
ಬೆಂಗಳೂರು(ನ.05): ಲಾಕ್‌ಡೌನ್ ವೇಳೆ ಸಂಕಷ್ಟಕ್ಕೆ ಸಿಲುಕಿದ್ದ ರೂಪದರ್ಶಿಯೊಬ್ಬಳಿಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ 3 ಲಕ್ಷ ಪಡೆದು ಮಹಿಳೆಯೊಬ್ಬಳು ವಂಚಿಸಿರುವ ಘಟನೆ ಬ್ಯಾಟರಾಯನಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮುಂಬೈ ಮೂಲದ 29 ವರ್ಷದ ರೂಪದರ್ಶಿ ಮೋಸ ಹೋಗಿದ್ದು, ಸುಫಿಯಾ ಎಂಬಾಕೆ ವಿರುದ್ಧ ಸಂತ್ರಸ್ತೆ ದೂರು ನೀಡಿದ್ದಾಳೆ. ಈ ದೂರಿನನ್ವಯ ತನಿಖೆ ಕೈಗೆತ್ತಿಕೊಂಡಿರುವ ಬ್ಯಾಟರಾಯನಪುರ ಠಾಣೆ ಪೊಲೀಸರು, ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಆರೋಪಿ ಪತ್ತೆಗೆ ಹುಡುಕಾಟ ನಡೆಸಿದ್ದಾರೆ.
ಸೇನೆ, ಪೊಲೀಸ್ ಅಧಿಕಾರಿಗಳ ಹೆಸರಲ್ಲಿ ವಂಚಿಸುತ್ತಿದ್ದವರ ಬಂಧನ
ವಿಠಲ್ ಮಲ್ಯ ರಸ್ತೆ ರಮಣಶ್ರೀ ಹೋಟೆಲ್‌ನಲ್ಲಿ ನೆಲೆಸಿದ್ದ ರೂಪದರ್ಶಿ, ಲಾಕ್‌ಡೌನ್ ವೇಳೆ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದಳು. ಆಗ ಪರಿಚಯವಾದ ಸುಫಿಯಾ ಅಲಿಯಾಸ್ ಮಾಯಾ, ನಿನಗೆ ಮಾಡೆಲಿಂಗ್ ಅವಕಾಶ ಕೊಡಿಸುವುದಲ್ಲದೆ ಹೋಟೆಲ್‌ನಲ್ಲಿ ವಾಸ್ತವ್ಯಕ್ಕೂ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾಳೆ. ಇದನ್ನು ನಂಬಿದ ರೂಪದರ್ಶಿ, ಹೋಟೆಲ್ ಖಾಲಿ ಮಾಡಿಕೊಂಡು ಕ್ಯಾಬ್‌ನಲ್ಲಿ ಸದ್ದುಗುಂಟೆಪಾಳ್ಯಕ್ಕೆ ತೆರಳಿ ಸುಫಿಯಾಳನ್ನು ಭೇಟಿಯಾಗಿದ್ದಳು. ಬಳಿಕ ತನ್ನ ಕಾರಿನಲ್ಲಿ ಹತ್ತಿಸಿಕೊಂಡ ವಂಚಕಿ, ರೂಪದರ್ಶಿಯನ್ನು ಎಲ್ಲೆಡೆ ಸುತ್ತಾಡಿಸಿದ್ದಾಳೆ. ಆಗ ತಾನು ನನ್ನಮ್ಮನ ಬ್ಯಾಂಕ್ ಖಾತೆಗೆ 3 ಲಕ್ಷ ಜಮೆ ಮಾಡಬೇಕಿದೆ.
ಎಟಿಎಂ ಬೂತ್ ಇದ್ದರೇ ಹೇಳಿ ಎಂದು ಮಾಡೆಲ್ ಸಹಾಯ ಕೋರಿದ್ದಳು. ಆ ವೇಳೆ ಮೈಸೂರು ರಸ್ತೆ ಸ್ಯಾಟ್‌ಲೈಟ್ ಬಸ್ ನಿಲ್ದಾಣದ ಬಳಿಗೆ ಸಂತ್ರಸ್ತೆಯನ್ನು ರೂಪದರ್ಶಿ ಕರೆತಂದಿದ್ದಾಳೆ. ತಡರಾತ್ರಿ 2 ಗಂಟೆಯಲ್ಲಿ ಕಾರು ನಿಲ್ಲಿಸಿ ಡಿಕ್ಕಿಯಲ್ಲಿ ಬ್ಲಾಂಕೆಟ್ ಇದೆ. ತೆಗೆದುಕೊಂಡು ಬಾ ಎಂದಿದ್ದಾಳೆ. ಇತ್ತ ರೂಪದರ್ಶಿ ತನ್ನ ಬಳಿಯಿದ್ದ ಹಣ, ಮೊಬೈಲ್ ಬ್ಯಾಗನ್ನು ಕಾರಿನಲ್ಲಿಯೇ ಬಿಟ್ಟು ಕೆಳಗೆ ಇಳಿದ ಕೂಡಲೇ ಆರೋಪಿ, ಕಾರು ಚಲಾಯಿಸಿಕೊಂಡು ಪರಾರಿಯಾಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ