
ಬೆಂಗಳೂರು(ಅ.16): ಕಡಿಮೆ ಬಡ್ಡಿಗೆ ಲೋನ್ ಕೊಡಿಸ್ತೇನೆ ಎಂದು ನಂಬಿಸಿ ಅಮಾಯಕ ಜನರಿಗೆ ಲಕ್ಷ ಲಕ್ಷ ವಂಚಿಸಿದ ಖತರ್ನಾಕ್ ವಂಚಕಿ ನಯನಾಳನ್ನ ಬಸವೇಶ್ವರನಗರ ಪೊಲೀಸರು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ದಬ್ಬಿದ್ದಾರೆ.
'ಸುಬ್ಬಲಕ್ಷ್ಮಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್' ಎಂಬ ಕಂಪನಿಯ ಮೂಲಕ ಕಡಿಮೆ ಬಡ್ಡಿಗೆ ಸಾಲ ಕೊಡುವುದಾಗಿ ಜನರನ್ನು ಮೋಸ ಮಾಡಿದ್ದ ವಂಚಕಿ ನಯನಾ. ಈ ವಂಚನೆಯಲ್ಲಿ ಸುಮಾರು 12 ಲಕ್ಷ 22 ಸಾವಿರ ರೂಪಾಯಿಗಳಷ್ಟು ಹಣ ಪಡೆದು ಜನರಿಗೆ ನಾಮ ಹಾಕಿದ್ದಳು.
ನಯನಾ ವಂಚಿಸುತ್ತಿದ್ದಿದ್ದು ಹೇಗೆ?
1% ಬಡ್ಡಿಗೆ ಸಾಲ ಕೊಡಿಸುವುದಾಗಿ ಆಸೆ ತೋರಿಸುತ್ತಿದ್ದ ವಂಚಕಿ ನಯನಾ ಮತ್ತು ಆಕೆಯ ಸಹಚರರು. ಕಡಿಮೆ ಬಡ್ಡಿಗೆ ಸಾಲ ಸಿಗುತ್ತದೆ ಎಂದು ಅಮಾಯಕರನ್ನ ನಂಬಿಸುತ್ತಿದ್ದ ಗ್ಯಾಂಗ್ ಬಳಿಕ 10 ಲಕ್ಷ ರೂಪಾಯಿ ಸಾಲ ಬೇಕೆಂದರೆ ಮುಂಗಡವಾಗಿ 3 ತಿಂಗಳ ಇ.ಎಂ.ಐ (Equated Monthly Installment) ಕಟ್ಟಬೇಕೆಂದು ಹೇಳುತ್ತಿದ್ದರು. ಹಣದ ಅಗತ್ಯವಿರುವವರು ಹಿಂದೆಮುಂದೆ ಯೋಚಿಸದೇ ಇಎಂಐ ಕಟ್ಟುತ್ತಿದ್ದರು. ಇದೇ ರೀತಿ ಸುಮಾರು 15 ಜನರಿಂದ ಒಟ್ಟು 30 ಸಾವಿರ ರೂಪಾಯಿಗಳನ್ನು ಪಡೆದು ನಾಮಕ ಹಾಕಿದ್ದ ಗ್ಯಾಂಗ್. ಈ ಹಣ ಪಡೆದ ನಂತರ ಸಾಲ ನೀಡದೆ ವಂಚಿಸುತ್ತಿದ್ದರು.
ವಂಚನೆ ಪ್ರಕರಣ ಬಯಲಾಗಿದ್ದು ಹೇಗೆ?
ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಈ ವಂಚನೆಯ ಬಗ್ಗೆ ದೂರು ದಾಖಲಾಗಿತ್ತು. ಬಸವೇಶ್ವರನಗರ ಪೊಲೀಸ್ ತಂಡ ತನಿಖೆಗಿಳಿದಾಗ, ನಯನಾ ವಿರುದ್ಧ ಈ ಹಿಂದೆ ಬಸವೇಶ್ವರನಗರ ಮತ್ತು ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಗಳಲ್ಲಿ ಇದೇ ರೀತಿಯ ವಂಚನೆ ಕೇಸ್‌ಗಳಿದ್ದವು ಎಂದು ಬಯಲಾಯಿತು. ವಿವಿಧ ಸ್ಥಳಗಳಲ್ಲಿ ಇಂತಹ ಮೋಸಗಳನ್ನು ಮಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ನಯನಾಳನ್ನ ಬಂಧಿಸಲಾಗಿದ್ದು ಪೊಲೀಸರು ಇನ್ನುಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ