ಪಟ್ಟಣಗೆರೆ ಶೆಡ್ಡಿನ ಮಾದರಿಯಲ್ಲಿಯೇ ತುಮಕೂರಿನ ಶೆಡ್ ಒಂದರಲ್ಲಿ ಸ್ನೇಹಿತನನ್ನು ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ತುಮಕೂರು (ಆ.12): ರಾಜ್ಯದಲ್ಲಿ ಶೆಡ್‌ಗಳು ಕೊಲೆ ಮಾಡುವ ತಾಣಗಳಾಗಿ ಮಾರ್ಪಾಡಾಗುತ್ತಿವೆ. ಇತ್ತೀಚೆಗೆ ನಟ ದರ್ಶನ್ ಸೇರಿ ಸಂಗಡಿಗರು ಪಟ್ಟಣಗೆರೆಯ ಶೆಡ್‌ನಲ್ಲಿ ರೇಣುಕಾಸ್ವಾಮಿ ಕೊಲೆ ಮಾಡಿದ್ದರು. ಇದರ ಬೆನ್ನಲ್ಲಿಯೇ ತುಮಕೂರಿನ ಶೆಡ್ ಒಂದರಲ್ಲಿ ಮಲಗಿದ್ದ ಸ್ನೇಹಿತನನ್ನು ಕೊಲೆ ಮಾಡಿದ ದಾರುಣ ಘಟನೆ ನಡೆದಿದೆ.
ಹೌದು, ತುಮಕೂರಿನಲ್ಲಿ ಕಟ್ಟಡ ನಿರ್ಮಾಣ ಕೆಲಸ ಮಾಡುವ ಕಾರ್ಮಿಕರು ತಂಗಲು ನಿರ್ಮಿಸಲಾಗಿದ್ದ ತಾತ್ಕಾಲಿಕ ಶೆಡ್‌ನಲ್ಲಿ ಮಲಗಿದ್ದವನ ಮೇಲೆ ಕಲ್ಲು ಎತ್ತಿಹಾಕಿ ಭೀಕರ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದ ಅಗ್ರಹಾರದಲ್ಲಿ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಕುಣಿಗಲ್ ತಾಲ್ಲೂಕಿನ ಹಂಗರಹಳ್ಳಿ ಗ್ರಾಮ ನಿವಾಸಿ ರವಿ (40) ಎಮದು ಗುರುತಿಸಲಾಗಿದೆ. ಕಟ್ಟಡ ನಿರ್ಮಾಣ ಕೆಲಸ ಮಾಡಿಕೊಂಡಿದ್ದ ರವಿ ಅವರನ್ನು ಆತನ ಸ್ನೇಹಿತ ಶಿವಕುಮಾರ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಶಿವಮೊಗ್ಗ ತುಂಗಾ ಡ್ಯಾಮ್‌ನಲ್ಲೂ ಕ್ರಸ್ಟ್‌ಗೇಟ್ ರೋಪ್ ಜಾಮ್; ಜಾಣ್ಮೆ ತೋರಿದ ಮಲೆನಾಡಿನ ಇಂಜಿನಿಯರ್ಸ್!
ಮಂಡ್ಯ ಜಿಲ್ಲೆಯ ಮಳವಳ್ಳಿಯ ಶಿವಕುಮಾರ್ (ಕೊಲೆ ಆರೋಪಿ) ಹಾಗೂ ಕಟ್ಟಡ ಕಾರ್ಮಿಕ ರವಿ (ಮೃತ ವ್ಯಕ್ತಿ) ಸ್ನೇಹಿತರಾಗಿದ್ದರು. ಇನ್ನು ರವಿ ಭಾನುವಾರ ತನ್ನ ಸ್ನೇಹಿತ ಶಿವಕುಮಾರ್ ಕೆಲಸ ಮಾಡುತ್ತಿದ್ದ ಶೆಡ್‌ಗೆ ತೆರಳಿದ್ದಾನೆ. ಈ ವೇಳೆ ಇಬ್ಬರು ಸ್ನೇಹಿತರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಇಬ್ಬರ ಜಗಳ ತಾರಕಕ್ಕೆ ಏರಿದ್ದು, ಶಿವಕುಮಾರ್ ಕೋಪದಲ್ಲಿ ತನ್ನ ಸ್ನೇಹಿತ ರವಿ ತಲೆಗೆ ಸಿಮೆಂಟ್ ಇಟ್ಟಿಗೆಯಿಂದ ಜೋರಾಗಿ ಹಲ್ಲೆ ಮಾಡಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವ ಉಂಟಾಗಿ ಗಂಭೀರ ಗಾಯಗೊಂಡಿದ್ದ ಸ್ನೇಹಿತನನ್ನು ಆಸ್ಪತ್ರೆಗೆ ದಾಖಲಿಸದೇ, ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದಾನೆ. ಇದರಿಂದ ಶೆಡ್‌ನಲ್ಲಿಯೇ ನರಳಾಡಿದ ರವಿ ಪ್ರಾಣ ಬಿಟ್ಟಿದ್ದಾನೆ.
ಇನ್ನು ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಘಟನೆ ನಡೆದ ಸ್ಥಳಕ್ಕೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಘಟನೆ ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಕೊಲೆ ಆರೋಪಿಯನ್ನು ಬಂಧಿಸುವಂತೆ ಸೂಚನೆ ನೀಡಿದ್ದಾರೆ.