ಬೆಂಗಳೂರು ಉದ್ಯಮಿ ದಿವಾಳಿ: 70 ಲಾರಿಗಳ ಮಾಲೀಕ ಹುಡುಗೀರ ಶೋಕಿಯಿಂದಾದ ಭಿಕ್ಷುಕ!

By Sathish Kumar KH  |  First Published Nov 5, 2024, 1:26 PM IST

ಒಂದು ಕಾಲದಲ್ಲಿ 70 ಲಾರಿಗಳ ಒಡೆಯನಾಗಿದ್ದ ಉದ್ಯಮಿ ವಿಶ್ವನಾಥ್, ಜೂಜಾಟ ಮತ್ತು ಹುಡುಗಿಯರ ಹಿಂದೆ ಬಿದ್ದು ಬೀದಿಗೆ ಬಿದ್ದಿದ್ದಾನೆ. ಐಷಾರಾಮಿ ಜೀವನಕ್ಕೆ ಒಗ್ಗಿದ್ದ ಆತ ಕೆಳಮಟ್ಟದ ಕೆಲಸ ಮಾಡಲಾಗದೆ ಕಳ್ಳತನಕ್ಕೆ ಇಳಿದು 150ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.


ಬೆಂಗಳೂರು (ಅ.05): ಬೆಂಗಳೂರಿನಲ್ಲಿ ಮನೆ ಹಾಗೂ 70 ಲಾರಿಗಳನ್ನು ಇಟ್ಟುಕೊಂಡು ದೊಡ್ಡ ಉದ್ಯಮಿಯಾಗಿದ್ದವನು ಹುಡುಗಿಯರು ಹಾಗೂ ಜೂಜಾಟದ ಹಿಂದೆ ಬಿದ್ದು ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿದ್ದಾನೆ. ಆದರೆ, ಐಷಾರಾಮಿ ಜೀವನ ನಡೆಸಿದವನಿಗೆ ಕೆಳಮಟ್ಟದಲ್ಲಿ ದುಡಿಮೆ ಮಾಡಲಾಗದೇ ಕಳ್ಳತನಕ್ಕೆ ಮುಂದಾಗಿದ್ದು, ಬರೋಬ್ಬರಿ 150ಕ್ಕೂ ಅಧಿಕ ಕಳ್ಳತನದ ಕೇಸಿನಲ್ಲಿ ಹಲವು ರಾಜ್ಯಗಳಲ್ಲಿ ಪೊಲೀಸರಿಗೆ ಬೇಕಾಗಿದ್ದಾನೆ. ಹೈದರಾಬಾದ್ ಜೈಲಿನಲ್ಲಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಾಡಿ ವಾರೆಂಟ್‌ ಮೇಲೆ ಕರೆತಂದಿದ್ದಾರೆ.

ಬೆಂಗಳೂರಿನಲ್ಲಿ ಹಣ ಮಾಡುವುದಕ್ಕೆ ಎಷ್ಟು ಕಷ್ಟಪಡುತ್ತೇವೆಯೋ ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದಕ್ಕೆ ಬುದ್ಧಿವಂತಿಕೆಯೂ ಇರಬೇಕು. ಒಂದು ವೇಳೆ ದುಡಿಮೆಯ ದಾರಿಯನ್ನು ಬಿಟ್ಟು ಶೋಕಿ ಮಾಡಲು ಮುಂದಾದರೆ ನೀವು ದುಡಿದು ಸಂಪಾದನೆ ಮಾಡಿದ್ದ ಕೋಟ್ಯಾಂತರ ರೂ. ಆಸ್ತಿಯೂ ನಗಣ್ಯವಾಗಿಬಿಡುತ್ತದೆ ಎಂಬುದಕ್ಕೆ ಬೆಂಗಳೂರಿನ ವಿಶ್ವನಾಥ್ @ ಕೋಳಿವಾಡ ಎಂಬ ವ್ಯಕ್ತಿಯೇ ತಾಜಾ ಉದಾಹರಣೆ ಆಗಿದ್ದಾನೆ.

Latest Videos

undefined

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕಳೆದ ಐದಾರು ವರ್ಷಗಳ ಹಿಂದೆ ಒಳ್ಳೆ ಬ್ಯುಸಿನೆಸ್ ಹೊಂದಿದ್ದ ವಿಶ್ವನಾಥ್, 70ಕ್ಕೂ ಹೆಚ್ಚು ಲಾರಿ ಇಟ್ಕೊಂಡು ಉದ್ಯಮವನ್ನು ನಡೆಸುತ್ತಿದ್ದನು. ತನ್ನ ಲಾರಿ ಇಟ್ಟುಕೊಂಡು ಒಳ್ಳೆಯ ಬ್ಯುಸಿನೆಸ್ ಮಾಡುತ್ತಿದ್ದರಿಂದ ಆತನಿಗೆ ಆದಾಯವೂ ಬರುತ್ತಿತ್ತು. ಆದರೆ, ಆತನಿಗೆ ಬರುತ್ತಿದ್ದ ಅತಿಯಾದ ಹಣದ ಮದವೇರಿ ಹಲವು ಚಟಗಳಿಗೆ ದಾಸನಾಗಿ ಶೋಕಿ ಜೀವನ ಮಾಡಲು ಮುಂದಾಗಿದ್ದಾನೆ. ಆಗ ಆತನಿಗೆ ಸಿಕ್ಕಿದ ಸ್ನೇಹಿತರೂ ಕೂಡ ಹಣವನ್ನು ಕಿತ್ತುಕೊಂಡು ದಿವಾಳಿ ಮಾಡಲು ಮುಂದಾಗಿದ್ದರು. ಇದರಿಂದಾಗಿ ವಿಶ್ವನಾಥ್‌ಗೆ ಪಬ್, ಕ್ಲಬ್, ಜೂಜಾಟ ಹಾಗೂ ಹುಡುಗಿಯರೊಂದಿಗೆ ಮಜಾ ಮಾಡುವ ಶೋಕಿಯನ್ನು ಕಲಿಸುತ್ತಾರೆ.

ಇದನ್ನೂ ಓದಿ: ರಾಜಸ್ಥಾನದಿಂದ ವಿಮಾನದಲ್ಲಿ ಬೆಂಗ್ಳೂರಿಗೆ ಬಂದು ಕಾರು ಕಳ್ಳತನ: ಹೈಟೆಕ್‌ ಕಳ್ಳ ಅರೆಸ್ಟ್‌

ಇದಾದ ನಂತರ ಹೆಣ್ಣುಮಕ್ಕಳಿಗಾಗಿ, ಜೂಜಾಟಕ್ಕಾಗಿ ವಿಶ್ವನಾಥ್ ತನಗೆ ಬರುತ್ತಿದ್ದ ಹಣ ಹಾಗೂ ದುಡಿದ ಸಂಪಾದನೆ ಮಾಡಿಟ್ಟಿದ್ದ ಹಣವನ್ನು ನೀರಿನಂತೆ ಖರ್ಚಿ ಮಾಡಿ ಬೀದಿಗೆ ಬಂದಿದ್ದಾನೆ. ಎಲ್ಲವನ್ನೂ ಕಳೆದುಕೊಂಡು ನಿರ್ಗತಿಕನಾದರೂ ಶೋಕಿ ಜೀವನ ಬಿಡದೇ, ಹುಡುಗಿಯರ ಶೋಕಿ ಬಿಡದೇ ಹಣಕ್ಕಾಗಿ ಕಳ್ಳತನದ ದಾರಿಯನ್ನು ಹಿಡಿದಿದ್ದಾರೆ. ಅದರಲ್ಲಿಯೂ ಬಂಗಾರದ ಆಭರಣಗಳನ್ನು ಹಾಕಿಕೊಂಡು ಓಡಾಡುವ ಮಹಿಳೆಯರನ್ನು ಟಾರ್ಗೆಟ್ ಮಾಡಿ ಬೆಂಗಳೂರು, ಬೆಳಗಾವಿ, ಧಾರವಾಡ, ಹೈದರಾಬಾದ್ ಸೇರಿದಂತೆ ವಿವಿಧೆಡೆ ಸರಗಳ್ಳತನ ಮಾಡುತ್ತಿದ್ದನು. ಈ ವೇಳೆ ಸರಗಳ್ಳತನ ಮಾಡಿ ತಪ್ಪಿಸಿಕೊಳ್ಳುವಾಗ ಪೊಲೀಸರಿಂದ ಕಾಲಿಗೆ ಗುಂಡೇಟು ಹೊಡಿಸಿಕೊಂಡಿದ್ದಾನೆ. ಆದರೂ, ತನ್ನ ಕಳ್ಳತನ ಚಾಳಿಯನ್ನು ಮಾತ್ರ ಬಿಟ್ಟಿರಲಿಲ್ಲ. 

ಇತ್ತೀಚೆಗೆ ಬೆಂಗಳೂರಿನ ಗಿರಿನಗರದಲ್ಲಿ ಮಹಿಳೆಯೊಬ್ಬರ ಸರ ಕಳ್ಳತನ ಮಾಡಿ ಪರಾರಿ ಆಗಿದ್ದನು. ಮಹಿಳೆಗೆ ಅವರ ಪತಿಯ ಬಗ್ಗೆ ವಿಚಾರಿಸುವ ನೆಪದಲ್ಲಿ ಹತ್ತಿರದಲ್ಲಿ ನಿಂತು ಸರ ಕಿತ್ತುಕೊಂಡು ಓಡಿ ಹೋಗಿದ್ದನು. ಇದಾದ ನಂತರ ಹೈದರಾಬಾದ್‌ಗೆ ಹೋಗಿ ಅಲ್ಲಿಯೂ ಕಳ್ಳತನ ಮಾಡಿ ಅಲ್ಲಿನ ಪೊಲೀಸರಿಗೆ ಸಿಕ್ಕಿಬಿದ್ದಿದ್ದನು. ಹೀಗಾಗಿ, ಹೈದರಾಬಾದ್ ಪೊಲೀಸರು ಈತನನ್ನು ಬಂಧಿಸಿ ಜೈಲಿಗಟ್ಟಿದ್ದರು. ಹೈದರಾಬಾದ್ ಪೊಲೀಸರನ್ನು ಸಂಪರ್ಕ ಮಾಡಿದ ಬೆಂಗಳೂರು ಪೊಲೀಸರು ಆರೋಪಿಯನ್ನ ಬಾಡಿ ವಾರೆಂಟ್ ಮೇಲೆ ಬೆಂಗಳೂರಿಗೆ ಕರೆ ತಂದಿದ್ದಾರೆ. ಈತನ ಬಳಿ 25 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೈಕ್ ಅನ್ನು ಜಪ್ತಿ ಮಾಡಿದ್ದಾರೆ. ಈತನ ವಿರುದ್ಧ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮತ್ತೊಬ್ಬ ಸರ್ಕಾರಿ ನೌಕರ ಆತ್ಮಹತ್ಯೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತನ ಹೆಸರು ಬಹಿರಂಗ

click me!