ಸರ್ಕಾರಿ ಯೋಜನೆಯಡಿ ಲಕ್ಷಾಂತರ ರೂಪಾಯಿ ಕೊಡಿಸುವ ನೆಪದಲ್ಲಿ ಕಂಪ್ಯೂಟರ್ ಟ್ರೈನಿಂಗ್ ಸೆಂಟರ್ ಮಾಲೀಕ ಪಂಗನಾಮ ಹಾಕಿರುವ ಘಡನೆ ಚಿತ್ರದುರ್ಗದಲ್ಲಿ ನಡೆದಿದೆ.
ವರದಿ: ಕಿರಣ್ಎಲ್ ತೊಡರನಾಳ್, ಚಿತ್ರದುರ್ಗ
ಚಿತ್ರದುರ್ಗ (ಜೂ. 27): ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಾಗಿದ್ದರೂ ಕಂಪ್ಯೂಟರ್‌ಗಳ ಮೇಲಿನ ಅವಲಂಬನೆ ಕಡಿಮೆಯಾಗಿಲ್ಲ. ಹೀಗಾಗಿ ಇದನ್ನೇ ಬಂಡವಾಳ ಮಾಡಿಕೊಂಡಿರುವ ಖದೀಮರು ಜನರಿಗೆ ಮೋಸ ಮಾಡುತ್ತಿದ್ದಾರೆ. ಸರ್ಕಾರಿ ಯೋಜನೆಯಡಿ ಲಕ್ಷಾಂತರ ರೂಪಾಯಿ ಕೊಡಿಸುವ ನೆಪದಲ್ಲಿ ಕಂಪ್ಯೂಟರ್ ಟ್ರೈನಿಂಗ್ ಸೆಂಟರ್ ಮಾಲೀಕ ಪಂಗನಾಮ ಹಾಕಿರುವ ಘಡನೆ ಚಿತ್ರದುರ್ಗದಲ್ಲಿ ನಡೆದಿದೆ.
ಸರ್ಕಾರಿ ಉದ್ಯೋಗ ಸಿಗದೇ ಕಂಗಾಲಾದ ನಿರುದ್ಯೋಗಿಗಳು, ಕಂಪ್ಯೂಟರ್ ತರಬೇತಿ ಕೇಂದ್ರ ತೆರೆದು ಅದರಿಂದ ಅವರ ಜೀವನ ರೂಪಿಸಿಕೊಳ್ಳಲು ಮುಂದಾಗಿದ್ದರು. ಆಸಕ್ತ ವಿದ್ಯಾರ್ಥಿಗಳು ಹಾಗು ಇತರರಿಗೆ ಕಂಪ್ಯೂಟರ್ ತರಬೇತಿ ನೀಡಿ, ಹೊಟ್ಟೆ ತುಂಬಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದರು. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರೊ ಕೋಟೆನಾಡಿನ ಪ್ರವೀಣ್ ಕುಮಾರ್ ಸರ್ಕಾರದಿಂದ 'ಉದಯೋನ್ಮುಖ ಚೇತನ' ಎಂಬ ಯೋಜನೆಯಡಿ ಹಣ ಕೊಡಿಸುವುದಾಗಿ ಮೋಸ ಮಾಡಿದ್ದಾನೆ.
ಪ್ರವೀಣ್ ಕುಮಾರ್ ಮೂರು ಲಕ್ಷರೂಪಾಯಿ ಮೌಲ್ಯದ ಕಂಪ್ಯೂಟರ್ ತರಬೇತಿ ಯೋಜನೆ ಕೊಡಿಸುವ ನೆಪದಲ್ಲಿ ಲಕ್ಷಾಂತರ ರೂಪಾಯಿ ಪೀಕಿ, ಮೋಸ ಮಾಡಿ ವಂಚಿಸಿದ್ದಾನೆಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಆರೋಪಿಗಾಗಿ ಬಲೆಬೀಸಿದ್ದ ಕೋಟೆನಾಡಿನ ಪೊಲೀಸರು ಪ್ರವೀಣನನ್ನು ಬಂಧಿಸಿದ್ದಾರೆ. ಅಲ್ಲದೇ ಪ್ರಕರಣದ ಹಿಂದಿರೋ ಉಳಿದ ಆರೋಪಿಗಳನ್ನು ಬಂಧಿಸಲು ಸಹ ಕಾರ್ಯತಂತ್ರ ರೂಪಿಸಿದ್ದಾರೆ.
ಇದನ್ನೂ ಓದಿ: ಲಾಟರಿ ಹೆಸರಲ್ಲಿ 100ಕ್ಕೂ ಹೆಚ್ಚು ಜನರನ್ನು ವಂಚಿಸಿದ್ದ ಇಬ್ಬರ ಬಂಧನ
ರಾಜ್ಯಾದ್ಯಂತ ಹಬ್ಬಿರುವ ಮೋಸದ ಜಾಲ?: ಇನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕಂಪ್ಯೂಟರ್ ಸೆಂಟರ್‌ಗಳ ಮಾಲೀಕರು ಪ್ರವೀಣ್ ಮೋಸದ ಜಾಲಕ್ಕೆ ಸಿಲುಕಿರುವ ಸಾದ್ಯತೆ ಇದೆ. ಆದರೆ ಈ ಜಾಲಕ್ಕೆ ಸಿಲುಕಿ, ಸುಮಾರು 8 ಲಕ್ಷ ರೂಪಾಯಿ ಕಳೆದುಕೊಂಡ ಬೆಂಗಳೂರಿನ ಶಿಲ್ಪ ಹಿರೇಮಠ್ ಚಿತ್ರದುರ್ಗದ ಪೊಲೀಸರ ಮೊರೆ ಹೋದ ಪರಿಣಾಮ ವಂಚಕ ಪ್ರವೀಣಕುಮಾರ ಅರೆಸ್ಟ್ ಆಗಿದ್ದಾನೆ. ಆದರೆ ಇದರ ಹಿಂದೆ ದೊಡ್ಡ ಮೋಸದ ಜಾಲವಿದ್ದೂ,ಕೂಡಲೇ ಆ ಜಾಲವನ್ನು ಕೂಡ ಭೇದಿಸಿ ಅಕ್ರಮಕ್ಕೆ ಬ್ರೇಕ್ ಹಾಕುವಂತೆ ಆಗ್ರಹ ಕೇಳಿ ಬಂದಿದೆ.
ಒಟ್ಟಾರೆ ಕಂಪ್ಯೂಟರ್ ತರಬೇತಿ ಕೇಂದ್ರದ ಮಾಲಿಕರಿಗೆ ಪುಡಿಗಾಸಿನ ಆಸೆ ತೋರಿಸಿರೋ ಖದೀಮರು ಲಕ್ಷ ಲಕ್ಷ ಹಣ ಪಡೆದು ಉಂಡೆನಾಮ ಹಾಕಿದ್ದಾರೆ. ಹೀಗಾಗಿ ಕಾಸು ಕಳೆದು ಕೊಂಡವರ ಬದುಕು ಬೀದಿಗೆ ಬಂದಿದ್ದೂ, ಮೋಸ ಹೋಗೋರು ಇರೋತನಕ ಮೋಸ ಮಾಡೋರು ಕೂಡ ಇರ್ತಾರೆ ಅನ್ನೊದಕ್ಕೆ ಈ ಪ್ರಕರಣ ಸಾಕ್ಷಿ ಎನಿಸಿದೆ.