
ಬೆಂಗಳೂರು (ಜು.1): ನಗರದಲ್ಲಿ ಅಕ್ರಮವಾಗಿ ವಾಸವಾಗಿ, ಅನೈತಿಕ ಚಟುವಟಿಕೆ ತೊಡಗಿದ್ದ 12 ಮಂದಿ ಬಾಂಗ್ಲಾದೇಶ ಪ್ರಜೆಗಳನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಾಂಗ್ಲಾದೇಶ ಮೂಲದ ಸುಹೇಗ್ ಮೊಂನ್ಸೂರಲಿ (29) ಮತ್ತು ಮುಕಲ್ (32) ಎಂಬುವರನ್ನು ಬಂಧಿಸಲಾಗಿದೆ. ಇತರೆ 10 ಮಂದಿ ಮಹಿಳೆಯರನ್ನು ವಶಕ್ಕೆ ಪಡೆದು ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ) ಅಧಿಕಾರಿಗಳಿಗೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಣಸವಾಡಿ ಮತ್ತು ಹೆಣ್ಣೂರು ಠಾಣೆಗಳ ವ್ಯಾಪ್ತಿಯಲ್ಲಿ ಮಾನವ ಕಳ್ಳ ಸಾಗಣೆ ಮೂಲಕ ಕೆಲ ಮಹಿಳೆಯರನ್ನು ಬಾಂಗ್ಲಾದೇಶದಿಂದ ಕರೆಸಿಕೊಂಡು ವೇಶ್ಯಾವಾಟಿಕೆ ದಂಧೆಯಲ್ಲಿ ದೂಡಿರುವ ಮಾಹಿತಿ ಸಿಕ್ಕಿತ್ತು. ಈ ಮಾಹಿತಿ ಪಡೆದ ಸಿಸಿಬಿಯ ಮಹಿಳೆ ರಕ್ಷಣಾ ವಿಭಾಗದ ಎಸಿಪಿ ಧರ್ಮೇಂದ್ರ ಮತ್ತು ತಂಡ ಕೆಲ ದಿನಗಳ ಹಿಂದೆ ಕಾರ್ಯಾಚರಣೆ ನಡೆಸಿ ಆರೋಪಿಗಳ ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಆರೋಪಿಗಳು ಮಹಿಳೆಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಂಗ್ಲಾದೇಶದ ಗುರುತಿನ ಚೀಟಿ ಪತ್ತೆ:
ಬಂಧಿತ ಇಬ್ಬರು ಆರೋಪಿಗಳು ಮತ್ತು ರಕ್ಷಣೆ ಮಾಡಿದ ಮಹಿಳೆಯರ ಬಳಿ ಬಾಂಗ್ಲಾದೇಶದ ಗುರುತಿನ ಚೀಟಿಗಳು ಹಾಗೂ ಇತರೆ ದಾಖಲೆಗಳು ಪತ್ತೆಯಾಗಿವೆ. ಅಲ್ಲದೆ, ಆರೋಪಿಗಳ ವಿಚಾರಣೆಯಲ್ಲಿ ಎರಡು ತಿಂಗಳ ಹಿಂದೆ ಪಶ್ಚಿಮ ಬಂಗಾಳ ಮಾರ್ಗವಾಗಿ ಭಾರತ ಪ್ರವೇಶಿಸಲಾಗಿತ್ತು. ಈ ವೇಳೆ ಗಡಿಭಾಗದಲ್ಲಿ ಮಧ್ಯವರ್ತಿಗಳಿಗೆ ಸಾವಿರಾರು ರುಪಾಯಿ ಕೊಟ್ಟು ಮಹಿಳೆಯರನ್ನು ಭಾರತಕ್ಕೆ ಕರೆಸಿಕೊಳ್ಳಲಾಗಿದೆ. ಆರೋಪಿತರು ಒಂದು ತಿಂಗಳಿಂದ ನಗರದಲ್ಲಿ ವಾಸವಾಗಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.
ಗಡಿಪಾರು ಮಾಡಲು ಸಿದ್ಧತೆ:
ಸಾಮಾಜಿಕ ಜಾಲತಾಣಗಳ ಮೂಲಕ ಮಹಿಳೆಯರ ಫೋಟೋಗಳನ್ನು ಹಾಕಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಪರಿಚಯಸ್ಥರ ಮೂಲಕ ಗ್ರಾಹಕರನ್ನು ಸಂಪರ್ಕಿಸಲಾಗುತ್ತಿತ್ತು ಎಂಬುದು ಪತ್ತೆಯಾಗಿದೆ. 12 ಮಂದಿ ಬಾಂಗ್ಲಾದೇಶ ಪ್ರಜೆಗಳನ್ನು ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿಗೆ ಅಧಿಕಾರಿಗಳಿಗೆ ಒಪ್ಪಿಸಲಾಗಿದ್ದು, ಅವರು ದಾಖಲೆಗಳ ಪರಿಶೀಲಿಸಿದ್ದಾಗ ಅಕ್ರಮವಾಗಿ ಭಾರತ ಪ್ರವೇಶಿಸಿರುವುದು ಪತ್ತೆಯಾಗಿದೆ. ಹೀಗಾಗಿ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲಾಗಿದೆ. 12 ಮಂದಿಯನ್ನು ಗಡಿ ಪಾರು ಮಾಡಲು ದಾಖಲೆಗಳ ಸಿದ್ದಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಘಟನೆ ಸಂಬಂಧ ಹೆಣ್ಣೂರು ಮತ್ತು ಬಾಣಸವಾಡಿ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಸಿಸಿಬಿಯ ಮಹಿಳಾ ರಕ್ಷಣೆ ವಿಭಾಗದ ಎಸಿಪಿ ಧರ್ಮೇಂದ್ರ ಮತ್ತು ತಂಡ ಈ ಕಾರ್ಯಾಚರಣೆ ನಡೆಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ