ ರೆಡ್ಡಿ ಸಿಐಡಿ ಟೆಕ್ನಿಕಲ್‌ ಸೆಲ್‌ನ ಹೆಡ್ ಕಾನ್‌ಸ್ಟೇಬಲ್‌ನಿಂದ ಆ ಸಿಡಿಆರ್‌ಗಳನ್ನು ಪಡೆದು ಡಿಟೆಕ್ಟಿವ್‌ ಎಜೆನ್ಸಿಗಳಿಗೆ ನೀಡುತ್ತಿದ್ದ. ಬಳಿಕ ಏಜೆನ್ಸಿಗಳು ₹18-20 ಸಾವಿರಕ್ಕೆ ಸಿಡಿಆರ್‌ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದವು. ಈ ಸಿಡಿಆರ್‌ ಮಾರಾಟ ದಂಧೆಯ ಜಾಲ ಹೊರರಾಜ್ಯಗಳಿಗೂ ವಿಸ್ತರಿಸಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅನುಮತಿ ಇದ್ದರಷ್ಟೇ ಸಿಡಿಆರ್‌ ಮಾಹಿತಿ

ಅಪರಾಧ ಪ್ರಕರಣಗಳ ಆರೋಪಿಗಳಿಗೆ ಸಂಬಂಧಿಸಿದ ಮೊಬೈಲ್‌ ಕರೆಗಳ ಸಿಡಿಆರ್‌ ಪಡೆಯಲು ತನಿಖಾಧಿಕಾರಿಗಳಿಗೆ ಮಾತ್ರ ಕಾನೂನಿನಲ್ಲಿ ಅವಕಾಶವಿದೆ. ಈ ಸಿಡಿಆರ್‌ ಪಡೆಯಲು ತನಿಖಾಧಿಕಾರಿ ಕಮಿಷನರೇಟ್‌ನಲ್ಲಿ ಡಿಸಿಪಿ ಮತ್ತು ಜಿಲ್ಲೆಗಳಲ್ಲಿ ಎಸ್ಪಿಗಳ ಅನುಮತಿ ಪಡೆಯಬೇಕು. ಬಳಿಕ ಸಿಐಡಿ ಟೆಕ್ನಿಕಲ್‌ ಸೆಲ್‌ಗೆ ಪತ್ರ ಬರೆದು ಸಿಡಿಆರ್‌ ಮಾಹಿತಿ ಪಡೆದು ತನಿಖೆಗೆ ಬಳಸಿಕೊಳ್ಳಬೇಕು ಎಂದು ನಿಯಮ ಹೇಳುತ್ತದೆ.

ಪ್ರಕರಣದ ಹಿನ್ನೆಲೆ:

ಅನಧಿಕೃತವಾಗಿ ಸಾರ್ವಜನಿಕರ ಸಿಡಿಆರ್‌ ಮಾಹಿತಿ ಸಂಗ್ರಹಿಸಿ ಮಾರಾಟ ಮಾಡುತ್ತಿರುವ ಆರೋಪದಡಿ ಸಿಸಿಬಿ ಪೊಲೀಸರು ಮೇ 22ರಂದು ಗ್ರಾಹಕರ ಸೋಗಿನಲ್ಲಿ ನಗರದ ಮಹಾನಗರ, ರಾಜಧಾನಿ ಹಾಗೂ ಎಲಿಗೆಂಟ್‌ ಡಿಟೆಕ್ಟಿವ್‌ ಏಜೆನ್ಸಿಗಳ ಕಚೇರಿಗಳ ಮೇಲೆ ದಾಳಿ ಮಾಡಿದ್ದರು. ಈ ಡಿಟೆಕ್ಟಿವ್‌ ಏಜೆನ್ಸಿಗಳ ಮಾಲೀಕರು ಹಾಗೂ ಕೆಲಸಗಾರರು ಸೇರಿ 10 ಮಂದಿಯನ್ನು ಬಂಧಿಸಿದ್ದರು. ಈ ಸಂಬಂಧ ಗೋವಿಂದರಾಜನಗರ ಮತ್ತು ಬಸವೇಶ್ವರನಗರದಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣ ಸಿಸಿಬಿಗೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ತನಿಖೆ ಮುಂದುವರೆಸಿದ್ದ ಸಿಸಿಬಿ ಅಧಿಕಾರಿಗಳು ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಅಧಿಕೃತ ಸಂಖ್ಯೆಗಳ ನಡುವೆ ಅನಧಿಕೃತ ಸಂಖ್ಯೆ ಸೇರ್ಪಡೆ!

ಪ್ರಕರಣಗಳ ತನಿಖೆ ಸಂಬಂಧ ಆರೋಪಿಗಳ ಸಿಡಿಆರ್‌ ಮಾಹಿತಿ ಪಡೆಯಲು ತನಿಖಾಧಿಕಾರಿಗಳು ಸಿಐಡಿ ಟೆಕ್ನಿಕಲ್‌ ಸೆಲ್‌ಗೆ ಪತ್ರ ಬರೆದಾಗ, ಹೆಡ್‌ಕಾನ್‌ಸ್ಟೇಬಲ್‌ ಮುನಿರತ್ನ, ಆ ಪತ್ರದಲ್ಲಿ ತನಗೆ ಬೇಕಾದ ಮೊಬೈಲ್‌ ಸಂಖ್ಯೆಗಳನ್ನು ಸೇರಿಸಿ ಸರ್ವಿಸ್‌ ಪ್ರೊವೈಡರ್‌ಗಳಿಗೆ ಸಲ್ಲಿಸಿ ಸಿಡಿಆರ್‌ ಪಡೆಯುತ್ತಿದ್ದ. ಸಿಡಿಆರ್‌ ಸಿಕ್ಕ ಬಳಿಕ ಅಧಿಕೃತ ಮೊಬೈಲ್‌ ಸಂಖ್ಯೆಗಳ ಸಿಡಿಆರ್‌ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡುತ್ತಿದ್ದ. ತನಗೆ ಬೇಕಾದ ಸಿಡಿಆರ್‌ ಮಾಹಿತಿಯನ್ನು ಕಿಂಗ್‌ಪಿನ್‌ ನಾಗೇಶ್ವರ ರೆಡ್ಡಿಗೆ ನೀಡಿ ಹಣ ಪಡೆಯುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಬೈಕ್‌ನಲ್ಲಿ ಬರುವ ವೇಳೆ ಸಿನಿಮಿಯ ಶೈಲಿಯಲ್ಲಿ ನಟೋರಿಯಸ್ ರೌಡಿಯನ್ನು ಸಿಗ್ನಲ್‌ನಲ್ಲಿ ಹಿಡಿದ ಪೊಲೀಸ್ ಪೇದೆ!

ದಂಪತಿ, ಪ್ರೇಮಿಗಳ ಸಿಡಿಆರ್‌!

ದಂಪತಿ, ಪ್ರೇಮಿಗಳು, ರಾಜಕಾರಣಿಗಳು, ಅಧಿಕಾರಿಗಳು ಈ ಖಾಸಗಿ ಡಿಟೆಕ್ಟಿವ್‌ ಏಜೆನ್ಸಿಗಳನ್ನು ಸಂಪರ್ಕಿಸಿ ತಮಗೆ ಬೇಕಾದ ವ್ಯಕ್ತಿಗಳ ಮೊಬೈಲ್‌ ಕರೆಗಳ ಸಿಡಿಆರ್‌ ಪಡೆದಿದ್ದಾರೆ. ಇದರಲ್ಲಿ ಪರಸ್ಪರ ಅನುಮಾನದ ಹಿನ್ನೆಲೆಯಲ್ಲಿ ದಂಪತಿ, ಪ್ರೇಮಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಈ ಏಜೆನ್ಸಿಗಳನ್ನು ಸಂಪರ್ಕಿಸಿ ಸಿಡಿಆರ್‌ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಸಿಡಿಆರ್‌ ಮಾರಾಟ ದಂಧೆ ಅಂತರ್‌ ರಾಜ್ಯ ಮಟ್ಟದಲ್ಲಿ ಜಾಲ ಹೊಂದಿದೆ. ಕಿಂಗ್‌ಪಿನ್‌ಗೆ ಅನಧಿಕೃತವಾಗಿ ಸಿಡಿಆರ್‌ ಮಾಹಿತಿ ನೀಡುತ್ತಿದ್ದ ಆರೋಪದಡಿ ಪೊಲೀಸ್‌ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಈ ದಂಧೆಯ ಹಿಂದೆ ವ್ಯವಸ್ಥಿತ ಜಾಲ ಕೆಲಸ ಮಾಡುತ್ತಿರುವುದು ತಿಳಿದು ಬಂದಿದ್ದು, ತನಿಖೆ ಮುಂದುವರೆದಿದೆ ಎಂದು ನಗರ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಚಂದ್ರಗುಪ್ತ ತಿಳಿಸಿದ್ದಾರೆ. 

click me!