
ಬೆಂಗಳೂರು (ಏ.17): ದೌರ್ಜನ್ಯ ಸಂಬಂಧ ಸಂತ್ರಸ್ತ ತಾಯಿ-ಮಗಳಿಂದ ದೂರು ಸ್ವೀಕರಿಸದೆ ಠಾಣೆಯಲ್ಲಿ ನಿಂದಿಸಿ ದರ್ಪ ತೋರಿಸಿದ ಆರೋಪದ ಮೇರೆಗೆ ಚಿಕ್ಕಬಳ್ಳಾಪುರ ಜಿಲ್ಲೆ ಚೇಳೂರು ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಹರೀಶ್ ಅವರಿಗೆ ₹50 ಸಾವಿರ ದಂಡ ವಿಧಿಸಿದಲ್ಲದೆ ಶಿಸ್ತು ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ರಾಜ್ಯ ಮಾನವ ಹಕ್ಕುಗಳ ಆಯೋಗ ಶಿಫಾರಸು ಮಾಡಿದೆ.
ಚೇಳೂರು ಠಾಣಾ ವ್ಯಾಪ್ತಿಯಲ್ಲಿ ತಮ್ಮ 13 ವರ್ಷದ ಮಗಳ ಮೇಲೆ ದೌರ್ಜನ್ಯ ನಡೆದಿದೆ ಎಂದು ದೂರು ಕೊಡಲು ತೆರಳಿದ ತಾಯಿ ಹಾಗೂ ಮಗಳ ಮೇಲೆ ಪಿಎಸ್‌ಐ ಹರೀಶ್, ನಿವೃತ್ತ ಪಿಎಸ್‌ಐ ಪಾಪಣ್ಣ ಅವರು ದೌಲತ್ತಿನಿಂದ ನಡೆದುಕೊಂಡಿದ್ದಾರೆ. ಠಾಣೆಗೆ ದೂರು ಕೊಡಲು ಬಂದರೆ ಒದ್ದು ಬಿಡುತ್ತೇನೆ ಎಂದು ಹರೀಶ್ ಬೆದರಿಸಿದ್ದರು. ಈ ಬಗ್ಗೆ ನೊಂದ ತಾಯಿ ದೂರಿನನ್ವಯ ಠಾಣೆಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಸಂತ್ರಸ್ತರ ಮೇಲೆ ಪಿಎಸ್‌ಐ ಹರೀಶ್ ದರ್ಪ ತೋರಿಸಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಹಲ್ಲೆಯನ್ನು ಗ್ಯಾಂಗ್ ರೇ*ಎಂದು ಕಥೆ ಕಟ್ಟಿದ ಮಹಿಳೆ: ಕೇಸ್ ದಾಖಲು!
ಈ ಮಾಹಿತಿ ಮೇರೆಗೆ ಆರೋಪಿತ ಪಿಎಸ್‌ಐ ಹರೀಶ್ ಹಾಗೂ ಈ ಹಿಂದೆ ಚೇಳೂರು ಠಾಣೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಪಾಪಣ್ಣ ಅವರಿಗೆ ₹50 ಸಾವಿರ ದಂಡ ಆಯೋಗ ದಂಡ ವಿಧಿಸಿದೆ. ಅಲ್ಲದೆ ಈ ಇಬ್ಬರು ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಹಾಗೂ ಸಂತ್ರಸ್ತರಿಗೆ ಆರೋಪಿಗಳಿಂದ ವಸೂಲಿ ಮಾಡಿದ ಹಣವನ್ನು ಪರಿಹಾರ ರೂಪದಲ್ಲಿ ನೀಡುವಂತೆ ಸರ್ಕಾರಕ್ಕೆ ಮಾನವ ಹಕ್ಕುಗಳ ಆಯೋಗ ಸೂಚಿಸಿದೆ.
ತಮ್ಮ ಅತ್ತೆ ನಾರಾಯಣಮ್ಮ, ಮಾವ ಪರಮಾತ್ಮ ಹಾಗೂ ಮೈದುನ ಮಧು ಅವರ ಮಾತು ಕೇಳಿ ಪಿಎಸ್‌ಐ ದೂರು ಸ್ವೀಕರಿಸಲು ವಿಳಂಬ ಮಾಡಿದರು. ಈ ಘಟನೆ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಆದರೆ ಠಾಣೆಗೆ ಹೋದರೆ ಮನಬಂದಂತೆ ನಿಂದಿಸಿ ಅವಮಾನಿಸಿ ಪಿಎಸ್‌ಐ ಕಳುಹಿಸಿದ್ದರು ಎಂದು ಸಂತ್ರಸ್ತರು ಆಪಾದಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ