
ಬೆಂಗಳೂರು (ಮೇ 13): ಒಬ್ಬ ವ್ಯಕ್ತಿಯ ನಂಬಿಕೆಯನ್ನು ಸಂಪೂರ್ಣವಾಗಿ ನಾಶಮಾಡುವಂತ ಕೃತ್ಯಕ್ಕೆ ಕೈ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಳೆದ 10 ವರ್ಷಗಳಿಂದ ತನ್ನ ಬಳಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ರಾಜೇಶ್ ಎಂಬಾತ, ನಂಬಿಕೆಯನ್ನು ದುರುಪಯೋಗ ಮಾಡಿಕೊಂಡು ಮಾಲೀಕ ತೋಟ ಪ್ರಸಾದ್ ಅವರ 1.51 ಕೋಟಿ ರೂಪಾಯಿಯನ್ನು ಎಗರಿಸಿದ್ದಾನೆ. ವೈಯಾಲಿಕಾವಲ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ 1.48 ಕೋಟಿ ನಗದು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಹಣವನ್ನೇ ಎಗರಿಸಿದ ನಂಬಿಕಸ್ಥ ಡ್ರೈವರ್: ತೋಟ ಪ್ರಸಾದ್ ಅವರು ಚಾರ್ಟೆರ್ಡ್ ಅಕೌಂಟೆಂಟ್ ಆಗಿದ್ದು, ಬೆಂಗಳೂರಿನ ಕೊದಂಡರಾಮಪುರದಲ್ಲಿರುವ ತಮ್ಮ ಕಚೇರಿಯಿಂದ ಏಪ್ರಿಲ್ 6ರಂದು ಬ್ಯಾಂಕ್‌ನಲ್ಲಿ ಠೇವಣಿ ಮಾಡಲು 1.51 ಕೋಟಿ ರೂ. ನಗದು ಡ್ರೈವರ್ ರಾಜೇಶ್ ಗೆ ನೀಡಿದ್ದರು. ಈ ಹಣವನ್ನು ನೀಡಿದ ಬಳಿಕ, ರಾಜೇಶ್ ತನ್ನ ಕಾರನ್ನು ಪಾರ್ಕ್ ಮಾಡುವ ನೆಪದಲ್ಲಿ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದನು. ಆಂಧ್ರಪ್ರದೇಶದ ಗುಂಟೂರಿನ ಮೂಲ ಹೊಂದಿರುವ ರಾಜೇಶ್, ಪರಾರಿಯಾದ ಬಳಿಕ ಹಣವನ್ನು ತನ್ನ ಮನೆಯಲ್ಲಿಟ್ಟುಕೊಂಡು ಸುಮಾರು ₹2.5 ಲಕ್ಷ ಖರ್ಚು ಮಾಡಿಕೊಂಡಿದ್ದಾನೆ. ಪೊಲೀಸರು ತಕ್ಷಣವೇ ತನಿಖೆ ಆರಂಭಿಸಿ, ಆತನನ್ನು ಪತ್ತೆಹಚ್ಚಿ ಬಂಧಿಸಿ ₹1.48 ಕೋಟಿ ನಗದು ವಶಪಡಿಸಿಕೊಂಡಿದ್ದಾರೆ.
ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು: ವೈಯಾಲಿಕಾವಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರಿಸುತ್ತಿದ್ದಾರೆ. ಕಳೆದ ಒಂದು ದಶಕದಿಂದ ತಮ್ಮ ಬಳಿ ಕೆಲಸ ಮಾಡುತ್ತಿದ್ದ ಡ್ರೈವರ್‌ನಿಂದ ಈ ರೀತಿ ದ್ರೋಹ ನಡೆಯುವುದು ತೋಟ ಪ್ರಸಾದ್ ಅವರ ನಂಬಿಕೆಗೆ ಅಘಾತವಾಗಿದೆ. ಕೆಲಸದ ಸ್ಥಳದಲ್ಲಿ ನಂಬಿಕೆ, ಪ್ರಾಮಾಣಿಕತೆ ಎಷ್ಟೋ ತೋರಿಸಿದರೂ ಅವರ ಮೇಲೆ ಒಂದು ಕಣ್ಣಿಟ್ಟು ನಿಗಾವಹಿಸುವುದು ಅಗತ್ಯವಾಗಿದೆ. ಇಲ್ಲಿ ಮಾಲೀಕ ಕೋಟಿಗಟ್ಟಲೆ ಹಣವನ್ನು ಒಬ್ಬ ಸಾಮಾನ್ಯ ಡ್ರೈವರ್ ಕೈಗೆ ಕೊಟ್ಟು ವ್ಯವಹಾರ ಮಾಡುವಂತೆ ಕೊಟ್ಟಾಗ ಹೀಗೆ ಹಣ ಕದ್ದು ಪರಾರಿಯಾಗಿ ಇದೀಗ ಜೈಲು ಕಂಬಿ ಎಣಿಸುವಂತಾಗಿದೆ.
ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ ವಿದೇಶಿ ಪ್ರಜೆಯೊಬ್ಬರಿಂದ ಮಚ್ಚು ತೋರಿಸಿ ಹಣ, ಬೈಕ್, ಬ್ಯಾಗ್ ಹಾಗೂ ಪಾಸ್‌ಪೋರ್ಟ್ ದೋಚಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಏಪ್ರಿಲ್ 16ರಂದು ಈ ಘಟನೆ ಭದ್ರಪ್ಪ ಲೇಔಟ್ ಬಳಿ ನಡೆದಿದ್ದು, ಸಂತ್ರಸ್ತನು ಕ್ಯಾಮೆರೂನ್ ಮೂಲದ ನಾಗರಿಕನಾಗಿದ್ದಾನೆ. ರಿಜ್ವಾನ್ ಪಾಷಾ (25) ಹಾಗೂ ಕೃತಿಕ್ ಪ್ರೀತಮ್ (25) ಬಂಧಿತ ಆರೋಪಿಗಳಾಗಿದ್ದಾರೆ. ಈ ಇಬ್ಬರೂ ಬೆಂಗಳೂರಿನ ನಿವಾಸಿಗಳಾಗಿದ್ದಾರೆ. ಈ ಇಬ್ಬರು ಆರೋಪಿಗಳು ಪ್ಯಾಟ್ರಿಸ್ ಕ್ಯಾಂಡೆಮ್ ಎಂಬ ಕ್ಯಾಮೆರೂನ್ ದೇಶದ ಪ್ರಜೆ ಮೇಲೆ ದಾಳಿ ಮಾಡಿ ಹಣವನ್ನು ಕಿತ್ತುಕೊಂಡು ಹೋಗಿದ್ದರು.
ಘಟನೆಯ ವಿವರ: ಪ್ಯಾಟ್ರಿಸ್ ಕ್ಯಾಂಡೆಮ್ ಅವರು ತಮ್ಮ ಬ್ಯಾಗ್‌ನಲ್ಲಿ ಹಣ ಇಟ್ಟುಕೊಂಡು ಹೊರಟಿದ್ದ ವೇಳೆ, ಆರೋಪಿಗಳು ಮಚ್ಚು ತೋರಿಸಿ ಆತನ ಹೋಂಡಾ ಆ್ಯಕ್ಟೀವಾ ಬೈಕ್ ಕಿತ್ತುಕೊಂಡು ಪರಾರಿಯಾಗಿದ್ದರು. ಮಾತ್ರವಲ್ಲದೆ, ಹಿಂಬದಿಯಿಂದ ಬಂದು ಆತನ ಬ್ಯಾಗ್‌ನ್ನೂ ದೋಚಿ ಆತನ ಪಾಸ್‌ಪೋರ್ಟ್ ಮತ್ತು ಹಣ ದೋಚಿದ್ದರು. ಕೊಡಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇವರಿಂದ ಕೃತ್ಯಕ್ಕೆ ಬಳಸಿದ ಟಿವಿಎಸ್ ಜುಪಿಟರ್ ಬೈಕ್, ದೋಚಿದ ಆ್ಯಕ್ಟೀವಾ ಬೈಕ್, ವಿದೇಶಿ ನಾಗರಿಕನ ಪಾಸ್‌ಪೋರ್ಟ್ ಮತ್ತು ₹86,000 ನಗದು ವಶಪಡಿಸಿಕೊಳ್ಳಲಾಗಿದೆ. ಹಣವನ್ನು ವಿದೇಶಿ ಪ್ರಜೆಗೆ ಒಪ್ಪಿಸಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ