BMTC ಬಸ್‌ನಿಂದ ಮತ್ತೊಂದು ಸರಣಿ ಅಪಘಾತ: 6 ಕಾರುಗಳು ಜಖಂ

By Suvarna NewsFirst Published Jan 10, 2020, 8:12 PM IST
Highlights

ಇತ್ತೀಚೆಗೆ ಬೆಂಗಳೂರಿನ ಸುಮ್ಮನಹಳ್ಳಿ ಬಳಿ ಬಿಎಂಟಿಸಿ ಬಸ್ ಬ್ರೇಕ್ ಫೇಲ್ ಆಗಿ ಸರಣಿ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಇದರ ಕರಾಳ ನೆನಪು ಮಾಸುವ ಮುನ್ನವೇ ಮತ್ತೊಂದು ಬಿಎಂಟಿಸಿ ಬಸ್ಸಿನಿಂದ ಸರಣಿ ಅಪಘಾತ ನಡೆದಿದೆ.

ಬೆಂಗಳೂರು, [ಜ10]: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಬಿಎಂಟಿಸಿ ಬಸ್ ಅಪಘಾತ ಸಂಭವಿಸಿದೆ. ಕಾರಿಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸರಣಿ ಅಪಘಾತ ಸಂಭವಿಸಿದ ಘಟನೆ ಇಂದು [ಶುಕ್ರವಾರ] ಜಯನಗರದ ಪಂಪ್ ಹೌಸ್ ಸಿಗ್ನಲ್ ಬಳಿ ನಡೆದಿದೆ.

ಇಬ್ಬರ ಜೀವ ತೆಗೆದ ಬಿಎಂಟಿಸಿ, ಬ್ರೇಕ್ ಫೇಲ್ ಅಸಲಿ ಕಾರಣ ಬಹಿರಂಗ

ಈ ಅಪಘಾತದಲ್ಲಿ 2 ಬಸ್ ಹಾಗೂ 6 ಕಾರುಗಳು ಜಖಂ ಆಗಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಒಂದೇ ವಾರದಲ್ಲಿ ಬಿಎಂಟಿಸಿ ಬಸ್‌ನಿಂದ ನಡೆದ ಸರಣಿ ಅಪಘಾತ ಇದಾಗಿದೆ.

ಡಿಪೋ 25ಕ್ಕೆ ಸೇರಿದ ಕೆಎ 01 ಎಫ್ 318 ಸಂಖ್ಯೆಯ ಬಿಎಂಟಿಸಿ ವೋಲ್ವೋ ಬಸ್ ಏರ್‌ಪೋರ್ಟ್ ನಿಂದ  ಬಿಟಿಎಂ ಲೇಔಟ್‌ ಕಡೆ ತೆರಳುತ್ತಿತ್ತು. ಈ ವೇಳೆ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಎಲ್ಲಾ ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡಿವೆ.

ಸರಣಿ ಅಪಘಾತದಲ್ಲಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಜಯನಗರ ಪೊಲೀಸರು ಜಖಂಗೊಂಡಿದ್ದ ಬಸ್ ಹಾಗೂ ಕಾರುಗಳನ್ನು ಸ್ಥಳಾಂತರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಮೊನ್ನೆ ಅಷ್ಟೇ  ಸುಮ್ಮನಹಳ್ಳಿ ಬಳಿ ಬಿಎಂಟಿಸಿ ಬಸ್ ಬ್ರೇಕ್ ಫೇಲ್ ಆಗಿ ಸರಣಿ ಅಪಘಾತ ಸಂಭವಿಸಿತ್ತು. ಈ ಅವಘಡದಲ್ಲಿ ಇಬ್ಬರು ಬಲಿಯಾಗಿದ್ದರು. ಆ ನೆನಪು ಮಾಸುವ ಮುನ್ನವೇ ಮತ್ತೊಂದು ಅಪಘಾತ ನಡೆದಿದೆ. 

click me!