
ಬೆಂಗಳೂರು (ಅ.10): ಲಾಡ್ಜ್‌ವೊಂದರಲ್ಲಿ ಯುವಕ-ಯುವತಿ ನಿಗೂಢವಾಗಿ ಮೃತಪಟ್ಟಿರುವ ಘಟನೆ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.
ಗದಗ ಜಿಲ್ಲೆ ಗಜೇಂದ್ರಘಡ ತಾಲೂಕಿನ ರಮೇಶ್ ಬಂಡಿವಡ್ಡರ್ (22) ಹಾಗೂ ವಿಜಯಪುರ ಜಿಲ್ಲೆ ಹುನಗುಂದ ತಾಲೂಕಿನ ಕಾವೇರಿ ಬಡಿಗೇರ್ (25) ಮೃತರು. ಯಲಹಂಕ 4ನೇ ಹಂತದಲ್ಲಿರುವ ಕಿಚನ್-6 ಫ್ಯಾಮಿಲಿ ರೆಸ್ಟೋರೆಂಟ್‌ನ ಕೋಣೆಯಲ್ಲಿ ರಮೇಶ್ ಬೆಂಕಿಯಲ್ಲಿ ಸುಟ್ಟು ಹಾಗೂ ಕಾವೇರಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಆದರೆ, ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಖಚಿತವಾಗಿಲ್ಲ. ಈ ಬಗ್ಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಡುಪಿಯಲ್ಲಿ ರಮೇಶ್ ಗಾರೆ ಕೆಲಸ ಮಾಡುತ್ತಿದ್ದರೆ, ಯಲಹಂಕ ಸಮೀಪದ ಸ್ಪಾನಲ್ಲಿ 15 ದಿನಗಳ ಹಿಂದಷ್ಟೇ ಕಾವೇರಿ ಕೆಲಸಕ್ಕೆ ಸೇರಿದ್ದಳು. ಇದೇ ಲಾಡ್ಜ್‌ನಲ್ಲಿ ಆಕೆ ನೆಲೆಸಿದ್ದಳು. ಈಕೆಯ ಭೇಟಿಗೆ ರಮೇಶ್ ಬಂದು ಹೋಗುತ್ತಿದ್ದ. ಕಳೆದ ವಾರದಿಂದಲೂ ಆತ ಲಾಡ್ಜ್‌ನಲ್ಲೇ ತಂಗಿದ್ದ. ಗುರುವಾರ ಸಂಜೆ 4.30ರ ಸುಮಾರಿಗೆ ಅವರು ತಂಗಿದ್ದ ಕೋಣೆಯಿಂದ ದಟ್ಟ ಹೊಗೆ ಕಂಡು ಪೊಲೀಸರಿಗೆ ಲಾಡ್ಜ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಬೆಂಕಿ ನಂದಿಸಿ ಕೋಣೆ ಪ್ರವೇಶಿಸಿದ್ದಾರೆ. ಆಗ ಕೋಣೆಯಲ್ಲಿ ರಮೇಶ್ ಮೃತದೇಹ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹೋದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹಾಗೆಯೇ ಸ್ನಾನಗೃಹದಲ್ಲಿ ಕಾವೇರಿ ಮೃತದೇಹ ಕಂಡು ಬಂದಿದೆ. ಆದರೆ, ಆಕೆಯ ಮೃತದೇಹ ಸುಟ್ಟಿಲ್ಲ. ಪೆಟ್ರೋಲ್‌ನಿಂದ ಬೆಂಕಿ ಹೊತ್ತಿಕೊಂಡ ಬಳಿಕ ರೂಮಿನಲ್ಲಿ ಆವರಿಸಿದ ಹೊಗೆ ಸೇವಿಸಿ ಕಾವೇರಿ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮೃತರ ಪೋಷಕರನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿದೆ. ಕಾವೇರಿ ಹಾಗೂ ರಮೇಶ್ ಪರಸ್ಪರ ಹೇಗೆ ಪರಿಚಿತರು ಸೇರಿದಂತೆ ಇಬ್ಬರ ಪೂರ್ವಾಪರ ವಿವರ ಸಿಕ್ಕಿಲ್ಲ. ಮೃತರ ಪೋಷಕರು ನಗರಕ್ಕೆ ಬಂದ ಬಳಿಕ ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೆಟ್ರೋಲ್ ತಂದಿದ್ದ ರಮೇಶ್:
ಲಾಡ್ಜ್‌ನಲ್ಲಿ ಬೆಳಗ್ಗೆ ವೈಯಕ್ತಿಕ ವಿಚಾರಕ್ಕೆ ರಮೇಶ್ ಹಾಗೂ ಕಾವೇರಿ ಮಧ್ಯೆ ಜಗಳವಾಗಿದೆ. ಮಧ್ಯಾಹ್ನ ರೂಮ್‌ನಿಂದ ಹೊರಬಂದ ಆತ, ಬಳಿಕ ಪೆಟ್ರೋಲ್ ಖರೀದಿಸಿ ಬಾಟಲ್‌ನಲ್ಲಿ ತುಂಬಿಕೊಂಡು ಮರಳಿದ್ದಾನೆ. ಆನಂತರ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಸಾಯುವುದಾಗಿ ಕಾವೇರಿಗೆ ಹೆದರಿಸಿದ್ದಾನೆ. ಇದರಿಂದ ಭೀತಿಗೊಂಡ ಆಕೆ, ರಮೇಶ್‌ನನ್ನು ತಳ್ಳಿ ಸ್ನಾನದ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ. ಆನಂತರ ಆತ ಬೆಂಕಿ ಹಚ್ಚಿಕೊಂಡಿದ್ದಾನೆ. ಆಗ ದಟ್ಟ ಹೊಗೆ ಆವರಿಸಿದ್ದರಿಂದ ಹೊರ ಬರಲಾಗದೆ ಸ್ನಾನದ ಮನೆಯಲ್ಲೇ ಉಸಿರುಗಟ್ಟಿ ಕಾವೇರಿ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.
ರಕ್ಷಣೆ ಕೋರಿ ಸ್ಪಾ ಮಾಲಿಕನಿಗೆ ಕರೆ:
ತನ್ನ ಸ್ನೇಹಿತ ಬೆಂಕಿ ಹಚ್ಚಿಕೊಂಡ ಕೂಡಲೇ ರಕ್ಷಣೆ ಕೋರಿ ತನ್ನ ಸ್ಪಾ ಮಾಲೀಕನಿಗೆ ಕರೆ ಮಾಡಿ ಕಾವೇರಿ ತಿಳಿಸಿದ್ದಳು. ತಕ್ಷಣವೇ ಪೊಲೀಸರಿಗೆ ಸ್ಪಾ ಮಾಲೀಕರು ತಿಳಿಸಿದ್ದರು. ಆದರೆ, ಲಾಡ್ಜ್‌ಗೆ ಪೊಲೀಸರು ತೆರಳುವ ಮುನ್ನವೇ ಅಗ್ನಿಯಲ್ಲಿ ಬೆಂದು ರಮೇಶ್ ಸುಟ್ಟು ಹೋಗಿದ್ದರೆ, ಉಸಿರುಗಟ್ಟಿ ಕಾವೇರಿ ಮೃತಪಟ್ಟಿದ್ದಳು ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ