Vijayapura: ಭೀಮಾತೀರದಲ್ಲಿ ಖಾಕಿ ಮೈಂಡ್ ಗೇಮ್: ಹಂತಕನ ಪತ್ನಿ ವಿಮಲಾಬಾಯಿ ಸರೆಂಡರ್‌

By Govindaraj SFirst Published Aug 4, 2022, 3:48 PM IST
Highlights

ಭೀಮಾತೀರದಲ್ಲಿ ಮತ್ತೊಂದು ಸ್ಪೋಟಕ ಬೆಳವಣಿಗೆಯಾಗಿದೆ. ಎಡಿಜಿಪಿ ಅಲೋಕ್‌ ಕುಮಾರ್‌ ಭೀಮಾತೀರಕ್ಕೆ ಭೇಟಿ ನೀಡಿ ಹೋದ ಬಳಿಕ ಅತಿ ದೊಡ್ಡ ಬೆಳವಣಿಗೆಯಾಗಿದೆ. ಭೀಮಾತೀರದಲ್ಲಿ ಹಂತಕರನ್ನು ಕಟ್ಟಿಹಾಕಲು ಖಾಕಿ ಹಾಕಿದ ಪ್ಲಾನ್‌ ವರ್ಕೌಟ್‌ ಆಗಿದೆ.

ವರದಿ: ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್

ವಿಜಯಪುರ (ಆ.04): ಭೀಮಾತೀರದಲ್ಲಿ ಮತ್ತೊಂದು ಸ್ಪೋಟಕ ಬೆಳವಣಿಗೆಯಾಗಿದೆ. ಎಡಿಜಿಪಿ ಅಲೋಕ್‌ ಕುಮಾರ್‌ ಭೀಮಾತೀರಕ್ಕೆ ಭೇಟಿ ನೀಡಿ ಹೋದ ಬಳಿಕ ಅತಿ ದೊಡ್ಡ ಬೆಳವಣಿಗೆಯಾಗಿದೆ. ಭೀಮಾತೀರದಲ್ಲಿ ಹಂತಕರನ್ನು ಕಟ್ಟಿಹಾಕಲು ಖಾಕಿ ಹಾಕಿದ ಪ್ಲಾನ್‌ ವರ್ಕೌಟ್‌ ಆಗಿದ್ದು, ಕಳೆದ 2 ವರ್ಷಗಳಿಂದ ಭೂಗತಳಾಗಿದ್ದ ನಟೋರಿಯಸ್‌ ಹಂತಕ, ಭೀಮಾತೀರದ ಮಾಸ್ಟರ್‌ ಮೈಂಡ್‌ ಮಲ್ಲಿಕಾಜೀ ಚಡಚಣ ಪತ್ನಿ ಕೋರ್ಟ್‌ಗೆ ಶರಣಾಗಿದ್ದಾಳೆ.

ವಿಜಯಪುರ ಕೋರ್ಟ್‌ಗೆ ಶರಣಾದ ಹಂತಕನ ಪತ್ನಿ: ಕಳೆದ 2 ವರ್ಷಗಳಿಂದ ಪೊಲೀಸರಿಗೆ ಸುಳಿವು ಸಿಗದಂತೆ ಭೂಗತಳಾಗಿದ್ದ ಭೀಮಾತೀರದ ಮಾಸ್ಟರ್‌ ಮೈಂಡ್‌ ಮಲ್ಲಿಕಾಜೀ ಚಡಚಣ ಪತ್ನಿ ವಿಮಲಾಬಾಯಿ ಚಡಚಣ ವಿಜಯಪುರ ಜಿಲ್ಲಾ ನಾಲ್ಕನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸರೆಂಡರ್‌ ಆಗಿದ್ದಾಳೆ. ಸರಿಯಾಗಿ 11 ಗಂಟೆ ಸುಮಾರಿಗೆ ಅಜ್ಞಾತಸ್ಥಳದಿಂದ ವಿಜಯಪುರ ನ್ಯಾಯಾಲಯಕ್ಕೆ ಆಗಮಿಸಿದ ವಿಮಲಾಬಾಯಿ ವಕೀಲರ ಸಮೇತ ನ್ಯಾಯಾಧೀಶರ ಎದುರು ಹಾಜರಾಗಿ ಅಚ್ಚರಿ ಮೂಡಿಸಿದ್ದಾಳೆ.

ವಿಜಯಪುರ ಜಿಲ್ಲೆಯಲ್ಲಿ ಮೇಘಸ್ಫೋಟ: ಹಳ್ಳದಂತಾದ ರಸ್ತೆಗಳು, ಜನರು ಕಂಗಾಲು.!

ವರ್ಕೌಟ್‌ ಆಯ್ತು ಖಾಕಿ ಉರುಳಿಸಿದ ಮೊದಲ ದಾಳ: ಸದ್ಯ ವಿಮಲಾಬಾಯಿ ಚಡಚಣ ಕೋರ್ಟ್‌ಗೆ ಹಾಜರಾಗಿರೋದರ ಹಿಂದೆ ಖಾಕಿ ಪ್ಲಾನ್‌ ಕಾರಣವಾಗಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ ಭೀಮಾತೀರಕ್ಕೆ ಭೇಟಿ ನೀಡಿದ್ದ ಎಡಿಜಿಪಿ ಅಲೋಕ್‌ ಕುಮಾರ್‌ ಸಖತ್‌ ಬಲೆ ಹೆಣೆದು, ವಿಜಯಪುರ ಖಾಕಿ ಪಡೆಗೆ ಪ್ಲಾನ್‌ ಹಾಕಿಕೊಟ್ಟು ಹೋಗಿದ್ದರು. ಆ ಪ್ಲಾನ್‌ ಈಗ ವರ್ಕೌಟ್‌ ಆಗಿದ್ದು, ವಿಮಲಾಬಾಯಿ ಓಡೋಡಿ ಬಂದು ಕೋರ್ಟ್‌ಗೆ ಹಾಜರಾಗಿದ್ದಾಳೆ.

ಆಸ್ತಿ ಜಪ್ತಿ ಭಯ, ಓಡೋಡಿ ಬಂದು ಸರೆಂಡರ್: ಕೆಲ ದಿನಗಳ ಹಿಂದಷ್ಟೇ ಎಡಿಜಿಪಿ ಅಲೋಕ್‌ ಕುಮಾರ್‌ ಚಡಚಣ ಪೊಲೀಸ್‌ ಠಾಣೆಯಲ್ಲಿ ಭೀಮಾತೀರದ ಬೈರಗೊಂಡ ಹಾಗೂ ಚಡಚಣ ಕುಟುಂಬಸ್ಥರನ್ನ, ಸಂಬಂಧಿಕರನ್ನ ಒಟ್ಟಿಗೆ ಕೂರಿಸಿ ಸಂಧಾನ ನಡೆಸುವ ಪ್ರಯತ್ನವನ್ನ ಮಾಡಿದರು. ಸಂಧಾನಕ್ಕೆ ಬೈರಗೊಂಡ ಕುಟುಂಬ ಓಕೆ ಎಂದರೆ, ಚಡಚಣ ಕುಟುಂಬಸ್ಥರು ಭೂಗತರಾಗಿರುವ ಮಲ್ಲಿಕಾರ್ಜುನ್‌ ಚಡಚಣ ಹಾಗೂ ವಿಮಲಾಬಾಯಿ ಸುಳಿವು ನೀಡಲು ಮುಂದೆ ಬರಲಿಲ್ಲ. ಇದರಿಂದ ರಾಂಗ್‌ ಆಗಿದ್ದ ಅಲೋಕ್‌ ಕುಮಾರ್ ಭೂಗತರಾಗಿರುವ ಮಲ್ಲಿಕಾಜಿ ಹಾಗೂ ಆತನ ಪತ್ನಿ ಶರಣಾಗದೇ ಹೋದ್ರೆ ಆಸ್ತಿ ಜಪ್ತಿ ಮಾಡುವ ಉದ್ಘೋಷಣೆ ಹೊರಡಿಸಿದ್ದರು. ಇದರಿಂದ ಬೆದರಿದ ವಿಮಲಾಬಾಯಿ ಚಡಚಣ ಇರೋ 20 ಏಕರೇ ಆಸ್ತಿಯು ಸರ್ಕಾರದ ಪಾಲುತ್ತೆ ಎಂದು ಓಡೋಡಿ ಬಂದು ಸರೆಂಡರ್‌ ಆಗಿದ್ದಾಳೆ ಎನ್ನಲಾಗ್ತಿದೆ.

20 ಎಕರೇ ಆಸ್ತಿಯನ್ನ ಅಟ್ಯಾಚ್‌ ಮಾಡಿದ ಪೊಲೀಸರು: ಭೀಮಾತೀರದ ಮಾಸ್ಟರ್‌ ಮೈಂಡ್‌ ಹಾಗೂ ಚಡಚಣ ಕುಟುಂಬದ ಮಲ್ಲಿಕಾಜೀ ಹಾಗೂ ವಿಮಲಾಬಾಯಿ ವಿರುದ್ಧ ಪೊಲೀಸ್‌ ಇಲಾಖೆ ಉದ್ಘೋಷಣೆ ಹೊರಡಿಸಿತ್ತು. ಒಂದು ವೇಳೆ ಶರಣಾಗದೇ ಹೋದ್ರೆ ಸಂಬಂಧಪಟ್ಟವರ ಆಸ್ತಿಯನ್ನ ಮುಟ್ಟುಗೋಲು ಹಾಕಿಕೊಳ್ಳುವ ಎಚ್ಚರಿಕೆ ನೀಡಿತ್ತು. ಮಲ್ಲಿಕಾರ್ಜುನ್‌ ಹೆಸರಿನಲ್ಲಿ ಸುಮಾರು 8 ರಿಂದ 10 ಏಕರೇ ಹಾಗೂ ವಿಮಲಾಬಾಯಿ ಹೆಸರಿನಲ್ಲಿ 10 ಎಕರೇ ಆಸ್ತಿ ಇರೋದು ಪತ್ತೆಯಾಗಿತ್ತು. ಒಟ್ಟು ಸೇರಿ 20 ಎಕರೇಯಷ್ಟು ಜಮೀನು ಇದೆ. ಭೀಮಾತೀರದ ಕೊಂಕಣಗಾಂವ, ಉಮರಾಣಿ ಹಾಗೂ ಚಡಚಣದಲ್ಲಿ ಈ ಆಸ್ತಿ ಇದೆ. ಚಡಚಣ ಕುಟುಂಬಕ್ಕೆ ಸದ್ಯ ಉಳಿದಿರೋದೆ ಈ ಭೂಮಿ ಎನ್ನಲಾಗ್ತಿದೆ. ಈ ಭೂಮಿಯ ಎಲ್ಲ ದಾಖಲಾತಿಗಳನ್ನ ಸಂಗ್ರಹಿಸಿಕೊಂಡಿದ್ದ ಪೊಲೀಸರು ಉದ್ಘೋಷಣೆ ಹಿನ್ನೆಲೆ ಆಸ್ತಿ ಅಟ್ಯಾಚ್‌ ಮಾಡಲು ಮುಂದಾಗಿದ್ದರು. ಈ ವಿಷಯ ತಿಳಿದು ವಿಮಲಾಬಾಯಿ ಸರೆಂಡರ್‌ ಆಗಿದ್ದಾಳೆ ಎನ್ನಲಾಗಿದೆ.

ದರ್ಗಾಜೈಲು ಪಾಲಾದ ವಿಮಲಾಬಾಯಿ: ಕಳೆದ 2020ರ ನವೆಂಬರ್‌ 2 ರಂದು ಕನ್ನಾಳ ಕ್ರಾಸ್‌ ಬಳಿ ನಡೆದ ಮಹಾದೇವ ಬೈರಗೊಂಡನ ಅಟ್ಯಾಕ್‌ ಪ್ರಕರಣದಲ್ಲಿ ಮಲ್ಲಿಕಾರ್ಜುನ್‌ ಚಡಚಣ ಎ1 ಆರೋಪಿಯಾದರೆ, ಇದೆ ವಿಮಲಾಬಾಯಿ ಚಡಚಣ ಎ2 ಆರೋಪಿಯಾದ್ದಾಳೆ. ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ವಿಮಲಾಬಾಯಿಯನ್ನ ಕೋರ್ಟ್‌ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಪೊಲೀಸರು ವಿಮಲಾಬಾಯಿಯ ಮೆಡಿಕಲ್‌ ತಪಾಸಣೆ ನಡೆಸಿ ದರ್ಗಾ ಜೈಲಿಗೆ ಬಿಟ್ಟು ಬಂದಿದ್ದಾರೆ. ಇತ್ತ ವಿಮಲಾಬಾಯಿ ಪರ ವಕೀಲರು ಬೇಲ್‌ಗೆ ಅರ್ಜಿ ಹಾಕದೆ ಇರೋದು ಅಚ್ಚರಿ ಮೂಡಿಸಿದೆ. ಅಕ್ಟೋಬರ್‌ 19ಕ್ಕೆ ದಾಖಲಾತಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ ಎನ್ನಲಾಗಿದೆ.

ಮತದಾರರಿಗೆ ಅನರ್ಹತೆ ಅಧಿಕಾರ ನೀಡಿ

ಪೊಲೀಸ್‌ ಕಸ್ಟಡಿಗೆ ತೆಗೆದುಕೊಳ್ಳುವ ಸಾಧ್ಯತೆ: ಇನ್ನು ಕೋರ್ಟ್‌ಗೆ ಸರೆಂಡರ್‌ ಆಗಿರೋ ವಿಮಲಾಬಾಯಿ ನ್ಯಾಯಾಂಗ ಬಂಧನದಲ್ಲಿದ್ದಾಳೆ. ಮಹಾದೇವ ಬೈರಗೊಂಡ ಹತ್ಯೆಗಾಗಿ ಅಟ್ಯಾಕ್‌ ನಡೆದ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ವಿಮಲಾಬಾಯಿ ಫಸ್ಟ ಟೈಂ ಕೋರ್ಟ್‌ಗೆ ಹಾಜರಾಗಿದ್ದಾಳೆ. ಈ ಪ್ರಕರಣದಲ್ಲಿ ಪೊಲೀಸರಿಗೆ ವಿಚಾರಣೆಯ ಅವಶ್ಯಕತೆ ಇರುವುದರಿಂದ ಕಸ್ಟಡಿಗೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಈ ವಾರದಲ್ಲಿ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಸಿ/ಆರ್‌ ನಂ 301/20 ಪ್ರಕರಣದಲ್ಲಿ ಕೋರ್ಟ್‌ಗೆ ಅರ್ಜಿ ಸಲ್ಲಿಸುವ ಸಾಧ್ಯತೆಗಳು ಇವೆ.

ವಿಮಲಾಬಾಯಿ ನೀಡ್ತಾಳಾ ಗಂಡನ ಸುಳಿವು?: ವಿಮಲಾಬಾಯಿ ಇಂದು ಓಡೋಡಿ ಬಂದು ಸರೆಂಡರ್‌ ಆಗಿರೋದರ ಹಿಂದೆ ಇರೋದು ಪೊಲೀಸರ ಭರ್ಜರಿ ಮೈಂಡ್‌ ಗೇಮ್‌ ಆಟ. ಆದರೆ ಎಡಿಜಿಪಿ ಅಲೋಕ್‌ ಕುಮಾರ್‌ ಈ ಆಟ ಆಡಿದ್ದರ ಹಿಂದೆ ಇದ್ದ ಉದ್ದೇಶ ಭೀಮಾತೀರದ ಮಾಸ್ಟರ್‌ ಮೈಂಡ್‌ ಮಲ್ಲಿಕಾಜೀ ಸರೆಂಡರ್‌ ಆಗಲಿ, ಭೀಮಾತೀರದಲ್ಲಿ ಶಾಂತಿ ನೆಲೆಸಲಿ ಅನ್ನೋದು. ಆದರೆ ಈಗ ಆತನ ಪತ್ನಿ ವಿಮಲಾಬಾಯಿ ಬಂದು ಸರೆಂಡರ್‌ ಆಗಿದ್ದಾಳೆ. ಇದು ಕೂಡ ಪೊಲೀಸರಿಗೆ ಅನುಕೂಲವೇ ಮಲ್ಲಿಕಾಜೀ ಎಲ್ಲಿದ್ದಾನೆ ಎನ್ನುವ ಸುಳಿವು ಪಡೆಯೋಕೆ ಇದು ಪೊಲೀಸರಿಗೆ ಸಹಾಯವಾಗಲಿದೆ ಎನ್ನಲಾಗ್ತಿದೆ. ಆದರೆ ಗಂಡ ಎಲ್ಲಿದ್ದಾನೆ ಅನ್ನೋ ಸುಳಿವನ್ನ ವಿಮಲಾಬಾಯಿ ಬಿಟ್ಟುಕೊಡ್ತಾಳಾ ಅನ್ನೋದೆ ಈಗಿರೋ ಪ್ರಶ್ನೆ?.

click me!