*ಅತ್ತೆಯಲ್ಲಿ ತನಗೆ ಗೌರವವಿಲ್ಲ ಎಂದು ಕ್ರುದ್ಧಗೊಂಡಿದ್ದ ಸುನೀಲ್
*ಬಂಡೆನಗರದಲ್ಲಿ ಘಟನೆ: ಜನ್ಮದಿನದಂದೇ ಚಾಕು ಇರಿದ ಹತ್ಯೆಗೆ ಯತ್ನ
ಬೆಂಗಳೂರು (ಜ. 18): ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರಿಗೆ ಅವರ ಹುಟ್ಟುಹಬ್ಬದ ದಿನವೇ (Birthday) ಚಾಕುವಿನಿಂದ ಇರಿದು ಹತ್ಯೆಗೆ (stabbing) ಯತ್ನಿಸಿದ್ದ ಆರೋಪಿಯನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು (Byappanahalli Police) ಬಂಧಿಸಿದ್ದಾರೆ. ಬೈಯಪ್ಪನಹಳ್ಳಿಯ ಬಂಡೆನಗರ ನಿವಾಸಿ ಸುನೀಲ್(32) ಬಂಧಿತ. ಆರೋಪಿಯು ಜ.14ರಂದು ಪತ್ನಿಯ ಸಹೋದರಿಯ ಪತಿ ರಾಕೇಶ್ ಹೊಟ್ಟೆಗೆ ಚಾಕುನಿಂದ ಇರಿದು ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಪೊಲೀಸರು ತಿಳಿಸಿದ್ದಾರೆ.
ಆರೋಪಿ ಕೆಲ ವರ್ಷಗಳ ಹಿಂದೆ ಸುಶ್ಮಿತಾ ಎಂಬಾಕೆಯನ್ನು ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸುಶ್ಮಿತಾ ಸಹೋದರಿ ಜ್ಯೋತಿಕಾ ಒಂದು ವರ್ಷದ ಹಿಂದೆಯಷ್ಟೇ ರಾಕೇಶ್ ಅವರನ್ನು ಮದುವೆಯಾಗಿದ್ದಾರೆ. ಸುನೀಲ್‌ನ ಪಕ್ಕದ ಮನೆಯಲ್ಲಿ ಜ್ಯೋತಿಕಾ, ತಾಯಿ ಹಾಗೂ ರಾಕೇಶ್ ನೆಲೆಸಿದ್ದಾರೆ. ಈ ನಡುವೆ ಆರೋಪಿ ಸುನೀಲ್‌ಗೆ ಅತ್ತೆ ಮನೆಯಲ್ಲಿ ಹೆಚ್ಚಿನ ಗೌರವ ಸಿಗುತ್ತಿರಲಿಲ್ಲ. ಈ ವಿಚಾರವಾಗಿ ಸುನೀಲ್ ಆಗಾಗ ಜಗಳ ಮಾಡುತ್ತಿದ್ದ ಎನ್ನಲಾಗಿದೆ.
ಇದನ್ನೂ ಓದಿ: Woman Murder: ಸಾಕಷ್ಟು ಆಸ್ತಿ ಮಾಡಿ ಗಂಡ ಹೋಗಿದ್ದ.. ಅದೊಂದು ಕೆಲಸ ಮಾಡಿ ಹೆಣವಾದಳು!
ಜನ್ಮದಿನದಂದೇ ಚಾಕು ಇರಿದ: ರಾಕೇಶ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಜ.14ರಂದು ಸಂಬಂಧಿಕರು ಜ್ಯೋತಿಕಾ ಮನೆಯಲ್ಲಿ ಸೇರಿದ್ದರು. ಅಂದು ರಾತ್ರಿ 10ರ ಸುಮಾರಿಗೆ ರಾಕೇಶ್ ಮನೆ ಬಳಿ ನಡೆದುಕೊಂಡು ಬರುವಾಗ, ಆರೋಪಿ ಸುನೀಲ್ ಏಕಾಏಕಿ ರಾಕೇಶ್ ಮೇಲೆ ಹಲ್ಲೆ ಮಾಡಿದ್ದ. ಈ ವೇಳೆ ಸ್ಥಳೀಯರು ಜಗಳ ಬಿಡಿಸಿ ಬುದ್ಧಿ ಹೇಳಿ ಮನೆಗೆ ಕಳುಹಿಸಿದ್ದರು. ಬಳಿಕ ರಾಕೇಶ್ ಮನೆಯಲ್ಲಿ ಕೇಕ್ ಕತ್ತರಿಸುವಾಗ ಸ್ನೇಹಿತ ಕುಳ್ಳ ಬಾಬು ಎಂಬುವವನ ಜತೆಗೆ ಮನೆಗೆ ನುಗ್ಗಿದ ಸುನೀಲ್, ರಾಕೇಶ್ ಜತೆ ಮತ್ತೆ ಜಗಳ ತೆಗೆದಿದ್ದಾನೆ.
ಈ ವೇಳೆ ಕುಳ್ಳ ಬಾಬು ಎಂಬಾತ ರಾಕೇಶ್‌ನ ತಲೆಗೆ ಕೈಯಿಂದ ಹಲ್ಲೆ ಮಾಡಿದ್ದಾನೆ. ಇದೇ ವೇಳೆ ಆರೋಪಿ ಸುನೀಲ್ ಚಾಕು ತೆಗೆದು ರಾಕೇಶ್‌ನ ಹೊಟ್ಟೆಗೆ ಇರಿದಿದ್ದಾನೆ. ಬಳಿಕ ಕುಳ್ಳ ಬಾಬು ಹಾಗೂ ಸುನೀಲ್ ಇಬ್ಬರು ಮನೆಯಿಂದ ಪರಾರಿಯಾಗಿದ್ದರು. ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ರಾಕೇಶ್‌ನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದು, ಚಿಕಿತ್ಸೆಗೆ ಕೊಡಿಸಲಾಗಿದೆ. ಸದ್ಯ ರಾಕೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Suicide Case: ಫೈನಾನ್ಸಿಯರ್ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ: ಕಾರಣ ನಿಗೂಢ?
‘ಅತ್ತೆ ಮನೆಗೆ ಬರದಂತೆ ಎಚ್ಚರಿಕೆ ನೀಡಿದ್ದೆ’: ರಾಕೇಶ್ ಮತ್ತು ಜ್ಯೋತಿಕಾ ಪ್ರೀತಿಸುತ್ತಿದ್ದು, ಇನ್ನೂ ವಿವಾಹವಾಗಿಲ್ಲ. ಆದರೆ, ರಾಕೇಶ್ ಪದೇ ಪದೇ ಮನೆಗೆ ಬರುತ್ತಿದ್ದ. ನನ್ನ ಪತ್ನಿ ಸುಶ್ಮಿತಾ ಸಹ ಜ್ಯೋತಿಕಾ ಮನೆಗೆ ಹೋಗುತ್ತಿದ್ದಳು. ಅತ್ತೆ ಮನೆಗೆ ಬರದಂತೆ ಹಲವು ಬಾರಿ ರಾಕೇಶ್‌ಗೆ ಎಚ್ಚರಿಕೆ ನೀಡಿದ್ದೆ. ಆದರೂ ಆತ ಮನೆಗೆ ಬರುತ್ತಿದ್ದರಿಂದ ಕೋಪಗೊಂಡು ಎಚ್ಚರಿಕೆ ನೀಡಲು ಆತನಿಗೆ ಚಾಕುವಿನಿಂದ ಇರಿದೆ ಎಂದು ಆರೋಪಿಯು ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.