
ಬೆಂಗಳೂರು (ಜು.23): ಐಟಿ ನಗರಿ ಬೆಂಗಳೂರಿನಲ್ಲಿ ಸೈಬರ್ ಅಪರಾಧಿಗಳು ತಮ್ಮ ಕುತಂತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. 'ಡಿಜಿಟಲ್ ಅರೆಸ್ಟ್' ಎಂಬ ಹೊಸ ವಂಚನೆಯ ಮೂಲಕ ಇಬ್ಬರು ಬಾಲ್ಯ ಸ್ನೇಹಿತೆಯರನ್ನ ವಿವಸ್ತ್ರಗೊಳಿಸಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಮನಿಲಾಂಡರಿಂಗ್ ಆರೋಪದ ನೆಪದಲ್ಲಿ ವಿಡಿಯೋ ಕರೆ ಮಾಡಿ ಸೈಬರ್ ವಂಚಕರು, ಬಳಿಕ ದೈಹಿಕ ತಪಾಸಣೆ ನೆಪದಲ್ಲಿ ಮಹಿಳೆಯರಿಬ್ಬರ ವಿವಸ್ತ್ರಗೊಳಿಸಿ ಕಿರುಕುಳ ನೀಡಿದ್ದಾರೆ. ಸತತ 9 ಗಂಟೆಗಳ ಕಾಲ ವಿಡಿಯೋ ಕರೆಯಲ್ಲಿ ವಿವಸ್ತ್ರಗೊಳಿಸಿ, ಕಿರುಕುಳ ನೀಡಿ, 58 ಸಾವಿರ ರೂಪಾಯಿ ಸುಲಿಗೆ ಮಾಡಿದ್ದಾರೆ.
ಪ್ರಕರಣ ಸಂಬಂಧ ಬೆಂಗಳೂರು ಪೂರ್ವ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಡಿಜಿಟಲ್ ಅರೆಸ್ಟ್ ಎಂದರೇನು?
ಡಿಜಿಟಲ್ ಅರೆಸ್ಟ್ ಎಂಬುದು ಸೈಬರ್ ವಂಚಕರು ತಮ್ಮ ಬಲೆಗೆ ಬೀಳುವವರನ್ನು ಭಯಭೀತಗೊಳಿಸಿ, ದೈಹಿಕವಾಗಿ ಬಂಧಿಸದೆಯೇ ಆನ್‌ಲೈನ್‌ನಲ್ಲಿ 'ಗೃಹಬಂಧನ'ದಂತಹ ಸ್ಥಿತಿಗೆ ತಳ್ಳುವ ಒಂದು ತಂತ್ರ. ಈ ವಂಚನೆಯಲ್ಲಿ, ವಂಚಕರು ತಾವು ಪೊಲೀಸ್ ಅಧಿಕಾರಿಗಳು, ಸಿಬಿಐ, ಇಡಿ ಅಥವಾ ಇತರ ಕಾನೂನು ಜಾರಿ ಸಂಸ್ಥೆಯ ಅಧಿಕಾರಿಗಳೆಂದು ಹೇಳಿಕೊಂಡು ಫೋನ್ ಕರೆ, ವಿಡಿಯೋ ಕರೆ, ಅಥವಾ ಸಂದೇಶಗಳ ಮೂಲಕ ಜನರನ್ನು ಸಂಪರ್ಕಿಸುತ್ತಾರೆ. ಇವರು ಮುಗ್ಧ ವ್ಯಕ್ತಿಗಳಿಗೆ 'ತಾವು ಮನಿಲಾಂಡರಿಂಗ್, ಡ್ರಗ್, ಅಥವಾ ಇತರ ಗಂಭೀರ ಆರೋಪಗಳಲ್ಲಿ ಸಿಲುಕಿರುವುದಾಗಿ ಭಯ ಬೀಳಿಸುತ್ತಾರೆ. ಬಳಿಕ 'ದೈಹಿಕ ತಪಾಸಣೆ' ನೆಪದಲ್ಲಿ ಮಹಿಳೆಯರನ್ನು ವಿಡಿಯೋ ಕರೆಯಲ್ಲಿ ವಿವಸ್ತ್ರಗೊಳಿಸಿ, ಆ ವಿಡಿಯೋ ದೃಶ್ಯಗಳನ್ನು ರೆಕಾರ್ಡ್ ಮಾಡಿ, ಹಣಕ್ಕಾಗಿ ಬೇಡಿಕೆ ಇಡುತ್ತಾರೆ. ಈಗಿನ ಪ್ರಕರಣದಲ್ಲಿ ಇದೇ ರೀತಿ ಆಗಿದೆ. ಬಾಲ್ಯ ಸ್ನೇಹಿತರನ್ನು ವಿವಸ್ತ್ರಗೊಳಿಸಿ 58 ಸಾವಿರ ರೂಪಾಯಿ ಪಡೆದ ನಂತರವೂ, ಮತ್ತಷ್ಟು ಹಣಕ್ಕಾಗಿ ಕಿರುಕುಳ ನೀಡಿದ್ದಾರೆ.
ಡಿಜಿಟಲ್ ಅರೆಸ್ಟ್ ಹೇಗೆ ನಡೆಯುತ್ತದೆ?
ಆರಂಭಿಕ ಸಂಪರ್ಕ: ವಂಚಕರು ಫೋನ್ ಕರೆ, ವಾಟ್ಸಾಪ್, ಅಥವಾ ವಿಡಿಯೋ ಕರೆಯ ಮೂಲಕ ಸಂಪರ್ಕಿಸುತ್ತಾರೆ. ತಾವು ಕಾನೂನು ಜಾರಿ ಸಂಸ್ಥೆಯಿಂದ ಬಂದವರೆಂದು, ನಕಲಿ ಗುರುತಿನ ಚೀಟಿಗಳು ಅಥವಾ ದಾಖಲೆಗಳನ್ನು ತೋರಿಸುತ್ತಾರೆ.
ಭಯ ತೋರಿಸುವಿಕೆ: ವ್ಯಕ್ತಿಗಳ ಬ್ಯಾಂಕ್ ಖಾತೆ, ಆಧಾರ್, ಅಥವಾ ಇತರ ವೈಯಕ್ತಿಕ ಮಾಹಿತಿಯನ್ನು ದುರುಪಯೋಗ ಮಾಡಿರುವುದಾಗಿ ಆರೋಪಿಸಿ, ತನಿಖೆಗೆ ಸಹಕರಿಸದಿದ್ದರೆ ಬಂಧನವಾಗುವುದೆಂದು ಭಯಭೀತಗೊಳಿಸುತ್ತಾರೆ.
ವಿಡಿಯೋ ಕರೆಯಲ್ಲಿ ಕಿರುಕುಳ: 'ತನಿಖೆ'ಯ ಭಾಗವಾಗಿ ವಿಡಿಯೋ ಕರೆಯಲ್ಲಿ ವಿವಸ್ತ್ರಗೊಳಿಸುವಂತೆ ಒತ್ತಾಯಿಸುತ್ತಾರೆ. ಈ ದೃಶ್ಯಗಳನ್ನು ರೆಕಾರ್ಡ್ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುವ ಭಯ ತೋರಿಸಿ ಹಣಕ್ಕೆ ಬೇಡಿಕೆ ಇಡುತ್ತಾರೆ.
ಹಣ ವರ್ಗಾವಣೆ: UPI, ಬ್ಯಾಂಕ್ ವರ್ಗಾವಣೆ, ಅಥವಾ ಕ್ರಿಪ್ಟೋಕರೆನ್ಸಿಯ ಮೂಲಕ ಹಣವನ್ನು ಕಳುಹಿಸುವಂತೆ ಒತ್ತಾಯಿಸುತ್ತಾರೆ.
ಡಿಜಿಟಲ್ ಅರೆಸ್ಟ್ ತಪ್ಪಿಸಲು ಏನು ಮಾಡಬೇಕು?
ನಿಮ್ಮ ಸಾಧನಗಳಲ್ಲಿ ಆಂಟಿವೈರಸ್ ಸಾಫ್ಟ್‌ವೇರ್ ಬಳಸಿ, ಅನಾಮಧೇಯ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ, ಮತ್ತು ಡಿಜಿಟಲ್ ಭದ್ರತೆಯ ಬಗ್ಗೆ ಅರಿವು ಮೂಡಿಸಿಕೊಳ್ಳಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ