
ಚನ್ನಪಟ್ಟಣ (ಜು.27): ಆತ್ಮ*ಹತ್ಯೆ ಎಂಬಂತೆ ಬಿಂಬಿತವಾಗಿದ್ದ ಪ್ರಕರಣವೊಂದು ಮುಚ್ಚಳ ಇಲ್ಲದ ವಿಷದ ಬಾಟಲಿ ಹಾಗೂ ಕಾಣೆಯಾಗಿದ್ದ ಒಂದು ಚಪ್ಪಲಿಯಿಂದಾಗಿ ಕೊಲೆ ಎಂದು ದೃಢಪಟ್ಟಿರುವ ಕುತೂಹಲಕಾರಿ ಘಟನೆ ಚನ್ನಪಟ್ಟಣದಲ್ಲಿ ನಡೆದಿದೆ. ತಾಲೂಕಿನ ಕೃಷ್ಣಾಪುರ ಗ್ರಾಮದ ಬಳಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದ ಗ್ರಾಮ ಪಂಚಾಯಿತಿ ಸದಸ್ಯೆಯ ಪತಿ ಲೋಕೇಶ್ ಅವರನ್ನು ಕೊಲ್ಲಿಸಿದ್ದು, ಸ್ವತಃ ಅವರ ಪತ್ನಿಯೇ ಎಂಬುದು ಬಹಿರಂಗವಾಗಿದೆ.
ಅಕ್ರಮ ಸಂಬಂಧ ಹೊಂದಿದ್ದ ಈಕೆ, ಸುಪಾರಿ ಕೊಟ್ಟು ತನ್ನ ಪತಿಯನ್ನೇ ಕೊಲ್ಲಿಸಿದ್ದಾಳೆ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣ ಸಂಬಂಧ ಗ್ರಾಪಂ ಸದಸ್ಯೆ ಚಂದ್ರಕಲಾ, ಆಕೆಯ ಪ್ರಿಯಕರ ಯೋಗೇಶ ಸೇರಿ ಆರು ಮಂದಿಯನ್ನು ಚನ್ನಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ಏನಿದು ಪ್ರಕರಣ?: ಕೃಷ್ಣಾಪುರ ಬಳಿ ಕಳೆದ ಜೂನ್ 24ರಂದು ಗ್ರಾಪಂ ಸದಸ್ಯೆ ಚಂದ್ರಕಲಾ ಪತಿ ಲೋಕೇಶ್ ಶವ ಪತ್ತೆಯಾಗಿತ್ತು. ಮೊದಲಿಗೆ ಇದು ವಿಷ ಸೇವಿಸಿ ಮಾಡಿಕೊಂಡಿರುವ ಆತ್ಮಹತ್ಯೆ ಎಂಬಂತೆ ಮೇಲ್ನೋಟಕ್ಕೆ ಕಂಡುಬಂದಿತ್ತು. ಚಂದ್ರಕಲಾ ಕೂಡ ಪತ್ನಿ ಕಳೆದುಕೊಂಡಿದ್ದೇನೆ ಎಂದು ಗೋಳಾಡಿದ್ದಳು. ಆಕೆಯ ದುಃಖವನ್ನು ಬಹುತೇಕ ಮಂದಿ ನಂಬಿ ಬಿಟ್ಟಿದ್ದರು.
ಆದರೆ ಪೊಲೀಸ್ ತನಿಖೆಯ ವೇಳೆ ಕೆಲವೊಂದು ಅನುಮಾನ ಕಂಡುಬಂದವು. ಘಟನಾ ಸ್ಥಳದಲ್ಲಿ ವಿಷದ ಬಾಟಲಿ ಸಿಕ್ಕಿತಾದರೂ ಅದಕ್ಕೆ ಮುಚ್ಚಳ ಇರಲಿಲ್ಲ. ಲೋಕೇಶ್ ಶವದ ಬಳಿ ಒಂದೇ ಚಪ್ಪಲಿ ಸಿಕ್ಕಿತ್ತು. ಪೊಲೀಸರ ಶಂಕೆ ಬಲಗೊಳ್ಳುತ್ತಲೇ ಹೋಯಿತು. ಕೊನೆಗೆ ಚಂದ್ರಕಲಾಗೆ ಅಕ್ರಮ ಸಂಬಂಧ ಇರುವ ವಿಷಯ ತಿಳಿಯಿತು. ಆಕೆಯ ದೂರವಾಣಿ ಕರೆಯನ್ನು ಪರಿಶೀಲಿಸಿದಾಗ ಯೋಗೇಶ್ ಜತೆ ನಿರಂತರ ಸಂಪರ್ಕದಲ್ಲಿರುವುದು ಗೊತ್ತಾಯಿತು. ಪೊಲೀಸರು ವಿಚಾರಣೆ ನಡೆಸಿದಾಗ ಇದು ಕೊಲೆ.
ಲೋಕೇಶ್ ಅವರನ್ನು ಅಪಹರಿಸಿ ಬಲವಂತವಾಗಿ ವಿಷ ಕುಡಿಸಿ ಕೊಂದಿರುವುದು ಬಯಲಾಯಿತು. ಕಾರಿನಲ್ಲಿ ವಿಷ ಕುಡಿಸುವಾಗ ಮಾರ್ಗಮಧ್ಯೆ ಮುಚ್ಚಳವನ್ನು ಆರೋಪಿಗಳು ಎಸೆದಿದ್ದರು. ಲೋಕೇಶ್ ಅಪಹರಿಸುವಾಗ ಒಂದು ಚಪ್ಪಲಿ ಬೇರೆ ಕಡೆ ಕಳಚಿ ಬಿದ್ದಿದ್ದು ಅವರ ಗಮನಕ್ಕೆ ಬಂದಿರಲಿಲ್ಲ. ಇವೇ ಹಂತಕರನ್ನು ಖೆಡ್ಡಾಕ್ಕೆ ಕೆಡವಿದವು. ಪತಿಯನ್ನೇ ಕೊಲ್ಲಿಸಿದ ಚಂದ್ರಕಲಾ ಹಾಗೂ ಪ್ರಿಯಕರ ಯೋಗೇಶ್‌ನನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಚಂದ್ರಕಲಾ ಹಾಗೂ ತಂಡ ಹೆಣೆದಿದ್ದ ತಂತ್ರ ವಿಫಲವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ