ಬೆಂಗಳೂರಿನಲ್ಲಿ ಯುಗಾದಿ ಹಬ್ಬದ ಹೊಸತೊಡಕಿಗೆ 5,000 ಜನರಿಗೆ ಮಟನ್ ಕೊಡುವುದಾಗಿ ಚೀಟಿ ಕಟ್ಟಿಸಿಕೊಂಡು ಎಸ್ಕೇಪ್ ಆಗಿದ್ದ ಪುಟ್ಟಸ್ವಾಮಿಗೌಡ ಪೊಲೀಸರಿಗೆ ಲಾಕ್ ಆಗಿದ್ದಾನೆ.
ಬೆಂಗಳೂರು (ಏ.03): ಬೆಂಗಳೂರಿನ ಬ್ಯಾಟರಾಯನಪುರ, ಗಿರಿನಗರ ಸೇರಿ ವಿವಿಧ ಏರಿಯಾಗಳಲ್ಲಿ ಯುಗಾದಿ ಹಬ್ಬದ ಹೊಸತೊಡಕಿಗೆ 5,000 ಜನರಿಗೆ ಮಟನ್ ಕೊಡುವುದಾಗಿ 4,800 ರೂ. ಮೊತ್ತದ ಚೀಟಿ ಕಟ್ಟಿಸಿಕೊಂಡು ಎಸ್ಕೇಪ್ ಆಗಿದ್ದ ಪುಟ್ಟಸ್ವಾಮಿಗೌಡ ಯುಗಾದಿ ಹಬ್ಬಕ್ಕೂ ಮುನ್ನವೇ ಪೊಲೀಸರಿಗೆ ಲಾಕ್ ಆಗಿದ್ದಾನೆ.
ಹೌದು, ಬೆಂಗಳೂರಿನ ಗಿರಿನಗರದಲ್ಲಿ ವಾಸವಾಗಿದ್ದ ಪುಟ್ಟಸ್ವಾಮಿ ಗೌಡ ಎನ್ನುವವರು ಕಳೆದ 3 ವರ್ಷಗಳಿಂದ ಯುಗಾದಿ ಹಬ್ಬಕ್ಕೆ ಮಟನ್ ಸರಬರಾಜು ಮಾಡುವುದಾಗಿ ಹೇಳಿ ಜನರಿಂದ ಚೀಟಿ ಕಟ್ಟಿಸಿಕೊಳ್ಳುತ್ತಿದ್ದನು. ಮೊದಲ ವರ್ಷ ಕಡಿಮೆ ಇದ್ದ ಮಟನ್ ಚೀಟಿ ಕಟ್ಟುವವರ ಸಂಖ್ಯೆ ದಿಢೀರನೆ ದುಪ್ಪಟ್ಟಾಯ್ತು. ಇನ್ನು ಚೀಟಿ ಕಟ್ಟಿದವರಿಗೆ ಸರಿಯಾಗಿ ಮಟನ್ ಕೊಟ್ಟು ನಂಬಿಕೆ ಗಿಟ್ಟಿಸಿಕೊಂಡ ಪುಟ್ಟಸ್ವಾಮಿಗೌಡ ಒಂದು ಸ್ಲಿಪ್ ಸಿದ್ಧಪಡಿಸಿ ಚೀಟಿ ಹಾಕಿಸಿಕೊಳ್ಳುವುದಕ್ಕೆ ಪ್ರತಿಯೊಂದು ಏರಿಯಾಗೆ ಹೋಗಿ ಪ್ರಚಾರ ಮಾಡುತ್ತಿದ್ದನು. ಈತ ಹೆಚ್ಚಾಗಿ ಮಹಿಳೆಯರೊಂದಿಗೆ ವ್ಯವಹಾರ ಮಾಡುತ್ತಿದ್ದದ್ದನು.
undefined
ಬೆಂಗಳೂರು ಬಿಎಂಟಿಸಿ ಬಸ್ ಕೆಳಗೆ ನುಗ್ಗಿದ ಚಿರತೆ ಮರಿ; ನೀರು ಕುಡಿಸಲು ಮುಂದಾದ ಡ್ರೈವರ್ ಮೇಲೆ ಅಟ್ಯಾಕ್!
ಪುಟ್ಟಸ್ವಾಮಿಗೌಡ ಇತ್ತೀಚೆಗೆ ಬ್ಯಾಟರಾಯನಪುರ, ಗಿರಿನಗರ, ಕವಿಕಾ ಲೇಔಟ್ ಸೇರಿ ವಿವಿಧ ಏರಿಯಾಗಳಲ್ಲಿ ಸುಮಾರು 5 ಸಾವಿರ ಜನರಿಗೆ ಯುಗಾದಿ ಹಬ್ಬಕ್ಕೆ ಮಟನ್ ಕೊಡುವುದಾಗಿ ಹೇಳಿ ಚೀಟಿ ಕಟ್ಟಿಸಿಕೊಳ್ಳುತ್ತಿದ್ದನು. ತಿಂಗಳಿಗೆ 400 ರೂ.ನಂತೆ ವರ್ಷಕ್ಕೆ 4,800 ರೂ. ಹಣವನ್ನು ಮಟನ್ ಚೀಟಿ ರೀತಿ ಕಟ್ಟಿಸಿಕೊಳ್ಳುತ್ತಿದ್ದನು. ಆದರೆ, ಯುಗಾದಿ ಹಬ್ಬ ಒಂದು ತಿಂಗಳು ಬಾಕಿ ಇದೆ ಎನ್ನುವಷ್ಟರಲ್ಲಿ ಪುಟ್ಟಸ್ವಾಮಿಗೌಡ ನಾಪತ್ತೆ ಆಗಿದ್ದನು. ಇನ್ನು ಚೀಟಿ ಕಟ್ಟಿದವರು ಆತನ ಮನೆಗೆ ಹೋಗಿದ್ದಾಗ ಆತ ಮನೆಗೆ ಬೀಗ ಜಡಿದು ಎಸ್ಕೇಪ್ ಆಗಿರುವುದು ಪತ್ತೆಯಾಗಿದೆ. ಒಂದು ವಾರ ಕಾದರೂ ಬಾರದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿತ್ತು.
ಮಟನ್ ಚೀಟಿ ಕಟ್ಟಿ ಮೋಸ ಹೋದವರು ಸೇರಿಕೊಂಡು ಬ್ಯಾಟರಾಯನಪುರದಲ್ಲಿ ಪುಟ್ಟಸ್ವಾಮಿಗೌಡನ ವಿರುದ್ಧ ದೂರು ನೀಡಿದ್ದರು. ಕೇಸ್ ದಾಖಲಿಸಿಕೊಂಡು ಪೊಲೀಸರು ವಂಚಕನಿಗೆ ಬಲೆ ಬೀಸುತ್ತಾರೆ. ಯಾರ ಸಂಪರ್ಕಕ್ಕೂ ಸಿಗದೇ ಚೀಟಿಯಲ್ಲಿದ್ದ ಫೋನ್ ನಂಬರ್ ಸ್ವಿಚ್ಡ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದನು. ಆರೋಪಿಗಾಗಿ ಪೊಲೀಸರು ನಿರಂತರವಾಗಿ ಹುಡುಕಾಟ ಮಾಡುತ್ತಲೇ ಇದ್ದರು. ಆದರೆ, ಇಂದು ಪುಟ್ಟಸ್ವಾಮಿಗೌಡನ ನಸೀಬು ಕೆಟ್ಟಿತ್ತು ಎನಿಸುತ್ತದೆ. ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಬ್ಯಾಟರಾಯನಪುರ ಪೊಲೀಸರು ಸದ್ಯ ಪುಟ್ಟಸ್ವಾಮಿಗೌಡನನ್ನ ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರು ರಂಜಾನ್ ಕಿಟ್ ವಂಚನೆ: ದಂಪತಿಯಿಂದ 21 ಗ್ರಾಂ ಚಿನ್ನ, 9 ಸಾವಿರ ಕಿತ್ತುಕೊಂಡು ಪರಾರಿಯಾದ ಅಬ್ದುಲ್ಲಾ
ಇನ್ನು ಚೀಟಿ ಕಟ್ಟಿದವರಿಗೆ ಪುಟ್ಟಸ್ವಾಮಿಗೌಡ ಹಣವನ್ನು ವಾಪಸ್ ಕೊಡುತ್ತಾನೋ ಅಥವಾ ಯುಗಾದಿ ಹಬ್ಬದ ಹೊಸತೊಡಕಿಗೆ ಮಟನ್ ಮಾಂಸ ಸರಬರಾಜು ಮಾಡುತ್ತಾನೋ ಕಾದು ನೋಡಬೇಕಿದೆ. ಲಕ್ಷಾಂತರ ರೂ. ಹಣವನ್ನು ಒಟ್ಟುಗೂಡಿಸಿಕೊಂಡು ವಂಚನೆ ಮಾಡಲು ಮುಂದಾದ ಈತನಿಗೆ ಪೊಲೀಸರು ತಕ್ಕ ಶಿಕ್ಷೆಯನ್ನೂ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಮತ್ತೆ, ಕೆಲವರು ನಮ್ಮ ಹಣವನ್ನು ನಮಗೆ ವಾಪಸ್ ಕೊಡಿಸಿ, ನೀವು ಆತನಿಗೆ ಯಾವ ಶಿಕ್ಷೆಯನ್ನಾದರೂ ಕೊಡಿ ಎಂದು ಹೇಳಿದ್ದಾರೆ.