ಅಣ್ಣನ ಮೇಲಿನ ದ್ವೇಷ: ಇಬ್ಬರು ಮಕ್ಕಳ ಭೀಕರವಾಗಿ ಕೊಂದ ಚಿಕ್ಕಪ್ಪ

Published : Jul 27, 2025, 06:35 AM IST
bengaluru

ಸಾರಾಂಶ

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ ಅಣ್ಣನ ಇಬ್ಬರು ಮಕ್ಕಳನ್ನು ಕಬ್ಬಿಣದ ಸಲಾಕೆಯಿಂದ ಹೊಡೆದು ಭೀಕರವಾಗಿ ವ್ಯಕ್ತಿಯೊಬ್ಬ ಕೊಂದಿರುವ ಹೃದಯವಿದ್ರಾವಕ ಘಟನೆ ಶನಿವಾರ ನಡೆದಿದೆ.

ಬೆಂಗಳೂರು (ಜು.27): ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ ಅಣ್ಣನ ಇಬ್ಬರು ಮಕ್ಕಳನ್ನು ಕಬ್ಬಿಣದ ಸಲಾಕೆಯಿಂದ ಹೊಡೆದು ಭೀಕರವಾಗಿ ವ್ಯಕ್ತಿಯೊಬ್ಬ ಕೊಂದಿರುವ ಹೃದಯವಿದ್ರಾವಕ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ. ಕಮ್ಮಸಂದ್ರದ ಚಾಂದ್ ಪಾಷ ದಂಪತಿ ಮಕ್ಕಳಾದ ಜುನೈದ್ (8) ಹಾಗೂ ಇಶಾಕ್‌ (6) ಮೃತದುರ್ದೈವಿಗಳು. ಇನ್ನು ಹಲ್ಲೆಗೊಳಗಾಗಿದ್ದ ಮತ್ತೊಬ್ಬ ಬಾಲಕ ರೋಹನ್‌ (4) ಖಾಸಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ನಿಗಾ ಘಟಕದಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದಾನೆ. ಈ ಅವಳಿ ಮಕ್ಕಳ ಕೊಂದ ಆರೋಪಿ ಕಾಸಿಮ್ ಪಾಷನನ್ನು ಪೊಲೀಸರು ಬಂಧಿಸಿದ್ದಾರೆ.

ಮನೆಯಲ್ಲಿ ಯಾರು ಇಲ್ಲದ ವೇಳೆ ಅಣ್ಣನ ಮಕ್ಕಳ ಮೇಲೆ ಕಾಸಿಮ್‌ ಭೀಕರ ಹಲ್ಲೆ ನಡೆಸಿದ್ದಾನೆ. ಕೆಲ ಹೊತ್ತಿನ ಬಳಿಕ ಮೃತ ಮಕ್ಕಳ ಅಜ್ಜಿ ಮನೆಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಕುರ್ಕುಂದಿ ಗ್ರಾಮದ ಚಾಂದ ಪಾಷ ಅವರು ಹಲವು ವರ್ಷಗಳ ಹಿಂದೆ ಕೂಲಿ ಅರಸಿಕೊಂಡು ನಗರಕ್ಕೆ ಬಂದಿದ್ದರು. ಬಳಿಕ ಕಮ್ಮಸಂದ್ರದ ಬಳಿ ತಮ್ಮ ಮೂವರು ಮಕ್ಕಳು, ಪತ್ನಿ, ತಾಯಿ ಹಾಗೂ ಸೋದರ ಕಾಸಿಮ್ ಜತೆ ಅವರು ನೆಲೆಸಿದ್ದರು. ನಿರ್ಮಾಣ ಹಂತದ ಕಟ್ಟಡದಲ್ಲಿ ಚಾಂದ್ ಗಾರೆ ಕೆಲಸಗಾರನಾಗಿದ್ದರೆ, ಗಾರ್ಮೆಂಟ್ಸ್‌ನಲ್ಲಿ ಆತನ ಪತ್ನಿ ದುಡಿಯುತ್ತಿದ್ದರು. ಹೀಗೆ ಬೆವರು ಸುರಿಸಿ ಅವರು ಬದುಕು ಕಟ್ಟಿಕೊಂಡಿದ್ದರು.

ಹೀಗಿರುವಾಗ ಅವರ ಚೆಂದದ ಬಾಳಿಗೆ ತಮ್ಮನೇ ಶತ್ರುವಾಗಿ ಕಾಡಿದ್ದಾನೆ. ತನ್ನನ್ನು ಅಣ್ಣ ಸರಿಯಾಗಿ ನೋಡಿಕೊಳ್ಳುತ್ತಿಲ್ಲವೆಂದು ಕಾಸಿಮ್ ದ್ವೇಷ ಕಾರುತ್ತಿದ್ದ. ಕೆಲಸವಿಲ್ಲದೆ ಅಂಡಲೆಯುತ್ತಿದ್ದ ಆತ ಪದೇ ಪದೇ ಮನೆಯಲ್ಲಿ ಸಣ್ಣಪುಟ್ಟ ವಿಚಾರಗಳಿಗೆ ಜಗಳ ತೆಗೆದು ಗಲಾಟೆ ಮಾಡುತ್ತಿದ್ದ. ಈ ಕಿರಿಕಿರಿ ಇದ್ದರೂ ತಮ್ಮನನ್ನು ಮನೆಯಿಂದ ಚಾಂದ್ ಪಾಷ ಹೊರ ಹಾಕಿರಲಿಲ್ಲ. ಇದೇ ಹಗೆತನದಿಂದ ಆತ ಶನಿವಾರ ಸೋದರನ ಮಕ್ಕಳ ಮೇಲೆ ಹಗೆ ತೀರಿಸಿದ್ದಾನೆ.

ಪುಟ್ಟ ಮಕ್ಕಳನ್ನು ಮನೆಯಲ್ಲಿ ಯಾರೂ ಇಲ್ಲದ ಹೊತ್ತಿನಲ್ಲಿ ಕೂಡಿ ಹಾಕಿ ಮನಬಂದಂತೆ ಕಬ್ಬಿಣದ ಸಲಾಕೆಯಿಂದ ಆತ ಹೊಡೆದಿದ್ದಾನೆ. ಮನೆ ಸಮೀಪದ ಅಂಗಡಿಗೆ ಹೋಗಿದ್ದ ಮೃತರ ಅಜ್ಜಿ ಕೆಲ ಹೊತ್ತಿನ ಬಳಿಕ ಮನೆಗೆ ಮರಳಿದ್ದಾರೆ. ಆಗ ಮನೆಯೊಳಗಿನಿಂದ ಮೊಮ್ಮಕ್ಕಳ ಚೀರಾಟ ಕೇಳಿ ಹಿರಿಯ ಜೀವಕ್ಕೆ ಆಘಾತವಾಗಿದೆ. ಕೂಡಲೇ ಬಾಗಿಲು ಬಡಿದಾಗ ಕಿರಿಯ ಪುತ್ರ ಸ್ಪಂದಿಸಿಲ್ಲ. ಆಗ ಅಜ್ಜಿಯ ಸಹಾಯಕ್ಕೆ ನೆರೆಹೊರೆಯವರು ಧಾವಿಸಿದ್ದಾರೆ. ಮನೆ ಬಾಗಿಲು ಬಲವಂತವಾಗಿ ದೂಡಿ ಸ್ಥಳೀಯರು ತೆಗೆದಿದ್ದಾರೆ. ಜನರು ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಕಾಸಿಮ್ ಕಾಲ್ಕಿತ್ತಿದ್ದಾನೆ.

ಮನೆಯೊಳಗೆ ಮೊಮ್ಮಕ್ಕಳು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಅಜ್ಜಿಗೆ ಮತ್ತಷ್ಟು ಆಘಾತವಾಗಿದೆ. ಮಾತು ಬಾರದಂತಾಗಿದೆ. ಕೂಡಲೇ ಉಸಿರಾಡುತ್ತಿದ್ದ ರೋಹನ್‌ನನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ವೈದ್ಯಕೀಯ ಚಿಕಿತ್ಸೆಗೆ ಬಾಲಕ ಸ್ಪಂದಿಸುತ್ತಿದ್ದು, ಆತನನ್ನು ನಿಗಾಘಟಕದಲ್ಲಿ ವೈದ್ಯರು ಇಟ್ಟಿದ್ದಾರೆ. ಇನ್ನುಳಿದ ಇಬ್ಬರು ಮಕ್ಕಳು ತೀವ್ರ ರಕ್ತಸ್ರಾವದಿಂದ ಕೊನೆಯುಸಿರೆಳೆದಿದ್ದಾರೆ. ಕೃತ್ಯ ಎಸಗಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಕಾಸಿಮ್ ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ತಿಂಗಳ ಹಿಂದೆ ತಪ್ಪಿಸಿಕೊಂಡಿದ್ದ ಕಾಸಿಮ್‌: ತಿಂಗಳ ಹಿಂದೆ ತಮಿಳುನಾಡಿನಲ್ಲಿ ಕಣ್ಮರೆಯಾಗಿದ್ದ ತನ್ನ ಸೋದರ ಕಾಸಿಮ್‌ ಪಾಷನನ್ನು ಹುಡುಕಿ ಮನೆಗೆ ಚಾಂದ್ ಕರೆ ತಂದಿದ್ದ. ತನ್ನ ಬದುಕಿಗೆ ಆಸರೆಯಾಗಿದ್ದ ಅಣ್ಣನ ಕುಟುಂಬಕ್ಕೆ ಆತ ಕಂಟಕವಾಗಿ ಕಾಡಿದ್ದಾನೆ. ಏನೂ ಅರಿಯದ ಇಬ್ಬರು ಮಕ್ಕಳನ್ನು ನಿರ್ದಯವಾಗಿ ಆತ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!