
ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ ಎಂದು ಸಾರಿ ಸಾರಿ ಸೈಬರ್ ಕ್ರೈಮ್ ಪೊಲೀಸರು ಬಡಿದುಕೊಂಡರೂ, ಆನ್ಲೈನ್ನಲ್ಲಿ ಕೋಟಿ ಕೋಟಿ ಹಣ ಕಳೆದುಕೊಂಡವರು ಅದೆಷ್ಟೋ So called educted ವರ್ಗದವರು! ಬಾಯಿ ಬಿಟ್ಟರೆ 'ನಾನೇನು ಅನ್ಎಜುಕೇಟೆಡ್ಡಾ' ಎಂದು ಕೇಳುವ ದೊಡ್ಡ ವರ್ಗವೇ ಇದೆ. ಆದರೆ ಇಂದು ಅತ್ಯಂತ ಸುಲಭದಲ್ಲಿ ಬಲೆಗೆ ಬೀಳುವ, ಪದೇ ಪದೇ ಎಚ್ಚರಿಕೆ ನೀಡಿದರೂ ಮೋಸದ ಸುಳಿಯಲ್ಲಿ ಸಿಲುಕುತ್ತಿರುವವರನ್ನು ನೋಡಿದರೆ ಎಲ್ಲರೂ ಡಬಲ್ ಗ್ರಾಜುಯೇಟ್ಗಳೇ ಆಗಿರುತ್ತಾರೆ ಎನ್ನುವುದು ತಿಳಿದುಬರುತ್ತಿದೆ. ಅದೇ ರೀತಿ ಈಗ ಬೆಂಗಳೂರಿನ ಯುವಕನೊಬ್ಬ ಆನ್ಲೈನ್ನಲ್ಲಿ ಪ್ರೀತಿಸಲು ಹೋಗಿ 44 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ.
ಕೆಲ ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ಅರ್ಚನಾ ಎನ್ನುವ ಹೆಸರಿನಲ್ಲಿ ಗುರುತಿಸಿಕೊಂಡಾಕೆ, ಇನ್ಸ್ಟಾಗ್ರಾಮ್ನಲ್ಲಿ ಈ ಯುವಕನನ್ನು ಬಲೆಗೆ ಬೀಳಿಸಿ 44 ಲಕ್ಷ ರೂಪಾಯಿ ಎಗರಿಸಿದ್ದಾಳೆ. ಅಷ್ಟಕ್ಕೂ ಈ ಅರ್ಚನಾ ಎಂದು ಹೇಳಿಕೊಂಡಿರುವವರು ಗಂಡಸೋ, ಹೆಂಗಸೋ ಎನ್ನುವುದು ಕೂಡ ಇನ್ನೂ ಬಯಲಾಗಬೇಕಿದೆ ಅಷ್ಟೇ. ಅಷ್ಟಕ್ಕೂ ಈ ಯುವಕ ಆನ್ಲೈನ್ನಲ್ಲಿ ಜೀವನ ಸಂಗಾತಿಯನ್ನು ಹುಡುಕುತ್ತಿದ್ದ. ಇಂಥವರನ್ನೇ ವಂಚಕರು ಟಾರ್ಗೆಟ್ ಮಾಡುವುದು ಎಂದು ಇದಾಗಲೇ ಹಲವಾರು ಕಡೆಗಳಲ್ಲಿ ಸೈಬರ್ ಕ್ರೈಂನವರು ಎಚ್ಚರಿಕೆಯನ್ನು ನೀಡುತ್ತಲೇ ಇದ್ದಾರೆ. ಆದರೆ ಪ್ರೀತಿಗೆ ಕಣ್ಣಿಲ್ಲ, ಕಿವಿಯಿಲ್ಲ, ಏನೇನೂ ಇಲ್ಲ... ಎನ್ನುವಂತೆ ಲವ್ನಲ್ಲಿ ಬಿದ್ದವರಿಗೆ ಯಾವ ಎಚ್ಚರಿಕೆಯೂ ಕೇಳಿಸುವುದೇ ಇಲ್ಲ ಎನ್ನುವುದಕ್ಕೆ ಈ ಘಟನೆ ಮತ್ತೊಮ್ಮೆ ಸಾಕ್ಷಿಯಾಗಿದೆ.
ಜೀವನ ಸಂಗಾತಿಯನ್ನು ಹುಡುಕುತ್ತಿದ್ದ ಯುವಕನಿಗೆ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾದದ್ದೇ ಈ ಬೆಳದಿಂಗಳ ಬಾಲೆ "ಅರ್ಚನಾ". ತನ್ನನ್ನು ತಾನು ಅರ್ಚನಾ ಎಂದು ಹೇಳಿಕೊಂಡಿರುವಾಕೆ ಯುವಕನ ಸಂಪರ್ಕಕ್ಕೆ ಬಂದಿದ್ದಾಳೆ. ಇದು ಕಣ್ ಕಣ್ಣ ಸಲುಗೆ ಅಲ್ಲ, ಬದಲಿಗೆ ಮೆಸೇಜ್ ಮೆಸೇಜ್ಗಳ ಸಲುಗೆ ಆಗಿದೆ. ಆರಂಭದಲ್ಲಿ ಹಾಯ್, ಹೆಲ್ಲೋ ಮೂಲಕ ಪ್ರಾರಂಭವಾಗಿ ಕೊನೆಗೆ ತೀರಾ ವೈಯಕ್ತಿಯ ವಿಷಯಗಳವರೆಗೂ ಹೋಗಿದೆ ಸಂದೇಶ. ಈ ಆಸಾಮಿಯನ್ನು ಸುಲಭದಲ್ಲಿ ಬ್ರೇನ್ವಾಷ್ ಮಾಡಬಹುದು ಎಂದುಕೊಂಡ ಆ ಮಹಿಳೆ, ಬಿಟ್‌ಕಾಯಿನ್ ಹೂಡಿಕೆ ಬಗ್ಗೆ ಬೋಧನೆ ಮಾಡಿದ್ದಾಳೆ. ಹೆಣ್ಣೊಬ್ಬಳು ಇಷ್ಟೆಲ್ಲಾ ಉಪದೇಶ ಮಾಡುವಾಗ ಅದೂ ಇಷ್ಟೊಂದು ಪ್ರೀತಿಯಿಂದ ಬೇಡ ಎನ್ನಲು ಆದೀತೆ? ಈ ಯುವಕ ಹಳ್ಳಕ್ಕೆ ಬಿದ್ದಿದ್ದಾನೆ!
ಹೆಚ್ಚಿನ ಆದಾಯದ ಭರವಸೆ ನೀಡಿರುವ ಆ ಬಾಲೆ, ಆರಂಭದಲ್ಲಿ ಸಣ್ಣ ವಹಿವಾಟುಗಳನ್ನು ಪ್ರಯತ್ನಿಸಲು ಒತ್ತಾಯಿಸಿದ್ದಾಳೆ. ಕೊನೆಗೆ ಈತನಿಗೆ ಗುಂಡಿ ತೋಡಲು ಶುರು ಮಾಡಿದ್ದಾಳೆ. ಅವಳು ಹೇಳಿದಂತೆಲ್ಲಾ, ಬೇರೆ ಬೇರೆ ಬ್ಯಾಂಕ್ ಖಾತೆಗಳನ್ನು ನೀಡಿರುವ ಆಕೆ, ಹಣವನ್ನು ವರ್ಗಾಯಿಸಲು ಕೇಳಿದ್ದಾಳೆ. ಇವನೂ ಹಾಗೆಯೇ ಮಾಡಿದ್ದಾನೆ. ಆರಂಭದಲ್ಲಿ ಆಮಿಷ ಒಡ್ಡಲು ಡಬಲ್ ಹಣವನ್ನೂ ನೀಡಿದ್ದಾಳೆ ಆಕೆ. ಇನ್ನೇನು, ಲಡ್ಡು ಬಾಯಲ್ಲೇ ಬಿತ್ತೆಂದ ಆಸಾಮಿ, ಹೆಚ್ಚು ಹೆಚ್ಚು ಹಣ ಹಾಕಿ, ಆಕೆಯ ಸುಮಧುರ ಮಾತಿಗೆ ಮರಳುಗಾಗಿ 44 ಲಕ್ಷ ರೂಪಾಯಿ ಅವಳು ಹೇಳಿದ ಖಾತೆಗೆ ಜಮಾ ಮಾಡಿದ್ದಾನೆ. ಇಷ್ಟಾಗುತ್ತಿದ್ದಂತೆಯೇ ಇವನಲ್ಲಿದ್ದ ದುಡ್ಡು ಖಾಲಿಯಾಗುವುದು ತಿಳಿದಾಗ ಸುಂದರಿ ಅದೃಶ್ಯಳಾಗಿದ್ದಾಳೆ. ಯುವಕನ ಸಂಪರ್ಕಕ್ಕೆ ಸಿಗದೇ ಮಾಯವಾದಾಗಲೇ ವಾಸ್ತವ ಜಗತ್ತಿಗೆ ಬಂದ ಯುವಕನಿಗೆ ತಾನು ಸ್ವರ್ಗದಲ್ಲಿ ಇಲ್ಲ, ಬದಲಿಗೆ ನರಕಕ್ಕೆ ಹೋಗಿರುವುದು ತಿಳಿದಿದೆ! ಕೊನೆಗೆ ಸೈಬರ್ ಕ್ರೈಂನವರಿಗೆ ದೂರು ಸಲ್ಲಿಸಿದ್ದು, ತನಿಖೆ ನಡೆಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ